ಎಐಸಿಸಿ ಪುನಾರಚನೆ: ಖಾಯಂ ಆಹ್ವಾನಿತರಾದ ಕೆ.ಎಚ್. ಮುನಿಯಪ್ಪ!
ಬೆಂಗಳೂರು, ಸೆ. 12: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಎಐಸಿಸಿ ಸಿಡಬ್ಲ್ಯೂಸಿ ಖಾಯಂ ಆಹ್ವಾನಿತರನ್ನಾಗಿ ಮುಂದುವರೆಸಲಾಗಿದೆ. ಉಪ ಚುನಾವಣೆಯ ಸೋಲಿನ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಕೊಟ್ಟಿದ್ದರು. ಆಗ ಮಾಜಿ ಸಚಿವ ಎಚ್.ಕೆ. ಪಾಟೀಲ್, ಡಿಕೆಶಿ ಅವರೊಂದಿಗೆ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೂಡ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಭಾರಿ ಲಾಬಿ ನಡೆಸಿದ್ದರು.
ಸತತವಾಗಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುತ್ತಲೆ ಬಂದಿರುವ ಕೆ.ಎಚ್. ಮುನಿಯಪ್ಪ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನುಂಡಿದ್ದಾರೆ. ಸತತವಾಗಿ ಏಳು ಬಾರಿ ಸಂಸದರಾಗಿ ಮುನಿಯಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರೂ ಪೂರ್ಣ ಪ್ರಮಾಣದ ಮಂತ್ರಿ ಪದವಿ ಜವಾಬ್ದಾರಿಯನ್ನು ಅವರಿಗೆ ಹೈಕಮಾಂಡ್ ಕೊಟ್ಟಿರಲಿಲ್ಲ.
ಪ್ರತಿ ಬಾರಿ ಮಂತ್ರಿಯಾದಾಗಲೂ ಕೇಂದ್ರ ರಾಜ್ಯ ಖಾತೆ ಸಚಿವ ಸ್ಥಾನಕ್ಕೆ ಅವರು ತೃಪ್ತಿ ಪಟ್ಟುಕೊಳ್ಳುವಂತಾಗಿತ್ತು. ಜೊತೆಗೆ ಮುನಿಯಪ್ಪ ಅವರು ಕೋಲಾರ ಭಾಗದ ಪರಿಶಿಷ್ಟ ಸಮುದಾಯದ ಪ್ರಭಾವಿ ನಾಯಕರೂ ಹೌದು. ಹೀಗಾಗಿ ಪಕ್ಷ ಸಂಘಟನೆಯಲ್ಲಿ ಅವರನ್ನು ತೊಡಗಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಈ ಬಾರಿಯೂ ಅವರನ್ನು ಸಿಡಬ್ಲ್ಯೂಸಿಯ ಖಾಯಂ ಆಹ್ವಾನಿತರನ್ನಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಪರಿಶಿಷ್ಟ ಸಮುದಾಯಕ್ಕೆ ಮನ್ನಣೆಯನ್ನೂ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿದೆ.

ಗಾಂಧಿ ಕುಟುಂಬದ ಪರಮ ನಿಷ್ಠರಲ್ಲಿ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಕೂಡ ಒಬ್ಬರು. ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಗಾಂಧಿ ಕುಟುಂಬದಿಂದ ಮಾತ್ರ ಕಾಂಗ್ರೆಸ್ ಪಕ್ಷ ಉಳಿಯುವುದು ಸಾಧ್ಯ ಎಂದು ಪ್ರತಿಪಾದಿಸುವವರು. ಹೀಗಾಗಿ ಹೈಕಮಾಂಡ್ ಕೆ.ಎಚ್. ಮುನಿಯಪ್ಪ ಅವರ 'ಕೈ' ಹಿಡಿದಿದೆ.












Click it and Unblock the Notifications