ನಟ ಚೇತನ ವಿರುದ್ಧ ಸ್ವಯಂ ಪ್ರೇರಿತ ದೂರು, ಬಂಧನ: ಸಿಪಿಐ (ಎಂ) ಖಂಡನೆ
ಬೆಂಗಳೂರು, ಫೆಬ್ರವರಿ 23: ಸಾಮಾಜಿಕ ಮಾಧ್ಯಮದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಹೆಸರು ಉಲ್ಲೇಖಿಸಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದ ಆರೋಪದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ ಆ ದಿನಗಳು ಖ್ಯಾತಿಯ ನಟ ಚೇತನ್‌ರನ್ನು ಬಂಧನ ಮಾಡಿರುವುದನ್ನು ಕರ್ನಾಟಕ ಸಿ.ಪಿ.ಐ(ಎಂ) ಖಂಡಿಸಿದೆ.
"ಸಾಮಾಜಿಕ ಮಾಧ್ಯಮದಲ್ಲಿ ಹೈಕೋರ್ಟ್ ನ್ಯಾಯಾಧೀಶರ ಹೆಸರು ಉಲ್ಲೇಖಿಸಿ ಪ್ರಚೋದನಕಾರಿ ಬರಹ ಪ್ರಕಟಿಸಿದ್ದರು, ಆದ್ದರಿಂದ ಅವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿ.ಸಿ.ಪಿ.ಯವರ ಹೇಳಿಕೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂಬ ಮಾಹಿತಿಗಳಿವೆ. ನ್ಯಾಯಾಧೀಶರ ಹೆಸರು ಉಲ್ಲೇಖಿಸಬಾರದು ಎಂಬ ನಿಯಮಗಳಿದ್ದಾಗ್ಯೂ, ಅವರ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬಹುದಾಗಿತ್ತಲ್ಲದೇ, ಸ್ವಯಂ ಪ್ರೇರಿತ ದೂರು, ಬಂಧನದ ಅಗತ್ಯವಿರಲಿಲ್ಲ," ಎಂದು ಸಿ.ಪಿ.ಐ(ಎಂ) ಹೇಳಿದೆ.
"ನ್ಯಾಯಂಗವೂ ಕೂಡ ರಚನಾತ್ಮಕ ಟೀಕೆಗಳಿಗೆ ತೆರೆದುಕೊಳ್ಳುವ ಬದಲಾವಣೆಗೆ ಒಳಪಡುವುದಾಗಬೇಕು. ಸದ್ಯ ಇಡೀ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿರುವವರು ಆಡುವ ಮಾತುಗಳು, ನಡೆದುಕೊಳ್ಳುವ ರೀತಿಗಳು, ಪ್ರಚೋದಿತ ಯುವಕರಿಂದ ನಡೆಯುತ್ತಿರುವ ಘಾತಕ ಕೃತ್ಯಗಳಿಂದ ತಲ್ಲಣಿಸಿಯೂ ಇಂಥಹ ಪ್ರತಿಕ್ರಿಯೆಗಳು ಬರುವ ಸಾಧ್ಯತೆಗಳೂ ಇವೆ," ಎಂದಿದೆ.

"ಆದರೆ ರಾಜ್ಯ ಬಿಜೆಪಿ ಸಕಾ೯ರವು ಭಿನ್ನ ಅಭಿಪ್ರಾಯಗಳನ್ನು ಧಮನಿಸುವ ನಿಟ್ಟಿನಲ್ಲಿ ಸೇಡಿನ ಕ್ರಮವಾಗಿ ತೆಗೆದು ಕೊಳ್ಳುತ್ತಿರುವ ಕ್ರಮಗಳ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರು ಮಾಡುವ ಪ್ರಚೋದನಾಕಾರಿ ಹೇಳಿಕೆಗಳ ಮೇಲೆ ಕ್ರಮ ಕೈಗೊಳ್ಳದ ತಾರತಮ್ಯವು ನಡೆದಿದೆ. ಬಿಜೆಪಿಯ ಕೇಂದ್ರ ಸರ್ಕಾರವು ಕೂಡ ವಿವಿದೆಡೆ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಹೋರಾಟಗಾರರ ಮೇಲೆ ಜಾಮೀನು ರಹಿತ ಬಂಧನ ದಂತಹ ಕ್ರಮಗಳನ್ನು ಕೈಗೊಂಡು ಈಗಲೂ ಹಲವರನ್ನು ಬಂಧನದಲ್ಲಿ ಇರಿಸಿದೆ. ಅದೇ ಪ್ರವೃತ್ತಿಯನ್ನು ರಾಜ್ಯ ಬಿಜೆಪಿ ಸಕಾ೯ರವು ವಹಿಸುತ್ತಿರುವುದು ಖಂಡನೀಯ," ಎಂದು ಸಿಪಿಐ ಎಂ ಹೇಳಿದೆ.
ಚೇತನ್ ಬಿಡುಗಡೆಗೆ ಸಿಪಿಐಎಂ ಒತ್ತಾಯ
"ಈ ಮೊದಲೂ ಕೂಡ ದತ್ತಪೀಠಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯ ವರದಿಯ ಕುರಿತು ಆಡಳಿತ ಪಕ್ಷಗಳ ನಾಯಕರೇ ನ್ಯಾಯಾಧೀಶರ ಹೆಸರು ಬಳಸಿ ಕೇವಲವಾಗಿ ಮಾತಾಡಿದ್ದೂ ಇದೆ. ಅಲ್ಲದೆಯೆ ಸಾಮಾಜಿಕ ಕ್ಷೋಭೆ ಉಂಟು ಮಾಡುವ, ಜನರ ಬದುಕಿಗೆ ಮಾರಕವಾಗುವ ಎಷ್ಟೊಂದು ಪ್ರಕರಣಗಳು ನಡೆಯುವಾಗ ಅಗತ್ಯವಿರುವ ಸ್ವಯಂ ಪ್ರೇರಿತ ದೂರು ದಾಖಲೆಗೆ ಮುಂದಾಗದ ಪೋಲೀಸ್ ಇಲಾಖೆ ಈ ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದು ಸರಿಯೇ," ಎಂದು ಸಿ.ಪಿ.ಐ( ಎಂ) ಪ್ರಶ್ನಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನ ಅಭಿಪ್ರಾಯಗಳನ್ನು ಗೌರವಿಸಬೇಕು ಎನ್ನುವ ಸಂವಿಧಾನವನ್ನು ಒಪ್ಪಿಕೊಂಡ ನಾವು ಅದಕ್ಕೆ ಬದ್ದವಾಗಿ ನಡೆದುಕೊಳ್ಳುವ ಪರಿಪಾಟ ಬೆಳೆಯಬೇಕು. ಚೇತನ್ ರವರೊಬ್ಬ ಸಾಮಾಜಿಕ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದು ಅವರನ್ನು ಬಿಡುಗಡೆ ಮಾಡಬೇಕು," ಎಂದು ಸಿಪಿಐಎಂ ಒತ್ತಾಯಿಸಿದೆ.
ನಡೆದಿದ್ದು ಏನು?
ಹಿಜಾಬ್ ಪ್ರಕರಣ ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ವಿಚಾರವಾಗಿ ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನಟ ಚೇತನ್ ಕುಮಾರ್ ಅವರನ್ನು ಮಂಗಳವಾರ ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದಿದ್ದರು. ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದ ಮೇರೆಗೆ ಮೈನಾ ಖ್ಯಾತಿಯ ನಟ ಚೇತನ್‌ರಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಜಾಮೀನಿಗಾಗಿ ಚೇತನ್ ಪರ ವಕೀಲ ಕೆ. ಬಾಲನ್ ಅರ್ಜಿ ಸಲ್ಲಿಸಿದ್ದು, ಇಂದು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಕ್ಕೂ ಮುನ್ನ ನಟ ಚೇತನ್ ಪತ್ನಿ ಮೇಘಾ ಅವರು ಮಂಗಳವಾರ ರಾತ್ರಿ ಫೇಸ್ಬುಕ್ ಲೈವ್ ಬಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದರು. 'ನನ್ನ ಪತಿಯ ಅಪಹರಣವಾಗಿದೆ' ಎಂದು ಹೇಳಿಕೊಂಡಿದ್ದರು. ಇದಕ್ಕೆ ಪೊಲೀಸರಿಂದ ಸ್ಪಷ್ಟನೆ ಸಿಕ್ಕಿದ್ದು, ಅವರನ್ನು ಬಂಧಿಸಲಾಗಿದೆ ಎಂದಿದ್ದರು. (ಒನ್‌ಇಂಡಿಯಾ ಸುದ್ದಿ)











Click it and Unblock the Notifications