ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗುವವರು ಯಾರು?, ಪಟ್ಟಿ!
Recommended Video

ಬೆಂಗಳೂರು, ಮೇ 27 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಈ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ 22, ಜೆಡಿಎಸ್ 12 ಸಚಿವ ಸ್ಥಾನಗಳನ್ನು ಪಡೆಯಲಿವೆ. ಕಾಂಗ್ರೆಸ್ ಪಕ್ಷದಿಂದ ಯಾರು ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ? ಎಂಬ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸಚಿವ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ದೆಹಲಿಯಲ್ಲಿ ಸಭೆ ನಡೆಸುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿವಾಸದಲ್ಲಿ ಶನಿವಾರ ನಡೆದ ಸಭೆ ಅಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 18 ಶಾಸಕರು ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ.
ಭಾನುವಾರ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಲಿದ್ದು, ಅದಕ್ಕೂ ಮೊದಲು ಸಚಿವರ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದೆ...

ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಸೇರಲಿದ್ದಾರೆ. ಅವರಿಗೆ ಯಾವ ಖಾತೆ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಜಿ.ಪರಮೇಶ್ವರ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಗೃಹ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈಗಲೂ ಅವರಿಗೆ ಗೃಹ ಖಾತೆ ಸಿಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಡಿ.ಕೆ.ಶಿವಕುಮಾರ್
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರ ಮಹತ್ವದ್ದು. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಸಂಪುಟ ಸೇರುವುದು ಖಚಿತ. ಆದರೆ, ಯಾವ ಖಾತೆ ಸಿಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.

ರಾಮಲಿಂಗಾ ರೆಡ್ಡಿ
ಬೆಂಗಳೂರಿನ ಬಿ.ಟಿ.ಎಂ.ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಸೇರುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಿಗೆ ಸರಿಯಾದ ಖಾತೆಯನ್ನು ನೀಡಬೇಕಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ರಾಮಲಿಂಗಾ ರೆಡ್ಡಿ ಅವರು ಸಾರಿಗೆ, ಗೃಹ ಖಾತೆಯನ್ನು ನಿಭಾಯಿಸಿದ್ದರು. ಸಾರಿಗೆ ಖಾತೆ ಪುನಃ ರಾಮಲಿಂಗಾ ರೆಡ್ಡಿ ಅವರಿಗೆ ಸಿಗುವ ಸಾಧ್ಯತೆ ಇದೆ.

ಕೆ.ಜೆ.ಜಾರ್ಜ್
ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಅವರು ಸಿದ್ದರಾಮಯ್ಯ ಅವರ ಆಪ್ತರು. ಎಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಅವರು ಸೇರುವುದು ಖಚಿತವಾಗಿದೆ. ಆದರೆ, ಯಾವ ಖಾತೆ? ಎಂದು ಕಾದು ನೋಡಬೇಕು.
ಕೆ.ಜೆ.ಜಾರ್ಜ್ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪುನಃ ಸಂಪುಟ ಸೇರಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದರು. ಈ ಬಾರಿಯೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಅವರಿಗೆ ಒಲಿಯುವ ಸಾಧ್ಯತೆ ಇದೆ.

ಎಸ್.ಆರ್.ಪಾಟೀಲ್
ವಿಧಾನಪರಿಷತ್ ಕೋಟಾದಡಿ ಎಸ್.ಆರ್.ಪಾಟೀಲ್ ಅವರು ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಎಸ್.ಆರ್.ಪಾಟೀಲ್ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ-ಬಿಟಿ ಸಚಿವರಾಗಿದ್ದರು. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದರು.

ಎಂ.ಬಿ.ಪಾಟೀಲ
ಲಿಂಗಾಯತ ಸಮುದಾಯದ ಕೋಟಾದಡಿ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದರು. ಈಗಲೂ ಅದೇ ಖಾತೆ ಅವರ ಹೆಗಲೇರುವ ಸಾಧ್ಯತೆ ಇದೆ.

ಲಕ್ಷ್ಮೀ ಹೆಬ್ಬಾಳ್ಕರ್
ಮಹಿಳಾ ಕೋಟಾದಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಸಾಧ್ಯತೆ ಇದೆ
ಮತ್ತೊಂದು ಕಡೆ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಾ ಶಶಿಧರ್ ಅವರ ಹೆಸರು ಸಹ ಕೇಳಿಬರುತ್ತಿದೆ. ರೂಪಾ ಶಶಿಧರ್ ಅವರು ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್.ಮುನಿಯಪ್ಪ ಪುತ್ರಿ. ಯಾರಿಗೆ ಸಚಿವ ಸ್ಥಾನ ಸಿಗಲಿದೆ? ಎಂದು ಕಾದು ನೋಡಬೇಕು.

ಆರ್.ವಿ.ದೇಶಪಾಂಡೆ
ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ನಿರೀಕ್ಷೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಆರ್.ವಿ.ದೇಶಪಾಂಡೆ ಅವರು ಪ್ರವಾಸೋದ್ಯಮ, ಬೃಹತ್ ಕೈಗಾರಿಕಾ ಖಾತೆ ಸಚಿವರಾಗಿದ್ದರು.

ಸತೀಶ್ ಜಾರಕಿಹೊಳಿ
ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿಯೂ ಅವರು ಅಬಕಾರಿ ಸಚಿವರಾಗಿದ್ದರು. ಬಳಿಕ ಖಾತೆ ಬದಲಾವಣೆ ಮಾಡಿ ಸಣ್ಣ ಕೈಗಾರಿಕಾ ಖಾತೆ ನೀಡಲಾಗಿತ್ತು. ಸಂಪುಟ ಪುನಾರಚನೆ ಸಮಯದಲ್ಲಿ ಅವರನ್ನು ಕೈ ಬಿಟ್ಟು ಸಹೋದರ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು.

ಯು.ಟಿ.ಖಾದರ್, ತನ್ವೀರ್ ಸೇಠ್
ಅಲ್ಪಸಂಖ್ಯಾತರ ಕೋಟಾದಡಿ ಯು.ಟಿ.ಖಾದರ್ ಮತ್ತು ತನ್ವೀರ್ ಸೇಠ್ ಅವರ ಹೆಸರು ಕೇಳಿಬರುತ್ತಿದೆ. ಇಬ್ಬರಲ್ಲಿ ಒಬ್ಬರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಯು.ಟಿ.ಖಾದರ್ ಸಿದ್ದರಾಮಯ್ಯ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದರು, ಬಳಿಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದರು. ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದರು.

ಹಲವು ಶಾಸಕರ ಹೆಸರು
ಮೊದಲ ಹಂತದಲ್ಲಿ 18 ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಸಾಧ್ಯತೆ ಇದೆ. ಶಾಸಕರ ಹೆಸರು ಇಲ್ಲಿವೆ...
* ಡಾ.ಸುಧಾಕರ್/ಶಿವಶಂಕರ ರೆಡ್ಡಿ
* ಪ್ರಿಯಾಂಕ ಖರ್ಗೆ/ಅಜಯ್ ಸಿಂಗ್
* ಸಿ.ಎಸ್.ಶಿವಳ್ಳಿ/ಎಂ.ಟಿ.ಬಿ.ನಾಗರಾಜ್
* ನಾಗೇಂದ್ರ/ಆನಂದ್ ಸಿಂಗ್
* ಕೃಷ್ಣ ಬೈರೇಗೌಡ/ಎಂ.ಕೃಷ್ಣಪ್ಪ












Click it and Unblock the Notifications