ಮಾಜಿ ಲಾಯರ್ ಸಿದ್ದರಾಮಯ್ಯ; ಟ್ವೀಟ್ ಬಾಣ ಬಿಟ್ಟ ಕರ್ನಾಟಕ ಬಿಜೆಪಿ!
ಬೆಂಗಳೂರು, ಡಿಸೆಂಬರ್ 23; ಕರ್ನಾಟಕ ಹೈಕೋರ್ಟ್ ಆದೇಶದಂತೆ ರಸ್ತೆ ಅಗಲೀಕರಣಕ್ಕಾಗಿ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿಯ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆಯನ್ನು ಡಿಸೆಂಬರ್ 21ರಂದು ಮಾಡಿದೆ. ಆದರೆ, ವಿಚಾರ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಯೂ ದರ್ಗಾ ತೆರವು ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಹುಬ್ಬಳ್ಳಿಯ ಹಜರತ್ ಷಾ ಖಾದ್ರಿ ದರ್ಗಾ ಬಹಳ ವರ್ಷಗಳಿಂದ ಇದೆ. ನಾನು ಸಿಎಂ ಆಗಿದ್ದಾಗ ದರ್ಗಾ, ದೇಗುಲ ಒಡೆಯಲು ಅವಕಾಶ ನೀಡಿಲ್ಲ" ಎಂದು ಹೇಳಿದ್ದರು.
ಶುಕ್ರವಾರ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. #CommunalCongress ಎಂಬ ಹ್ಯಾಷ್‌ಟ್ಯಾಗ್ ಬಳಕೆ ಮಾಡಿದ್ದು, ಸಿದ್ದರಾಮಯ್ಯ ವಿರುದ್ಧ ಟೀಕೆಗಳನ್ನು ಮಾಡಿದೆ. 'ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿನ ದರ್ಗಾ ಸ್ಥಳಾಂತರದ ಬಗ್ಗೆ ಸಿದ್ದರಾಮಯ್ಯನವರು ಅಬ್ಬರಿಸಿ ಬೊಬ್ಬಿರಿದಿದ್ದೆಲ್ಲವೂ ಜನರನ್ನು ನಂಬಿಸಲು ಆಡುವ ಪ್ರಜಾಪ್ರಭುತ್ವದ ನಾಟಕ' ಎಂದು ಟೀಕಿಸಿದೆ.
ಕರ್ನಾಟಕ ಬಿಜೆಪಿ ತನ್ನ ಟ್ವೀಟ್‌ನಲ್ಲಿ, 'ಅದೇ 13 ದೇವಸ್ಥಾನಗಳು ಮತ್ತು 1 ಚರ್ಚ್ ಹಾಗೂ 1 ದರ್ಗಾವನ್ನು ತೆರವುಗೊಳಿಸಲು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗುರುತಿಸಿದ್ದರು' ಎಂದು ವಿವರಣೆ ನೀಡಿದೆ.

ಬೊಮ್ಮಾಯಿ ಸರ್ಕಾರದ ಆದೇಶವಲ್ಲ
'ಈ ದರ್ಗಾ ಹುಬ್ಬಳ್ಳಿ-ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲಿತ್ತು. ರಸ್ತೆ ಅಗಲೀಕರಣಕ್ಕೆ ಭೈರಿದೇವರಕೊಪ್ಪದ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕನುಸಾರವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆಯಾಗಿದ್ದೇ ವಿನಾ ಬೊಮ್ಮಾಯಿ ಸರ್ಕಾರದ ಆದೇಶದಿಂದಲ್ಲ. ದೇವಸ್ಥಾನಗಳ ತೆರವಾದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದ ಸಿದ್ದರಾಮಯ್ಯ, ದರ್ಗಾ ತೆರವಿನ ಬಗ್ಗೆ ಎಗರಿ ಬೀಳುತ್ತಿರುವುದೇಕೆ?. ಮಾತೆತ್ತಿದರೆ ಸಂವಿಧಾನದ ಬಗ್ಗೆ ಪ್ರವಚನ ಕೊಡುವ ಸಿದ್ದರಾಮಯ್ಯನವರು ಈಗ ನ್ಯಾಯಾಲಯದ ಅದೇಶವನ್ನೇಕೆ ಪಾಲಿಸಲು ಜನರಿಗೆ ಹೇಳುತ್ತಿಲ್ಲ?. ಇದೇನಾ ಇವರ ಜಾತ್ಯಾತೀತತೆ? ಸಂವಿಧಾನ ಪ್ರೇಮ?' ಎಂದು ಕರ್ನಾಟಕ ಬಿಜೆಪಿ ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದೆ.

ಅಬ್ಬರಿಸಿ ಬೊಬ್ಬಿರಿಯುವುದಕ್ಕೆ
ಕರ್ನಾಟಿ ಬಿಜೆಪಿ ಮತ್ತೊಂದು ಟ್ವೀಟ್‌ನಲ್ಲಿ, 'ಈ ಸಿದ್ದರಾಮಯ್ಯ ಅವರು ಅಬ್ಬರಿಸಿ ಬೊಬ್ಬಿರಿಯುವುದಕ್ಕೆ ಮತ್ತೊಂದು ಗುಪ್ತ ಕಾರಣವೇ, ಹುಬ್ಬಳ್ಳಿ - ಧಾರವಾಡದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬಾರದು ಎಂಬ ದುರುದ್ದೇಶ. ಏಕೆಂದರೆ ಬೊಮ್ಮಾಯಿ ಸರ್ಕಾರ #BeyondBengaluru ಉಪಕ್ರಮದ #GlobalInvestorsMeet ವೇಳೆ ಹುಬ್ಬಳ್ಳಿ ಧಾರವಾಡಕ್ಕೆ ಭರಪೂರ ಹೂಡಿಕೆಗಳನ್ನು ತಂದಿದೆ. ಈಗ ಅದಷ್ಟೇ ಅಲ್ಲದೇ ಇನ್ನೇನು ಬರುವ ಮಾರ್ಚಿನಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವೆ #VandeBharatExpress ರೈಲು ಸಂಚರಿಸಲಿದೆ. ಇಷ್ಟೆಲ್ಲ ಅಭಿವೃದ್ಧಿ ಒಂದೇ ಸಲ ಬಿಜೆಪಿ ಸರ್ಕಾರದಿಂದಲೇ ಆಗಿಬಿಟ್ಟರೆ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳು ಮತಭಿಕ್ಷೆ ಕೇಳಲು ಹೋಗುವುದು ಹೇಳಿ?' ಎಂದು ಕೇಳಿದೆ.

ಮಾಜಿ ಲಾಯರ್ ಸಿದ್ದರಾಮಯ್ಯ
'ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಗೆದ್ದಿದ್ದೇ ಕೋಮುವಾದ ಮತ್ತು ಬಡತನದ ಕಾರಣದಿಂದ. ಈಗ ಬಿಜೆಪಿ ಸರ್ಕಾರದಲ್ಲಿ ಕೋಮುವಾದಕ್ಕೂ ಆಸ್ಪದವಿಲ್ಲ. ಬಡತನ ನಿವಾರಣೆ ಕ್ರಮದ ಜತೆಗೆ ಅಭಿವೃದ್ಧಿಯನ್ನೂ ನಮ್ಮ ರಾಜ್ಯ ಕಾಣುತ್ತಿದೆ. ರಾಜ್ಯವೇ ರಾಮರಾಜ್ಯವಾದರೆ, ಕಾಂಗ್ರೆಸ್ ಎಂಬ ರಾವಣರಿಗೆ ಜನಮನ್ನಣೆ ಸಿಗುವುದೇ?. ಸಮಸ್ಯೆಯನ್ನು ಜೀವಂತವಾಗಿಡಬೇಕು ಹಾಗೂ ಅದನ್ನು ನಿವಾರಿಸುವುದು ಕಾಂಗ್ರಸ್ಸೇ ಎಂಬ ಭ್ರಮೆ ಹುಟ್ಟಿಸಬೇಕು ಎಂಬುದು ಕಾಂಗ್ರೆಸ್‌ನ ಮೂಲ ಮಂತ್ರ. ಇದಕ್ಕೆ ಸಂವಿಧಾನ, ನ್ಯಾಯಾಲಯವೇ ಅಡ್ಡಬಂದರೂ ಅದನ್ನು ದಾಟಿ ಹೋಗುತ್ತೇವೆ ಎಂಬುದು ಮಾಜಿ ಲಾಯರ್ ಸಿದ್ದರಾಮಯ್ಯನವರ ಮಾತಿನಲ್ಲಿ ಗೋಚರಿಸುತ್ತಿದೆ' ಎಂದು ಬಿಜೆಪಿ ಟ್ವೀಟ್‌ನಲ್ಲಿ ಹೇಳಿದೆ.

ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದು
ಹುಬ್ಬಳ್ಳಿಯ ಹಜರತ್ ಷಾ ಖಾದ್ರಿ ದರ್ಗಾ ತೆರವು ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಪ್ರಸ್ತಾಪಿಸಿದ್ದರು. ಆಗ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಈ ವಿಚಾರದ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ನಾನು ಮುಖ್ಯಮಂತ್ರಿ ಆಗಿದ್ದಾಗ ದರ್ಗಾ, ದೇಗುಲ ಒಡೆಯಲು ಅವಕಾಶ ನೀಡಿಲ್ಲ. ಪಕ್ಕದ ಜಾಗ ಪಡೆದು ರಸ್ತೆ ಮಾಡುವಂತೆ ಸೂಚಿಸಿದ್ದೆ. ಭೈರಿದೇವರಕೊಪ್ಪ ದರ್ಗಾ ಸರ್ವಧರ್ಮ ಸಮನ್ವಯ ಇದ್ದಂತಹ ದರ್ಗಾ. ಈ ದರ್ಗಾಕ್ಕೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಮರು ಹೋಗುತ್ತಿದ್ದರು. ದರ್ಗಾ ತೆರವಿನಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತದೆ. ದೇಗುಲ, ದರ್ಗಾ ಒಡೆಯಬೇಕು ಅಂತಿದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು" ಎಂದು ಹೇಳಿದ್ದರು.












Click it and Unblock the Notifications