ಮಲ್ಲಿಕಾರ್ಜುನ್ ಖರ್ಗೆ ಭೇಟಿ ಮಾಡಿದ ಡಿ ಕೆ ಶಿವಕುಮಾರ್: ಚರ್ಚೆಯಾಗಿದ್ದೇನು?
ಬೆಂಗಳೂರು, ಆಗಸ್ಟ್ 19: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹಲವು ಸಂಕಷ್ಟಗಳು ಎದುರಾಗಿದೆ. ಮುಡಾ ಹಾಗೂ ವಾಲ್ಮೀಕಿ ಹಗರಣಗಳು ಸರ್ಕಾರಕ್ಕೆ ಕಂಟಕವನ್ನ ತಂದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸುತ್ತಿವೆ. ಈ ನಡುವೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಜೊತೆಗೆ ಸುದೀರ್ಘವಾಗಿ ಮಾತುಕತೆ ನಡೆಸಿದ ಬಳಿಕ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಹಾಗೂ ಸಂದರ್ಭದ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ವಿವರಣೆ ನೀಡಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ನಡೆಯ ವಿರುದ್ಧ ಸೋಮವಾರ (ಆಗಸ್ಟ್ 19) ರಾಜ್ಯ ವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರಪತಿಗಳಿಗೆ ಪ್ರತಿಭಟನೆಯನ್ನು ದಾಖಲಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಪ್ರಕರಣ ಅಲ್ಲದಿದ್ದರೂ ಸಹ ಇದನ್ನು ಬೇಕಂತಲೇ ಎತ್ತಿ ಕಟ್ಟಲಾಗುತ್ತಿದೆ. ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ. ಇದರ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ಮುಖಂಡರಿಗೆ ತಿಳಿಸಿದ್ದೇವೆ. ಕಿಡಿಗೇಡಿಗಳು ಒಳನುಸುಳಿ ಗಲಭೆ ಎಬ್ಬಿಸಿ ಕಲ್ಲು ಎಸೆಯುವ ಕೆಲಸ ಮಾಡಬಹುದು ಇದರ ಬಗ್ಗೆಯೂ ಎಚ್ಚರದಿಂದ ಇರಿ ಎಂದು ಸೂಚನೆ ನೀಡಿದ್ದೇವೆ. ನಮ್ಮದು ಗಾಂಧಿ ಮಾರ್ಗದ ಶಾಂತಿಯುತ ಪ್ರತಿಭಟನೆ ಎಂದು ಹೇಳಿದರು.
ತುಂಗಭದ್ರಾ ಗೇಟ್ ಅಳವಡಿಕೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಗೇಟ್ ಅಳವಡಿಕೆ ಯಶಸ್ವಿಯಾಗಿ ನೆರವೇರಿದೆ. ಅವಘಡ ಸಂಭವಿಸಿದಾಗ ಕಾರಜೋಳ, ಬೊಮ್ಮಾಯಿ, ವಿಜಯೇಂದ್ರ, ಅಶೋಕ್ ಹಾಗೂ ಕುಮಾರಸ್ವಾಮಿ ಸೇರಿದಂತೆ ಅನೇಕರು ಟೀಕೆಗಳನ್ನು ಮಾಡಿದ್ದರು. ಅವರ ಟೀಕೆಗಳು ಸತ್ತು ಹೋದವು, ಆದರೆ ನಮ್ಮ ಕೆಲಸ ಮಾತ್ರ ಉಳಿಯಿತು. ಅದಕ್ಕೆ ನಾನು ಯಾವಾಗಲು ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳುತ್ತಿರುತ್ತೇನೆ. ಅಣೆಕಟ್ಟಿನ ಗೇಟ್ ದುರಸ್ತಿ ಮಾಡುವಲ್ಲಿ ಶ್ರಮಿಸಿದ ಎಲ್ಲರಿಗೂ ಸರ್ಕಾರ ಗೌರವ ಸಲ್ಲಿಸಲಿದೆ ಎಂದು ಹೇಳಿದರು.












Click it and Unblock the Notifications