ಕಾಂಗ್ರೆಸ್ ಸಾಧನೆ ಜನರಿಗೆ ತಲುಪಿಸಲು ಮೂರು ತಂತ್ರ
ಬೆಂಗಳೂರು, ಮೇ 15 : ಕಾಂಗ್ರೆಸ್ ಪಕ್ಷ ಜನರೊಂದಿಗೆ ಸತತವಾಗಿ ಸಂಪರ್ಕ ಹೊಂದಲು ಮೂರು ಕಾರ್ಯಕ್ರಮಗಳನ್ನು ರೂಪಿಸಿದೆ. ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮನ್ವಯ ಸಮತಿ ಸಭೆಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ಸತತವಾಗಿ ಜನರೊಂದಿಗೆ ಬೆಸುಗೆ ಹೊಂದಿರಲು ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು. ಈ ಮೂಲಕ ಸರ್ಕಾರ ಸಾಧನೆಯನ್ನು ಜನರಿಗೆ ತಲುಪಿಸಬೇಕು ಎಂದರು. [ಇಷ್ಟ ಇದ್ರೆ ಕೆಲಸ ಮಾಡಿ, ಇಲ್ದಿದ್ರೆ ಜಾಗ ಖಾಲಿಮಾಡಿ-ಡಿಗ್ಗಿ]
ಪಕ್ಷ ಅಧಿಕಾರಕ್ಕೆ ಬಂದ ನಂತರ ಸಂಘಟನೆಗೆ ಒತ್ತು ನೀಡದೆ ಜನ ಸಂಪರ್ಕದಿಂದ ದೂರವಾಗಬಾರದು ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದರು. ಆದ್ದರಿಂದ ಸಭೆಯಲ್ಲಿಯೇ ಜನ ಸಂಪರ್ಕಕ್ಕಾಗಿ 3 ಸೂತ್ರಗಳನ್ನು ಸಿದ್ಧಪಡಿಸಲಾಗಿದೆ. ಮೂರು ಸೂತ್ರಗಳು ಹೀಗಿವೆ

ಕಾರ್ಯಕಾರಿ ಸಮತಿ ಸಭೆ ನಡೆಸುವುದು
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಈ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಆ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ಕಡ್ಡಾಯವಾಗಿ ಭಾಗವಹಿಸಬೇಕು.

ಸಾಧನೆಯನ್ನು ಜನರಿಗೆ ತಲುಪಿಸಬೇಕು
ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷಗಳು ಕಳೆದಿವೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಜೂನ್ ಅಥವಾ ಜುಲೈ ನಲ್ಲಿ ಕಾಂಗ್ರೆಸ್ ಪ್ರತಿನಿಧಿಗಳ ನಡೆಸುವುದು. ಸಭೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುವುದು.

ಸಚಿವರು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಬೇಕು
ಎಲ್ಲಾ ಸಚಿವರು ತಮ್ಮ ಜಿಲ್ಲಾ ಕೇಂದ್ರದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಈ ಧೋರಣೆಯನ್ನು ಬಿಟ್ಟು ಎಲ್ಲ ಜಿಲ್ಲೆಗಳ ಪ್ರವಾಸವನ್ನು ಕೈಗೊಳ್ಳಬೇಕು. ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಭೆಗಳನ್ನು ನಡೆಸಿ, ಈ ಕುರಿತ ವರದಿಯನ್ನು ಕೆಪಿಸಿಸಿಗೆ ನೀಡಬೇಕು.

ಸಭೆಯಲ್ಲಿ ಚರ್ಚಿಸಿದ ಇತರ ವಿಷಯಗಳು
ಸಮನ್ವಯ ಸಮಿತಿ ಸಭೆಯಲ್ಲಿ ಜೂನ್ ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ನಾಮ ನಿರ್ದೇಶನ, ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಮುಂತಾದ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

ನೂತನ ಸಮಿತಿ ರಚನೆ
ಕಗ್ಗಂಟಾಗಿರುವ ನಿಗಮ-ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ನೇಮಕ ಕುರಿತು ವರದಿ ನೀಡಲು ಒಂದು ಸಮತಿ ರಚನೆ ಮಾಡಲು ಸಮನ್ವಯ ಸಮಿತಿ ನಿರ್ಧರಿಸಿದೆ. ಪಕ್ಷದ ಹಿರಿಯ ನಾಯಕರು ಈ ಸಭೆಯಲ್ಲಿರುತ್ತಾರೆ. ಈ ಸಮಿತಿ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಿ ನೀಡಲಿದೆ. ಅದರ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.












Click it and Unblock the Notifications