ಸರ್ಕಾರಿ ನೌಕರರಿಗೆ ಬಾಕಿ ತುಟ್ಟಿಭತ್ಯೆ ಬಗ್ಗೆ ಮಾಹಿತಿ
ಬೆಂಗಳೂರು, ಏಪ್ರಿಲ್ 25; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಮೇ 10ರ ಬುಧವಾರ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗ ಮಾರ್ಚ್ 29ರಂದು ವೇಳಾಪಟ್ಟಿ ಘೋಷಣೆ ಮಾಡಿದ ತಕ್ಷಣ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರಿ ನೌಕರರಿಗೆ ಶೇ 4ರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಿ ಆದೇಶ ಹೊರಡಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದರು.

ಈಗ ಅವರು ಜನವರಿ 2023ರಿಂದ ಬಾಕಿ ಇರುವ ತುಟ್ಟಿಭತ್ಯೆ ಬಗ್ಗೆ ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ಆದ್ಯ ಗಮನಕ್ಕೆ ಎಂದು ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರಿ ನೌಕರರಿಗೂ ಶೇ. 4ರಷ್ಟು ತುಟ್ಟಿಭತ್ಯೆ ನೀಡುವಂತೆ ಸಂಘದಿಂದ ದಿನಾಂಕ 3/4/2023ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತುಟ್ಟಿಭತ್ಯೆ ಪ್ರಸ್ತಾವನೆಯನ್ನು ಸರ್ಕಾರದಿಂದ ರಾಜ್ಯ ಚುನಾವಣಾ ಆಯೋಗದ ಮುಖಾಂತರ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆಗಳು ಜಾರಿಯಲ್ಲಿರುವುದರಿಂದ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಬಾಕಿ ತುಟ್ಟಿಭತ್ಯೆ ಬಗ್ಗೆ ಕ್ರಮಕೈಗೊಳ್ಳಲು ತಿಳಿಸಿರುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ದಿನಾಂಕ 13/5/2023ರಂದು ನೀತಿ ಸಂಹಿತೆ ಅಂತ್ಯಗೊಳ್ಳಲಿದ್ದು ನಂತರ ಶೇ 4 ಬಾಕಿ ತುಟ್ಟಿಭತ್ಯೆ ಆದೇಶವನ್ನು ದಿನಾಂಕ 1/1/2023ರಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆಯು ಆದೇಶ ಹೊರಡಿಸಲಿದೆ.
ದಿನಾಂಕ 1/4/2023 ರಿಂದ ಶೇ 17ರಷ್ಟು ಮಧ್ಯಂತರ ಪರಿಹಾರದ ಮೊತ್ತವನ್ನು ಏಪ್ರಿಲ್ 2023ರ ವೇತನದಲ್ಲಿ ಸೆಳೆಯಲು H.R.M.S. ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿದ್ದು, ಸರ್ಕಾರಿ ನೌಕರರು ಏಪ್ರಿಲ್ 2023 ಮಾಹೆಯ ವೇತನದಲ್ಲಿ ಪಡೆಯಲಿದ್ದಾರೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಮಾರ್ಚ್ 1ರಂದು ರಾಜ್ಯದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆಗ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿಗಳು ಮುಷ್ಕರಕ್ಕೆ ಕರೆ ನಿಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಅಂದು ಸರಣಿ ಸಭೆಗಳನ್ನು ನಡೆಸಿದ ಬಳಿಕ ಶೇ 17ರಷ್ಟು ಮಧ್ಯಂತರ ಪರಿಹಾರದ ಮೊತ್ತವನ್ನು ಘೋಷಣೆ ಮಾಡಲಾಗಿತ್ತು.
ಪತ್ರದಲ್ಲಿ ಏನಿತ್ತು?; ಸಿ. ಎಸ್. ಷಡಾಕ್ಷರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಬರೆದಿರುವ ಪತ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 1/1/2023ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವ ಬಗ್ಗೆ ಎಂದು ವಿಷಯವನ್ನು ಪ್ರಸ್ತಾಪಿಸಿದ್ದರು.
ಕೇಂದ್ರ ಸರ್ಕಾರದ ಆದೇಶದ ದಿನಾಂಕ 7/4/2023 ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಪೂರ್ವಾನ್ವಯವಾಗಿ ಕರ್ನಾಟಕ ರಾಜ್ಯ ಸರ್ಕಾರವೂ ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಈ ಹಿಂದಿನಿಂದಲೂ ಮಂಜೂರು ಮಾಡಿರುತ್ತದೆ ಎಂದು ಹೇಳಿದ್ದರು.
ಕೇಂದ್ರ ಸರ್ಕಾರವು ತನ್ನ ನೌಕರರಿಗೆ ದಿನಾಂಕ 1/1/2023ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ 4ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿರುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಸಹ ದಿನಾಂಕ 1/1/2023ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಶೇ4 ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸರ್ಕಾರದರಿಂದ ಆದೇಶವಾಗಿಲ್ಲ.












Click it and Unblock the Notifications