ಧರ್ಮಸ್ಥಳ ದೇವಾಲಯ ಸ್ಫೋಟಿಸಲು ಸಂಚು: ಏನಿದು ಚರ್ಚೆ ?
Dharmasthala: ಕರ್ನಾಟಕದ ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರವೊಂದನ್ನು ಬಿಜೆಪಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಧರ್ಮಸ್ಥಳ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಚುರುಕುಪಡೆದುಕೊಂಡಿದೆ. ಈ ರೀತಿ ಇರುಗಾಗಲೇ ಧರ್ಮಸ್ಥಳ ಸ್ಫೋಟಕ್ಕೆ ಸಂಚು ನಡೆದಿತ್ತು ಎನ್ನುವ ಆಘಾತಕಾರಿ ಅಂಶದ ಬಗ್ಗೆ ಚರ್ಚೆ ನಡೆದಿದೆ. ಆದರೆ ಇದರ ಬಗ್ಗೆ ಪರ - ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿಯು, ಹಿಂದೂ ಶ್ರದ್ಧಾ ಕೇಂದ್ರಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡುತ್ತಿದೆ. ಈ ಹಿಂದೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ಕಾಂಗ್ರೆಸ್ ನಾಯಕರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕುಕ್ಕರ್ ಬಾಂಬ್ ಮೂಲಕ ಧರ್ಮಸ್ಥಳ ದೇವಸ್ಥಾನ ಸ್ಪೋಟಿಸಲು ಉಗ್ರ ಯೋಜನೆ ರೂಪಿಸಿದ್ದ ಎಂಬುದು ಈಗ ತನಿಖೆಯಲ್ಲಿ ಬಯಲಾಗಿದೆ.

ಧರ್ಮಸ್ಥಳದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳ ಹಿಂದೆ ನಗರ ನಕ್ಸಲರ ಕೈವಾಡವಿದೆ. ಎಡಪಂಥೀಯರ ಒತ್ತಡದ ಮೇರೆಗೆ ಎಸ್‌ಐಟಿ ರಚಿಸಲಾಗಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಸಮಾಜ ಘಾತುಕರು, ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಮುಖವಾಣಿ ಎಸ್‌ಡಿಪಿಐ ಪದಾಧಿಕಾರಿಗಳು ಹೋರಾಟದ ಮುಂಚೂಣಿಯಲ್ಲಿದ್ದಾರೆ. ತಮಿಳುನಾಡಿನ ಕಾಂಗ್ರೆಸ್ ಸಂಸದ ಬುರುಡೆ ಪ್ರಕರಣದ ಹಿಂದಿನ ಸೂತ್ರಧಾರಿ ಎಂದು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿದೆ. ರಾಷ್ಟ್ರೀಯ ಮಾಧ್ಯಮವಲ್ಲದೆ, ಅರಬ್, ಚೀನಾದ ಮಾಧ್ಯಮಗಳಲ್ಲೂ ಈ ಬಗ್ಗೆ ಸುದ್ದಿಯಾಗಿದೆ.
ಎಸ್‌ಐಟಿ ತನಿಖೆ ಸರಿಯಾಗಿ ನಡೆಯುತ್ತಿದ್ದರೂ ಅದಕ್ಕೆ ಪೂರಕವಾಗಿ ನಡೆಯುತ್ತಿರುವ ಬೆಳವಣಿಗೆಗಳ ಹಿಂದೆ ಷಡ್ಯಂತ್ರವಿದೆ. ಎಸ್‌ಐಟಿ ಅಧಿಕೃತ ಸುದ್ದಿ ನೀಡದೇ ಇದ್ದರೂ ಪುಂಖಾನುಪುಂಖವಾಗಿ ಸುಳ್ಳು ಸುದ್ದಿ ಬಿತ್ತರಿಸಲಾಗುತ್ತಿದೆ. ಹಿಂದೂ ವಿರೋಧಿ ಯೂಟ್ಯೂಬ್ ದಂಧೆಕೋರರ ದಂಡೇ ಧರ್ಮಸ್ಥಳದಲ್ಲಿ ಬೀಡುಬಿಟ್ಟಿದೆ. ಸರ್ಕಾರಕ್ಕೆ ಇದರ ಮಾಹಿತಿ ಇದ್ದರೂ, ಅದರ ಬಗ್ಗೆ ಯಾವುದೇ ಕ್ರಮಕೈಗೊಳ್ಳದೆ, ಧರ್ಮಸ್ಥಳದ ಭಕ್ತರ ನಂಬಿಕೆಯನ್ನು ಘಾಸಿಗೊಳಿಸುತ್ತಿದೆ ಎಂದು ಬಿಜೆಪಿ ಹೇಳಿದೆ.
ಇನ್ನು ಈ ಸಂಬಂಧ ರಿಯಾಕ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಧರ್ಮಸ್ಥಳ ವಿಚಾರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕುತಂತ್ರ, ಷಡ್ಯಂತ್ರ ನಡೆಯುತ್ತಿದೆ ಎನ್ನುವ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಧರ್ಮಸ್ಥಳ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ತನಿಖೆ ಹೆಸರಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಬಿಜೆಪಿಯ ಹಲವು ನಾಯಕರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕಡೆ ಎಸ್‌ಐಟಿ ತನಿಖೆ ನೆಡೆಯುತ್ತಿದ್ದು ಮತ್ತೊಂದು ಕಡೆ ಬಿಜೆಪಿ ನಾಯಕರು ಸಹ ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿದ್ದಾರೆ.












Click it and Unblock the Notifications