ಸೈಬರ್ ಅಪರಾಧ ಕಡಿವಾಣಕ್ಕೆ ಸಜ್ಜು: ಮಹತ್ವದ ಮಾಹಿತಿ ನೀಡಿದ ಪರಮೇಶ್ವರ
ಬೆಂಗಳೂರು, ಮಾರ್ಚ್ 15: ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಅರಿವು ಮತ್ತು ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. 2023ರಲ್ಲಿ 22 ಸಾವಿರ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಬ್ಯಾಂಕ್ ಅಕೌಂಟ್, ಡೇಟಾ ಹ್ಯಾಕ್, ಸರ್ಕಾರಿ ಖಾತೆಗಳು ಹ್ಯಾಕ್ ಆಗುವುದು ಸೇರಿದಂತೆ ನಾನಾ ರೀತಿಯ ಸೈಬರ್ ಅಪರಾಧಗಳು ಆಗುತ್ತಿವೆ. ಇದನ್ನು ತಡೆಗಟ್ಟದೆ ಹೋದರೆ ಮುಂದಿನ ದಿನಗಳಲ್ಲಿ ತೊಂದರೆಗಳಾಗುತ್ತವೆ. ಸಾಮಾನ್ಯ ಅಪರಾಧಗಳಿಗಿಂತ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ ಎಂದು ಹೇಳಿದರು.
ಸಿಐಡಿ ಹಾಗೂ ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ "CIDECODE" ಸೈಬರ್ ಅಪರಾಧ ಶೃಂಗಸಭೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಸೈಬರ್ ಅಪರಾಧಗಳಿಗೆ ಯಾವುದೇ ರೀತಿಯ ಇತಿಮಿತಿಗಳಿಲ್ಲ. ಪ್ರಪಂಚದಲ್ಲಿ ಆಗುತ್ತಿರುವ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಸಿಸಿಐಟಿಆರ್ ಸ್ಥಾಪಿಸಲಾಗಿದೆ. ಈವರೆಗೆ 46 ಸಾವಿರಕ್ಕು ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ದಸಖಲಾಗುತ್ತಿರುವ ಸಾಮಾನ್ಯ ಅಪರಾಧಗಳಲ್ಲಿ ಶೇ. 30ರಷ್ಟು ಸೈಬರ್ ಅಪರಾಧಗಳು ದಾಖಲಾಗುತ್ತಿವೆ. ವೈಟ್‌ಫೀಲ್ಡ್ ವಿಭಾಗದ ವ್ಯಾಪ್ತಿಯಲ್ಲಿ ಶೇ.40ರಷ್ಟು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಆರಂಭಿಕ ಹಂತದಲ್ಲೆ ಹೆಚ್ಚು ಫೋಕಸ್ ಮಾಡಿ ತಡೆಗಟ್ಟಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದರು.
ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ತಂತ್ರಜ್ಞಾನ ಮತ್ತು ತರಬೇತಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಜಾಗತಿಕವಾಗಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ತಾಂತ್ರಿಕ ಬಲವರ್ಧನೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಿಐಡಿ ಡಿಕೋಡ್ ಶೃಂಗಸಭೆಯು ಸಹಕಾರಿಯಾಗಲಿದೆ. ಹ್ಯಾಕಥಾನ್ ಮತ್ತು ಸೈಬರ್ ಲಾ ಐಡಿಯಾಥಾನ್‌ನಂತಹ ಕಾರ್ಯಕ್ರಮಗಳು ಸುರಕ್ಷಿತ ಡಿಜಿಟಲ್ ಕರ್ನಾಟಕ ಮತ್ತು ಸುರಕ್ಷಿತ ಭಾರತವನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ತನಿಖಾ ವಿಭಾಗವು (ಸಿಐಡಿ) ಆಯೋಜಿಸಿದ್ದ ಹ್ಯಾಕಥಾನ್ ಮತ್ತು ಸೈಬರ್ ಲಾ ಐಡಿಯಾಥಾನ್‌ಗಳಲ್ಲಿ ಭಾಗವಹಿಸಿ, ಡೀಪ್ ಫೇಕ್ ಪತ್ತೆ, ಬ್ಲಾಕ್ ಚೈನ್ ತಂತ್ರಜ್ಞಾನ ಬಳಕೆ ಸೇರಿದಂತೆ ಇನ್ನಿತರ ಸೈಬರ್ ಅಪರಾಧಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಬಹುಮಾನ ನೀಡಿ ಅಭಿನಂದಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರು, ಶ್ರಮಿಕರು ಸೇರಿದಂತೆ ರಾಜ್ಯದ ಎಲ್ಲ ವರ್ಗದ ಜನರ ಸರ್ವತೋಮುಖ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರುವ ಸಮತೋಲನವಾದ ಬಜೆಟ್ ನೀಡಿದ್ದಾರೆ ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದ್ದಾರೆ. ರಾಜ್ಯದ ಇತಿಹಾಸದಲ್ಲೇ 16 ಬಾರಿ ಬಜೆಟ್ ಮಂಡಿಸಿ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಬಾರಿಯ ಬಜೆಟ್ ೪.೦೯ ಲಕ್ಷ ಕೋಟಿಗೆ ಹೋಗಿದೆ. ಅದು ಸಾಮಾನ್ಯ ಅಂತ ನಾನು ಅಂದುಕೊಳ್ಳುವುದಿಲ್ಲ. ಎಲ್ಲರಿಗೂ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದಿದ್ದಾರೆ.












Click it and Unblock the Notifications