ರಾಜ್ಯ ಸರ್ಕಾರದಿಂದ ದರ್ಶಿನಿ ಯೋಜನೆ: ಏನಿದರ ಉಪಯೋಗ?
ಬೆಂಗಳೂರು, ಫೆಬ್ರವರಿ 07: ದೃಷ್ಟಿ ಸಾಮರ್ಥ್ಯವಿಲ್ಲದವರಿಗೆ ಜ್ಞಾನದ ಬೆಳಕು ನೀಡುವ ದರ್ಶಿನಿ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.
ಕಣ್ಣಿನ ದೃಷ್ಟಿ ಇಲ್ಲದವರಿಗೂ ಅರಿವು ಕೇಂದ್ರಗಳನ್ನು ಆಕರ್ಷಕವಾಗಿಸುವ ಹಾಗೂ ವ್ಯಕ್ತಿತ್ವ ವಿಕಸನದ ಚಟುವಟಿಕೆಗಳನ್ನು ನೀಡುವ ಸಂಕಲ್ಪದೊಂದಿಗೆ ಮತ್ತು ಹಲವು ಸಂಘ ಸಂಸ್ಥೆಗಳ ನೆರವಿನೊಂದಿಗೆ ದರ್ಶಿನಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಈಗಾಗಲೇ ಅರಿವು ಕೇಂದ್ರಗಳ ಸಹಾಯದಿಂದ ಹಲವು ವಿಶೇಷಚೇತನರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉದ್ಯೋಗ ಗಿಟ್ಟಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿದೆ. ಆದರೆ ಬೇರೆಲ್ಲ ವಿಶೇಷಚೇತನರಿಗಿಂತ ದೃಷ್ಟಿ ವೈಕಲ್ಯ ಹೊಂದಿರುವವರು ಓದು ಬರಹಗಳಲ್ಲಿ ತೊಡಗಿಸಿಕೊಳ್ಳುವುದು ಸವಾಲಿನ ಸಂಗತಿ.
ವಿಶೇಷವಾಗಿ ಅಂಧರ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಅಧ್ಯಯನಕ್ಕೆ ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಮತ್ತು ಯುಪಿಎಸ್ ಖರೀದಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ವಿಷಯ ಪರಿಣತರೊಂದಿಗೆ ಸಮಾಲೋಚಿಸಿ ಕೆಳಕಂಡ 8 ಸಹಾಯಕ ಉಪಕರಣಗಳನ್ನು NIEPVD (National Institute for Empowerment of Persons with Visual Disabilities) ಮೂಲಕ ಖರೀದಿಸಿ, ವಿತರಿಸಲು ಕ್ರಮವಹಿಸಲಾಗಿದೆ.

1. NIVH ಇಂಟರ್‌ಪಾಯಿಂಟ್ ಬ್ರೈಲ್ ಸ್ಲೇಟ್ ಮತ್ತು ಸ್ಟೈಲಸ್
2. ಕಾನ್‌ಕ್ಲೇವ್ ಹೆಡ್ ಪ್ಲಾಸ್ಟಿಕ್ ಸ್ಟೈಲಸ್
3. ಟ್ಯಾಕ್ಟೈಲ್ ಚೆಸ್ ಬೋರ್ಡ್ (ಇನ್‌ಕ್ಲೂಸಿವ್ ಡಿಸೈನ್)
4. ಆಡಿಯೋ ಬಾಲ್
5. ಪಜಲ್
6. ಹಾವು ಮತ್ತು ಏಣಿ
7. ಡೈಸ್ ಜೊತೆ ಪ್ಲೇಟ್
8. ಅಬಾಕಸ್
ಹೀಗೆ ಅರಿವು ಕೇಂದ್ರಗಳನ್ನು ವಿಶೇಷ ಚೇತನರ ಸ್ನೇಹಿಯಾಗಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಜ್ಞಾನ ದಾಸೋಹದ ಫಲಾನುಭವಿಯನ್ನಾಗಿಸುವುದು ನಮ್ಮ ಸಂಕಲ್ಪ. ಸರ್ಕಾರದ ಸೌಲಭ್ಯದಿಂದ ಯಾರೊಬ್ಬರೂ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಆದ್ಯತೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಹಾಯಕ ಸಾಧನಗಳನ್ನು ಪರಿಚಯಿಸಿ, ಬಳಕೆಯ ಕುರಿತು ಮಾಹಿತಿ ನೀಡಲಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.












Click it and Unblock the Notifications