ಒಕ್ಕಲಿಗ ಸ್ವಾಮೀಜಿ ಕೇಸ್ ವಿಚಾರದ ಬಗ್ಗೆ ಡಿ.ಕೆ ಸುರೇಶ್ ಭಿನ್ನ ನಿಲುವು!
ಒಕ್ಕಲಿಗ ಸ್ವಾಮೀಜಿ ವಿಚಾರವಾಗಿ ವಾದ - ವಿವಾದ ನಡೆಯುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಅವರು ಈ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರಿಗಿಂತ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಒಕ್ಕಲಿಗ ಸ್ವಾಮೀಜಿಗಳ ಮೇಲೆ (ಕೇಸ್) ಎಫ್‌ಐಆರ್ ದಾಖಲಾಗಿರುವ ವಿಚಾರವು ವಿವಿಧ ಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ ಒಕ್ಕಲಿಗ ಸ್ವಾಮೀಜಿ ಅವರ ವಿಚಾರದಲ್ಲಿ ಡಿ.ಕೆ ಸುರೇಶ್ ಅವರು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾಮೀಜಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವುದಕ್ಕೆ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿರೋಧಿಸಿವೆ. ಅಲ್ಲದೇ ಡಿ.ಕೆ ಶಿವಕುಮಾರ್ ಅವರು ಈ ಕ್ರಮವನ್ನು ಸಮರ್ಥನೆ ಮಾಡಿಕೊಂಡಿರುವುದಕ್ಕೆ ಅವರ ಮೇಲೂ ಮುಗಿ ಬಿದ್ದಿವೆ. ಇದೀಗ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಅವರು ಈ ವಿಚಾರದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಅವರು, ಸರ್ಕಾರ ಈ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಸ್ವಾಮೀಜಿಗಳು ಅವರ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಮ್ಮ ಭಾರತದ ಸಂವಿಧಾನವು ಎಲ್ಲರಿಗೂ ಒಂದೇ ಎಂದು ಪರಮ ಪೂಜ್ಯ ಸ್ವಾಮೀಜಿ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸ್ವಾಮೀಜಿಗಳು ಸಾಂದರ್ಭಿಕವಾಗಿ ಆ ಮಾತು ಹೇಳಿದ್ದಾಗಿಯೂ ಒಪ್ಪಿಕೊಂಡು ಅದಕ್ಕೆ ವಿಷಾದ ಸೂಚಿಸಿದ್ದಾರೆ. ಆದರೆ, ಸರ್ಕಾರ ಈ ವಿಚಾರವಾಗಿ ದೂರು ದಾಖಲಿಸಿಕೊಂಡಿದೆ. ಸ್ವಾಮೀಜಿ ವಿರುದ್ಧದ ದೂರು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಪ್ರಕರಣದ ಹಿನ್ನೆಲೆ ಏನು ?
ಈಚೆಗೆ ಚಂದ್ರಶೇಖರನಾಥ ಸ್ವಾಮೀಜಿ ಅವರು ಭಾಷಣವೊಂದರಲ್ಲಿ ಮುಸ್ಲಿಮರ ಮತದಾನದ ವಿಚಾರವಾಗಿ ವಿವಾದಾತ್ಮಕವಾಗಿ ಮಾತನಾಡಿದ್ದರು. ಈ ಹೇಳಿಕೆ ಸಾಕಷ್ಟು ವಿರೋಧಕ್ಕೆ ಗುರಿಯಾಗಿತ್ತು. ಅಲ್ಲದೇ ಈ ರೀತಿ ವಿವಾದಾತ್ಮಕ ಹೇಳಿಕೆ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಚಂದ್ರಶೇಖರನಾಥ ಸ್ವಾಮೀಜಿ ಅವರು ವಿಷಾದ ವ್ಯಕ್ತಪಡಿಸಿದರೂ ರಾಜ್ಯ ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೇ ಸಮುದಾಯದಿಂದಲೂ ವಿರೋಧ ವ್ಯಕ್ತವಾಗುತ್ತಿದೆ.
ಡಿ.ಕೆ ಶಿವಕುಮಾರ್ ಅವರು ಹೇಳಿದ್ದೇನು ?
ಈ ವಿಚಾರವಾಗಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಾನು ರಾಜ್ಯದ ಎಲ್ಲಾ ನಮ್ಮ ಸಮುದಾಯದ ಸ್ವಾಮೀಜಿಗಳಿಗೆ ಹಾಗೂ ಎಲ್ಲಾ ಸ್ವಾಮೀಜಿಗಳಿಗೂ ಮನವಿ ಮಾಡ್ತೀನಿ. ದಯವಿಟ್ಟು ಯಾರೂ ಸಹ ಸಂವಿಧಾನ, ಯಾರ ಹಕ್ಕುಗಳ ಬಗ್ಗೆಯೂ ಮಾತನಾಡಬೇಡಿ ಎಂದು ಮನವಿ ಮಾಡಿದ್ದರು.
ಅಲ್ಲದೇ ಯಾರೂ ಸಹ ಜಾತಿಗಳ ಕುರಿತು ಮಾತನಾಡುವುದು ಬೇಡ. ನಮ್ಮದೆಲ್ಲ ಮಾನವ ಧರ್ಮ, ನಮ್ಮದು ಸಂವಿಧಾನವಾಗಿದೆ. ನಾವು ಇದೆರಡಕ್ಕೂ ಹೆಚ್ಚು ಒತ್ತು ಕೊಟ್ಟುಕೊಂಡು ಹೋಗಬೇಕು. ನಾನು ಸ್ವಾಮೀಜಿಗಳು ಹಾಗೂ ಪೊಲೀಸರಿಗೂ ಹೇಳುತ್ತೇನೆ. ಯಾರು ಸಹ ಇಲ್ಲಿನ ಕಾನೂನಿಗಿಂತ ದೊಡ್ಡವರಲ್ಲ. ನಾಳೆ ನಾನು ಮಾತಾಡಿದರೂ ನನ್ನ ಮೇಲೂ ಕೇಸ್ ಹಾಕುತ್ತಾರೆ ಎಂದಿದ್ದರು.












Click it and Unblock the Notifications