ಧರ್ಮ- ದೇವರನ್ನು ಮರೆಯದಿರಿ ಎಂದ ಡಿ.ಕೆ ಶಿವಕುಮಾರ್, ಟಾಂಗ್ ಕೊಟ್ಟಿದ್ದು ಯಾರಿಗೆ ?
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಧರ್ಮ- ದೇವರನ್ನು ಮರೆಯದಿರಿ! ಎಂದು ಮಾತನಾಡಿದ್ದಾರೆ. ಧಾರ್ಮಿಕ ಭಕ್ತಿಯನ್ನು ಹೊಂದಿರುವ ಅವರು ಪಕ್ಷಾತೀತವಾಗಿ ಬಿಜೆಪಿ ರಾಜ್ಯದ ಧಾರ್ಮಿಕ ಕಾರ್ಯಕ್ರಮಗಳನ್ನೂ ಮೆಚ್ಚಿಕೊಂಡಿರುವುದು ಇದೆ. ಇದೀಗ ಧರ್ಮ- ದೇವರನ್ನು ಮರೆಯದಿರಿ! ಎಂದೂ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಜೋರಾಗಿರುವ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರ ಮಾತು ಹೆಚ್ಚು ಚರ್ಚೆಯಾಗುತ್ತಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಶ್ರೀಮದ್ ರಂಬಾಪುರಿ ಶ್ರೀಗಳಿಂದ ಆಶೀರ್ವಾದ ಪಡೆದು ಮಾತನಾಡಿದೆ ಎಂದು ಹೇಳಿರುವ ಅವರು, ಧರ್ಮ- ದೇವರನ್ನು ಮರೆಯದಿರಿ ಎಂದಿದ್ದಾರೆ. ಶ್ರೀಮದ್ರಂಭಾಪುರಿ ವೀರಗಂಗಾಧರಜ್ಜಯ್ಯನವರು 'ಧರ್ಮದಿಂದಲೇ ಶಾಂತಿ ವಿಶ್ವಕ್ಕೆ; ಧರ್ಮಕ್ಕೆ ಜಯವಾಗಲಿ. ನಾಡು ಧರ್ಮ ಸಾಮ್ರಾಜ್ಯವಾಗಲಿ; ಭಕ್ತಿಯುತ ಬೀಡಾಗಲಿ. ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ; ಧರ್ಮಕ್ಕಾಗಿ ತಾಳಿರಿ' ಎಂಬ ಅದ್ಭುತ ಸಂದೇಶ ಸಾರಿದ್ದಾರೆ ಎಂದಿದ್ದಾರೆ.

ಧರ್ಮ- ದೇವರನ್ನು ನಾವು ಎಂದಿಗೂ ಮರೆಯಬಾರದು. ಹಿರಿಯರು 'ಮನೆ ಹುಷಾರು, ಮಠ ಹುಷಾರು' ಎಂದಿದ್ದಾರೆ. ತಾಯಿ- ತಂದೆ- ಗುರು ಸಮಾಜದ ಮೂರು ಕಣ್ಣುಗಳು. ಹುಟ್ಟುವಾಗ ಯಾರೂ ಇದೇ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. 'ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು'. ಹೀಗಾಗಿ ಗುರುಗಳು ಹಾಕಿಕೊಟ್ಟ ಧರ್ಮದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು.
ರಂಭಾಪುರಿ ಮಠಕ್ಕೆ ದೊಡ್ಡ ಇತಿಹಾಸವಿದೆ, ಪರಂಪರೆ ಇದೆ. ಈ ಮಠದೊಂದಿಗೆ ನನಗೆ ಭಕ್ತನಿಗೂ- ಭಗವಂತನಿಗೂ ಇರುವ ಸಂಬಂಧವಿದೆ. ರಂಭಾಪುರಿ ಶ್ರೀಗಳು ನಮ್ಮೂರಿಗೆ ಬರುತ್ತಾರೆನ್ನುವುದೇ ನಮ್ಮ ಭಾಗ್ಯ. ನಿಮ್ಮೆಲ್ಲರ ಸೇವಕನಾಗಿ ಈ ಬೆಟ್ಟದ ಅಭಿವೃದ್ಧಿಗೆ ನಿಮ್ಮೆಲ್ಲರ ಜೊತೆ ನಾನೂ ನಿಲ್ಲುತ್ತೇನೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇನ್ನು ಈಚೆಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜಕಾರಣಿಯಾಗಿ ನನಗೆ ಕೆಲವು ಮಿತಿಗಳು ಇರುತ್ತವೆ. ಸಮಾಜದ ನಂಬಿಕೆಗಳ ಜೊತೆಗೂ ನಾವು ಕೆಲವೊಮ್ಮೆ ನಡೆಯಬೇಕಾಗುತ್ತದೆ. ನಾನು ದೇವಸ್ಥಾನಕ್ಕೆ ಹೋದಾಗ ಕುಂಕಮ ಇಡುತ್ತಾರೆ. ಕುಂಕುಮ ಇಟ್ಟಿದ್ದಕ್ಕೂ ಕತೆ ಕಟ್ಟುತ್ತಾರೆ. ನಾವು ಗ್ರಾಮೀಣ ಭಾಗಕ್ಕೆ ಹೋದಾಗ ದೇವಸ್ಥಾನಗಳಿಗೆ ಹೋಗದಿದ್ದರೆ ನಮ್ಮ ಬಗ್ಗೆ ಬೇರೆಯದೇ ರೀತಿಯ ಕತೆ ಕಟ್ಟುತ್ತಾರೆ ಎಂದಿದ್ದರು.
ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದೇ ಹೋದರೆ ಕೇವಲ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ. ಈ ಕಾರಣಕ್ಕೇ ಮೌಢ್ಯ ನಿಷೇಧ ಕಾಯ್ದೆ ಪರಿಣಾಮಕಾರಿ ಆಗುವುದಿಲ್ಲ. ನಾವು ಏನೇ ಕಾನೂನು, ನಿಯಮ ಮಾಡಿದರೂ ಸಂವಿಧಾನದ ಚೌಕಟ್ಟಿಗೇ ಒಳಪಟ್ಟಿರಬೇಕು. "ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರ ಬನ್ನಿ, ಬಡತನದ ಬೇರುಗಳ ಬುಡ ಸಮೇತ ಕಿತ್ತು ಹಾಕಲು ಬನ್ನಿ" ಎಂದು ಕುವೆಂಪು ಅವರು ಕರೆ ನೀಡಿದ್ದರು. ಈ ಕರೆಯನ್ನು ಸಮಾಜ ಪಾಲಿಸಿದರೆ ಅಸಮಾನತೆಯ ಸಮಾಜ ಸಮಾನತೆಯ ಕಡೆ ಚಲಿಸುತ್ತದೆ. ಕುವೆಂಪು ಅವರ ಆಶಯ ಮತ್ತು ಮೌಲ್ಯಗಳು ಇಡೀ ವಿಶ್ವಕ್ಕೇ ಅನ್ವಯ ಆಗುವುದರಿಂದ ಜಗತ್ತಿನ ಇತರೆ ಭಾಷೆಗಳಿಗೂ ಈ ಕೃತಿ ಅನುವಾದವಾಗಲಿ ಎಂಬುದು ನನ್ನ ಇಂಗಿತ ಎಂದಿದ್ದರು.












Click it and Unblock the Notifications