'ಪರಿಷತ್ ಚುನಾವಣೆ ಸೋಲಿನ ಹೊಣೆ ಹೊರುವುದಿಲ್ಲ'

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 09 : ವಿಧಾನಪರಿಷತ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ತಾವು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಶಾಸಕ ಚೆಲುವರಾಯಸ್ವಾಮಿ ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ನಾಗಮಂಗಲ ಕ್ಷೇತ್ರದ ಶಾಸಕ ಚೆಲುವರಾಯಸ್ವಾಮಿ ಅವರು, 'ಪಕ್ಷದ ವರಿಷ್ಠರು ಏಕಪಕ್ಷೀಯವಾದ ನಿರ್ಧಾರಗಳನ್ನು ಕೈಗೊಳ್ಳಬಾರದಿತ್ತು. ಇದು ನನ್ನ ವಿರುದ್ಧ ಅಪ್ಪಾಜಿಗೌಡರನ್ನು ಎತ್ತಿಕಟ್ಟುವ ಪ್ರಯತ್ನ' ಎಂದು ಆರೋಪಿಸಿದರು. [ಕೊಡಗು : ಕೊನೆಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ]

cheluvaraya swamy

'ಗ್ರಾಮಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿಯೇ ರಾಮಕೃಷ್ಣ ಅವರಿಗೆ ಟಿಕೆಟ್ ನೀಡುವ ಕುರಿತು ತೀರ್ಮಾನವಾಗಿತ್ತು. ಚುನಾವಣೆ ತಯಾರಿಗಾಗಿಯೇ ಅವರು ಸುಮಾರು 3 ಕೋಟಿ ಖರ್ಚು ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ನಿರಾಕರಿಸಲಾಗಿದೆ' ಎಂದು ಚೆಲುವರಾಯಸ್ವಾಮಿ ದೂರಿದರು. [ಪರಿಷತ್ ಚುನಾವಣೆ : ಜೆಡಿಎಸ್ 12 ಅಭ್ಯರ್ಥಿಗಳ ಪಟ್ಟಿ]

'ಮಂಡ್ಯ ಕ್ಷೇತ್ರದಿಂದ ಈ ಬಾರಿಯೂ ಬಿ. ರಾಮಕೃಷ್ಣ ಅವರನ್ನೇ ಕಣಕ್ಕೆ ಇಳಿಸಬೇಕು ಎಂದು ನಾನು ಮತ್ತು ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದೆವು. ಆದರೆ, ಪಕ್ಷ ಅಪ್ಪಾಜಿಗೌಡರಿಗೆ ಟಿಕೆಟ್‌ ನೀಡಿದೆ. ಇಂತಹ ಏಕಪಕ್ಷೀಯ ನಿರ್ಧಾರ ಸರಿಯಲ್ಲ' ಎಂದು ಹೇಳಿದರು. [ಮಂಡ್ಯ : ಕಾಂಗ್ರೆಸ್ ನಲ್ಲಿಯೂ ಭಿನ್ನಮತ]

ಸೋಲಿನ ಹೊಣೆ ಹೊರುವುದಿಲ್ಲ : 'ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಅಪ್ಪಾಜಿಗೌಡರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಇನ್ನೂ ಸಮಯಾವಕಾಶವಿದೆ. ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದು ರಾಮಕೃಷ್ಣ ಅವರಿಗೆ ಬೆಂಬಲ ನೀಡಲಿ' ಎಂದು ಚೆಲುವರಾಯಸ್ವಾಮಿ ಒತ್ತಾಯಿಸಿದರು.

'ನಾವು ಸೂಚಿಸಿದ ಅಭ್ಯರ್ಥಿಗೆ ಬೆಂಬಲ ನೀಡಿದರೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ಪಕ್ಷದ ಅಭ್ಯರ್ಥಿ ಸೋತರೆ, ನಾನು ಸೋಲಿನ ಹೊಣೆಯನ್ನು ಹೊರುವುದಿಲ್ಲ' ಎಂದರು.

ಅಂದಹಾಗೆ ಕೊಡಗಿನಲ್ಲಿಯೂ ಜೆಡಿಎಸ್ ಒಡೆದ ಮನೆಯಾಗಿದೆ. ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಎರಡು ಬಾರಿ ಬದಲಾವಣೆ ಮಾಡಿ, ಅಂತಿಮವಾಗಿ ಬೆಂಗಳೂರಿನ ಉದ್ಯಮಿ ಎ.ವಿ.ವಿನೋದ್ ಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ. ಡಿಸೆಂಬರ್ 27ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mandya : Nagamangala JDS MLA N.Cheluvaraya Swamy unhappy with party leaders. Party finalized Appaji Gowda name for Mandya constituency Legislative council election. Cheluvaraya Swamy suggested Ramakrishna name.
Please Wait while comments are loading...