ಕೋವಿಡ್ 19; ಗಾಬರಿಯಾಗಬೇಕಿಲ್ಲ, ಎಚ್ಚರಿಕೆ ಅಗತ್ಯ :ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಡಿಸೆಂಬರ್ 24: ಕೋವಿಡ್ 19 ಸಾಂಕ್ರಾಮಿಕದ ಬಗ್ಗೆ ಗಾಬರಿಯಾಗಬೇಕಿಲ್ಲ ಆದರೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಕುರಿತು ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ(ಭಾನುವಾರ) ಕೋವಿಡ್ ಕುರಿತು ಕಂದಾಯ ಸಚಿವರು ಹಾಗೂ ಆರೋಗ್ಯ ಸಚಿವ ಡಾ: ಸುಧಾಕರ್ ಅವರು ಸಭೆ ನಡೆಸಲಿದ್ದು, ಬೋಸ್ಟರ್ ಡೋಸ್ ಗಳನ್ನು ಕೊಡಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರಗಳನ್ನು ಏರ್ಪಡಿಸುವುದು, ಪರೀಕ್ಷೆಗಳನ್ನು ನಡೆಸುವುದು, ಪ್ರತಿಯೊಂದು ಐಎಲ್ ಐ, ಸಾರಿ ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ಕೈಗೊಳ್ಳುವುದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಮುಂತಾದ ಕ್ರಮ ಕೈಗೊಳ್ಳಲಾಗುವುದು ಎಂದರು.
ಆರೋಗ್ಯ ಮೂಲಸೌಕರ್ಯ ಗಳಾದ ಔಷಧಿ, ಲಸಿಕೆ ಇವೆಲ್ಲವನ್ನೂ ದಾಸ್ತಾನು ಮಾಡಿಕೊಳ್ಳಲು ಕ್ರಮ ವಹಿಸಬೇಕು, ಯಾವುದೇ ಸಂದರ್ಭದಲ್ಲಿ ಯಾವುದೇ ಕೊರತೆಯಾಗಬಾರದು, ಆಮ್ಲಜನಕ ಘಟಕಗಳನ್ನು ಡ್ರೈ ರನ್ ಮಾಡಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಯೂ ನಿರಂತರವಾಗಿ ನಿಗಾ ವಹಿಸಿ, ನಿರ್ಬಂಧಗಳನ್ನು ಹೇರಲಾಗಿದೆ. ವ್ಯಕ್ತಿ, ಸಂಘ, ಸರ್ಕಾರ, ಸಮಾಜ ಎಲ್ಲರೂ ಸೇರಿ ಇದನ್ನು ಎದುರಿಸಬೇಕಿದೆ ಹಾಗೂ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳನ್ನು ಹೊರಡಿ ಸಲಾಗುವುದು ಎಂದರು.

ಸದನದಲ್ಲಿ ಉತ್ತರ ಕರ್ನಾಟಕದ ವಿಷಯಗಳ ಬಗ್ಗೆ ಚರ್ಚೆ
ಇನ್ನೂ ಸದನದಲ್ಲಿ ಎರಡು ಅಥವಾ ಮೂರು ದಿನ ಉತ್ತರ ಕರ್ನಾಟಕದ ವಿಷಯಗಳ ಬಗ್ಗೆ ಅವಕಾಶ ಮಾಡಿಕೊಡಲು ಸಭಾಧ್ಯಕ್ಷರಿಗೆ ಕೋರಲಾಗಿದೆ. ಸದನದಲ್ಲಿ ಎರಡೂ ಕಡೆ ಈ ವಿಷಯ ಕೈಗೊಳ್ಳಲು ಉತ್ಸುಕರಾಗಿದ್ದಾರೆ ಎಂದರು.
ಅವಧಿ ಪೂರ್ವ ಚುನಾವಣೆ ಇಲ್ಲ ಎಂದ ಸಿಎಂ ಬಸವರಾಜ ಬೊಮ್ಮಾಯಿ
ಇನ್ನೂ ಅವಧಿ ಪೂರ್ಣ ಚುನಾವಣೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವಧಿ ಪೂರ್ವ ಚುನಾವಣೆ ಮಾಡುವ ಯೋಚನೆಯನ್ನು ನಮ್ಮ ಸರ್ಕಾರ ಅಥವಾ ಪಕ್ಷ ಮಾಡಿಲ್ಲ. ಜನರಿಗೆ ನಮ್ಮ ಕಾರ್ಯಕ್ರಮ ಮುಟ್ಟಿಸಿ, ಆ ವರದಿಯ ಆಧಾರದ ಮೇಲೆ ಸಕಾರಾತ್ಮಕ ಜನಾದೇಶ ಪಡೆಯಲು ನಾವು ಪ್ರಯತ್ನ ಮಾಡು ತ್ತಿದ್ದೇವೆ. ಬಹುಶಃ ಕಾಂಗ್ರೆಸ್ ಗೆ ಸಮಯ ಕೊಟ್ಟಷ್ಟು ಅವರ ಒಳಜಗಳ ಹೆಚ್ಚಾಗುತ್ತದೆ ಎಂದು ಅಭದ್ರತೆ ಕಾಡುತ್ತಿದೆ. ಚುನಾವಣೆ ಮುಂಚೆಯಾಗುತ್ತದೆ ಜಗಳವಾಡಬೇಡಿ ಎಂದು ಕಾಂಗ್ರೆಸ್ ನ ಕಾರ್ಯಕರ್ತರಿಗೆ ನೀಡಿರುವ ಸಂದೇಶ ಎಂದರು.
ಎರಡು ದಿನ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಗಳ ಕುರಿತು ಚರ್ಚೆ: ಬಸವರಾಜ ಹೊರಟ್ಟಿ
ಇನ್ನೂ ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಎರಡು ದಿನ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಗಳ ಕುರಿತು ಚರ್ಚಿಸಲಾಗುವುದು. ಮಂಗಳವಾರ ಮತ್ತು ಬುಧವಾರ ಎರಡು ದಿನ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ನಡೆಯುತ್ತದೆ. ಇನ್ನೂ ಸದನ ಆರಂಭವಾದ ತಕ್ಷಣ ಚರ್ಚೆ ಗೆ ಸಂಬಂಧಿಸಿದ ಸಚಿವರು ಇರಬೇಕು. ಒಂದು ವೇಳೆ ಸದನದಲ್ಲಿ ಸಚಿವರು ಇರಲಿಲ್ಲ ಅಂದ್ರೆ ಸಿಎಂ ಗೆ ಉತ್ತರಿಸಲು ಸೂಚಿಸುತ್ತೇನೆ. ಕನಿಷ್ಠ 15 ದಿನ ಅಧಿವೇಶನ ನಡೆಸಬೇಕು. ಸರ್ಕಾರ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲದೇ ಅನಗತ್ಯ ಗದ್ದಲ- ಗಲಾಟೆಗೆ ಕಾಲಹರಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.












Click it and Unblock the Notifications