Darshan Thoogudeepa: ದರ್ಶನ್ ಮಧ್ಯಂತರ ಜಾಮೀನು ತಡೆ ಕೋರಿ ಸುಪ್ರೀಂಗೆ ಮೇಲ್ಮನವಿ: ಅಚ್ಚರಿಯ ಹೇಳಿಕೆ ನೀಡಿದ ಪರಮೇಶ್ವರ್
ಬೆಂಗಳೂರು, ನವೆಂಬರ್ 13: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ದೊರೆತಿರುವ ಮಧ್ಯಂತರ ಜಾಮೀನು ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ವಿಚಾರವಾಗಿ ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಧ್ಯಂತರ ಜಾಮೀನು ತಡೆ ಕೋರಿ ಮೇಲ್ಮನವಿ ಸಲ್ಲಿಕೆಗೆ ವಿಳಂಬ ಆಗಿಲ್ಲ ಎಂದು ಪರಮೇಶ್ವರ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಪರಮೇಶ್ವರ್ಮೇಲ್ಮನವಿ ಯಾವಾಗ ಸಲ್ಲಿಸಬೇಕು ಎಂಬುದನ್ನು ಗೃಹ ಇಲಾಖೆ ಕಾರ್ಯದರ್ಶಿ ತೀರ್ಮಾನಿಸುತ್ತಾರೆ. ಮೇಲ್ಮನವಿ ಸಲ್ಲಿಸುವುದಾದರೆ ಸಲ್ಲಿಸಿ ಎಂದು ನಾನೂ ಸೂಚಿಸಿದ್ದೇನೆ. ಇಂಥ ಪ್ರಕರಣಗಳಲ್ಲಿ ಪ್ರಕ್ರಿಯೆಗಳನ್ನು ಅನುಸರಿಸಿ ಮುಂದುವರಿಯಬೇಕಾಗುತ್ತದೆ. ಮೇಲ್ಮನವಿ ಸಲ್ಲಿಕೆ ವಿಚಾರವಾಗಿ ಕಾನೂನು ಇಲಾಖೆಯಿಂದಲೂ ಮಾಹಿತಿ ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆಯಿಂದಲೂ ಕೂಡ ಪ್ರಸ್ತಾವನೆ ಬರಬೇಕು. ನಂತರವೇ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರದ್ದು ತಪ್ಪಿಲ್ಲ ಎಂಬುದು ತೀರ್ಮಾನವಾದರೆ ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳಬಹುದು. ಈ ಹಿಂದೆ ಜಾರ್ಜ್ ಅವರ ಮೇಲೆ ಆರೋಪ ಬಂದಾಗ, ತಪ್ಪಿಲ್ಲ ಎಂಬುದು ಸಾಬೀತಾದ ಬಳಿಕ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ವಾಲ್ಮೀಕಿ ನಿಗಮ ಹಗರಣದ ಪ್ರಕರಣದ ತನಿಖೆ ಮುಗಿದು, ನಾಗೇಂದ್ರ ಪಾತ್ರ ಏನು ಇಲ್ಲ ಎಂದು ತೀರ್ಮಾನ ಬಂದಾಗ ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದರು.
ಸಚಿವ ಸಂಪುಟ ಪುನರ್ ರಚನೆ ವಿಚಾರ ನನಗೆ ಗೊತ್ತಿಲ್ಲ. ಇದಕ್ಕೆ ಮುಖ್ಯಮಂತ್ರಿಯವರು ಉತ್ತರ ನೀಡಬೇಕು. ಇದು ನಮ್ಮ ಹಂತದಲ್ಲಿ ಚರ್ಚೆ ಆಗುವುದಿಲ್ಲ. ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ ಎಂದು ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.
ಮುಸ್ಲಿಂ ಸಮುದಾಯದ ಕೆಲ ಶಾಸಕರು ಮತ್ತು ಮುಖಂಡರು ಕಾಮಗಾರಿಗಳಲ್ಲಿ ಶೇ. 4ರಷ್ಡು ಮೀಸಲಾತಿ ನೀಡುವಂತೆ ಮನವಿ ಮಾಡಿದ್ದಾರೆ. ಮನವಿಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಯವರು ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದಾರೆ. ಇಲಾಖೆಯು ಪರಿಶೀಲಿಸಿದ ಬಳಿಕ ಪ್ರಸ್ತಾವನೆಯು ಸಚಿವ ಸಂಪುಟದ ಮುಂದೆ ತರಬೇಕು. ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆದ ಬಳಿಕ ಸರ್ಕಾರಿ ಆದೇಶ ಆಗಬೇಕಾಗುತ್ತದೆ. ಈವರೆಗೂ ಕ್ಯಾಬಿನೆಟ್ ಮುಂದೆ ಪ್ರಸ್ತಾವನೆ ಬಂದಿಲ್ಲ.ಇದನ್ನು ತಪ್ಪು ಗ್ರಹಿಕೆ ಮಾಡಲಾಗಿದೆ ಸ್ಪಷ್ಟಪಡಿಸಿದರು.
ಯಾವುದೇ ಸಮುದಾಯವನ್ನು ತುಷ್ಟಿಕರಣ ಮಾಡುವಂತಹ ಅಗತ್ಯವಿಲ್ಲ. ಯಾವುದೇ ಸಮುದಾಯ, ಧರ್ಮದ ಬಡವರ ಅಭಿವೃದ್ಧಿಗೆ ಒತ್ತು ನೀಡುವುದು ಸರ್ಕಾರದ ಕರ್ತವ್ಯ. ಒಂದಷ್ಟು ಸವಲತ್ತು ಕಲ್ಪಿಸಿದರೆ ಅದನ್ನು ತುಷ್ಟೀಕರಣ ಎನ್ನುವುದು ಸರಿಯಲ್ಲ ಎಂದು ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.
ವಿಧಾನಸಭೆ ಉಪ ಚುನಾವಣೆ ಮುಗಿದ ಬಳಿಕ ಒಳಮೀಸಲಾತಿಗೆ ಆಯೋಗ ರಚಿಸಲಾಗುತ್ತದೆ ಎಂದು ಈಗಾಗಲೇ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದ್ದಾರೆ. ಇಷ್ಟು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಸರಿಯಾಗಿ ಮಾಡಬೇಕಾಗುತ್ತದೆ. ಇಲ್ಲವಾದರೆ ಯಾರಾದರು ಕೋರ್ಟ್‌ಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಆಯೊಇಗ ರಚಿಸಿದರೆ ಚುನಾವಣಾ ಆಯೋಗ ಪ್ರಶ್ನಿಸುತ್ತದೆ. ಇದೇ ಕಾರಣಕ್ಕೆ ಆಯೋಗ ರಚಿಸಿಲ್ಲ. ಚುನಾವಣೆ ಮುಗಿದ ಬಳಿಕ ಆರಂಭಿಸಲಾಗುತ್ತದೆ ಎಂದರು.
ಕೋವಿಡ್ ಹಗರಣದ ನ್ಯಾ. ಮೈಕಲ್ ಡಿ.ಕುನ್ನಾ ಅವರ ವರದಿಯನ್ನು ಉಪ ಸಮಿತಿ ಸಂಪೂರ್ಣವಾಗಿ ಪರಿಶೀಲನೆ ಮಾಡಬೇಕು. ಬೆಡ್ ಖರೀದಿ, ಉಪಕರಣ, ಮೆಡಿಸಿನ್ ಮತ್ತು ಟೆಸ್ಟ್ ಕಿಟ್ ಖರೀದಿ ಹೀಗೆ ಬೇರೆಬೇರೆ ವಿಚಾರಗಳಿವೆ. ಎಲ್ಲವನ್ನು ಉಪ ಸಮಿತಿಯಲ್ಲಿ ಪರಿಶೀಲಿಸಿ, ತೀರ್ಮಾನಕ್ಕೆ ಬರುತ್ತೇವೆ. ಈವರೆಗೆ ಉಪಸಮಿತಿ ಸಭೆ ನಡೆಸಿಲ್ಲ. ಇದಕ್ಕೆ ಡಿಸಿಎಂ ಅವರು ಅಧ್ಯಕ್ಷರಿದ್ದಾರೆ. ನ್ಯಾಯಮೂರ್ತಿ ಮೈಕಲ್ ಡಿ.ಕುನ್ನಾ ಅವರು ಹೇಳಿರುವುದು ಸರಿ ಇದೆ, ಪುರಾವೆಗಳಿವೆ ಎಂಬುದಾದರೆ ಸಚಿವ ಸಂಪುಟದ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.












Click it and Unblock the Notifications