SM Krishna Funeral: ಕಾವೇರಿ ತೀರದ ಕನಸುಗಾರ ಹೃದಯದಲ್ಲಿ ಸದಾ ಜೀವಂತ, ಡಿಕೆಶಿ ಭಾವುಕ
ಮಾಜಿ ಸಿಎಂ ಹಾಗೂ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ನೆರವೇರಿದೆ. ಈ ಬಗ್ಗೆ ಅವರ ಸಂಬಂಧಿಯೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾವುಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪಂಚಭೂತಗಳಲ್ಲಿ ಲೀನವಾದ ಕನಸುಗಾರ ಎಂದು ಡಿಕೆ ಶಿವಕುಮಾರ್ ಭಾವುಕರಾಗಿದ್ದಾರೆ.
ಮದ್ದೂರಿನ ಸೋಮನಹಳ್ಳಿಯಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನೆರವೇರಿತು. ಮಾನ್ಯ ಮುಖ್ಯಮಂತ್ರಿಗಳು, ನಾನು, ಸಂಪುಟ ಸಚಿವರು, ಶಾಸಕರು ಈ ವೇಳೆ ಉಪಸ್ಥಿತರಿದ್ದು ಕಾವೇರಿ ತೀರದ ಕನಸುಗಾರನಿಗೆ ಅಂತಿಮ ಗೌರವ ಸಲ್ಲಿಸಿದೆವು. ತಂದೆ ಸಮಾನರು, ನನ್ನ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ದೈಹಿಕವಾಗಿ ಇಲ್ಲವಾದರೂ ಸದಾ ಒಳ್ಳೆಯದನ್ನು ಬಯಸುವವರ ಹೃದಯದಲ್ಲಿ ಜೀವಂತವಾಗಿರುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಎಸ್.ಎಂ.ಕೃಷ್ಣ ಅವರು ನನ್ನ ರಾಜಕೀಯ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಅವರ ನನ್ನ ಸಂಬಂಧ ತಂದೆ, ಮಗನಂತೆ. ನನ್ನ ಪ್ರತೀ ಹೆಜ್ಜೆಯಲ್ಲೂ ಅವರ ಮಾರ್ಗದರ್ಶನವಿದೆ. ಕರ್ನಾಟಕದ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿದ ಅವರು ಬೆಂಗಳೂರನ್ನು ಐಟಿ ಸಿಟಿಯಾಗಿಸಲು ಅವಿರತವಾಗಿ ಶ್ರಮಿಸಿದರು. ಅಂತಹ ಧೀಮಂತ ನಾಯಕನ ಅಗಲಿಕೆ ನಮಗೆ ತುಂಬಲಾರದ ನಷ್ಟ. ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಾ, ಅವರ ಬದುಕು ಹಾಗೂ ಸಾಧನೆಗಳು ನಮಗೆಲ್ಲ ಆದರ್ಶಪ್ರಾಯ ಎಂದು ಡಿಸಿಎಂ ಹೇಳಿದ್ದರು.
ನನ್ನ ರಾಜಕೀಯ ಬೆಳವಣಿಗೆಯ ಪ್ರತಿ ಹೆಜ್ಜೆಯಲ್ಲಿ ಮಾರ್ಗದರ್ಶಕರಾಗಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರು ನಿಂತರು. ಕಾಲಾನಂತರ ನಾವು ಒಂದು ಕುಟುಂಬವಾಗುತ್ತಿದ್ದಂತೆ ನಮ್ಮ ನಡುವಿನ ಬಂಧವು ಮತ್ತಷ್ಟು ಗಟ್ಟಿಯಾಯಿತು ಎಂದು ಅವರ ಜೊತೆ ಪಾಲ್ಗೊಂಡ ಕಾರ್ಯಕ್ರಮವೊಂದರ ಚಿತ್ರವನ್ನು ಹಂಚಿಕೊಂಡಿದ್ದರು.

ಸಿಎಂ ಸಿದ್ದರಾಮಯ್ಯ ಅಂತಿಮ ನಮನ: ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಗಲಿದ ಅಜಾತಶತ್ರುವಿಗೆ ಅಂತಿಮ ನಮನ ಸಲ್ಲಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಹುಶಃ ನಾನು ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಾ ವೀರ ಮಕ್ಕಳ ಕುಣಿತ ಕಲಿಯುವ ಹೊತ್ತಲ್ಲೇ ಎಸ್.ಎಂ.ಕೃಷ್ಣ ಅವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕೃಷ್ಣ ಅವರ ವೈಶಿಷ್ಟ್ಯವೆಂದರೆ ವಿದೇಶದಲ್ಲಿ ಶಿಕ್ಷಣ ಪಡೆದರೂ ಊರಿಗೆ ಮರಳಿ ಮಣ್ಣಿನ ಮಗನಾದರು ಎಂದು ನೆನೆದಿದ್ದಾರೆ.
ದ್ವೇಷದ ರಾಜಕಾರಣದಿಂದ ಬಹುದೂರವೇ ಇದ್ದ ಎಸ್.ಎಂ.ಕೃಷ್ಣ ಅವರೊಬ್ಬ ಸಜ್ಜನಿಕೆಯ ಜಂಟಲ್‌ಮೆನ್ ರಾಜಕಾರಣಿ. ಈ ಕಾರಣಕ್ಕಾಗಿಯೇ ಅಜಾತಶತ್ರುವಾಗಿ ನಮ್ಮ ನೆನಪುಗಳಲ್ಲಿ ಶಾಶ್ವತವಾಗಿರಲಿದ್ದಾರೆ. ಜಾಗತಿಕ ಭೂಪಟದಲ್ಲಿ ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯಾಗಿಸುವ ನಿಟ್ಟಿನಲ್ಲಿ ಎಸ್.ಎಂ. ಕೃಷ್ಣರವರ ಕೊಡುಗೆ ಅಪಾರ. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಹೀಗೆ ಎಲ್ಲವನ್ನೂ ಪ್ರತಿನಿಧಿಸಿದ್ದ, ಮುಖ್ಯಮಂತ್ರಿಯಾಗಿ, ವಿಧಾನಸಭೆಯ ಸಭಾಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಅನುಪಮ ಸೇವೆ ಸಲ್ಲಿಸಿದ್ದ ಅಪರೂಪರ ರಾಜಕಾರಣಿ ಕೃಷ್ಣ ಅವರು ಸಾರ್ವಜನಿಕ ಜೀವನದಲ್ಲಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು ನಿರ್ಗಮಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.












Click it and Unblock the Notifications