ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದಲ್ಲೇ ಗುಡುಗಿದ ಕಾಂಗ್ರೆಸ್ ಶಾಸಕ
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದಲ್ಲಿ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರೇ ಚಾಟಿ ಬೀಸಿರುವುದು ನಡೆದಿದೆ. ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕಾಂಗ್ರೆಸ್ ಶಾಸಕರು ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದು, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಬಗ್ಗೆ ಕಾಂಗ್ರೆಸ್‌ನ ಶಾಸಕರೇ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದು, ಇದು ಸರ್ಕಾರಕ್ಕೆ ತೀವ್ರ ಮುಜುಗರವನ್ನು ಉಂಟು ಮಾಡಿದೆ.
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಶಾಸಕ ಭರತ್ ರೆಡ್ಡಿ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬಳ್ಳಾರಿಯಲ್ಲಿರುವ ಬಿಮ್ಸ್ ಆಸ್ಪತ್ರೆಗೆ ನೆರೆಯ ಆಂಧ್ರಪ್ರದೇಶ ಕರ್ನೂಲ್, ಅನಂತಪುರ, ವಿಜಯನಗರ ಹಾಗೂ ಬಳ್ಳಾರಿಯಿಂದ ಹಾಗೂ ಬಳ್ಳಾರಿ ಗ್ರಾಮಾಂತರ ಪ್ರದೇಶದಿಂದ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಿಂದ ಸಾಕಷ್ಟು ಜನ ಬರ್ತಾರೆ. ಆದರೆ, ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಬಗ್ಗೆ ಜನ ಆತಂಕಗೊಂಡಿದ್ದಾರೆ. ಈ ಆಸ್ಪತ್ರೆಗೆ ಹೋದರೆ, ನಾವು ಶವವಾಗಿ ಬರ್ತೀವಿ ಅಂತ ಜನ ಭಯ ಬೀಳುತ್ತಿದ್ದಾರೆ. ಇಲ್ಲಿನ ಆಸ್ಪತ್ರೆಯ ವ್ಯವಸ್ಥೆ ಅಷ್ಟೊಂದು ಹಾಳಾಗಿ ಹೋಗಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿ ಬಿಮ್ಸ್‌ಗೆ ತನ್ನದೇ ಖ್ಯಾತಿ ಇದೆ. ಈ ಆಸ್ಪತ್ರೆಯ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿತ್ತು. ಆದರೆ, ಈಗ ಪರಿಸ್ಥಿತಿ ಚಿಂತಾಜನಕವಾಗಿದೆ. ಇಲ್ಲಿನ ಆರೋಗ್ಯ ಸೇವೆಯ ಬಗ್ಗೆ ಮೆಚ್ಚುಗೆ ಇತ್ತು. ಈ ಆಸ್ಪತ್ರೆಗೆ ಹೋದರೆ ಬದುಕಿ ಬರುತ್ತೇವೆ ಎಂದು ಜನ ನಂಬಿಕೆ ಇರಿಸಿದ್ದರು. ಅದು ಇಂದು ಜನರಲ್ಲಿ ಉಳಿದಿಲ್ಲ. ಎಂಆರ್‌ಐ, ಸೀಟಿ ಸ್ಕ್ಯಾನ್ ಹಾಗೂ ಎಕ್ಸರೆ ಸೇರಿದಂತೆ ಹಲವು ಉಪಕರಣಗಳು ಹಾಳಾಗಿವೆ. ಎಲ್ಲವೂ ದುರಸ್ತಿಯಲ್ಲಿ ಇವೆ. ಡಯಲಿಸಿಸ್ ಯಂತ್ರಗಳು 14 ಯಂತ್ರಗಳು ಇದ್ದರೂ ಬಳಕೆಯಾಗುತ್ತಿರುವುದು ನಾಲ್ಕು ಮಾತ್ರ.
ಜನ ನಮ್ಮ ಬಳಿ ದುಡ್ಡು ಇಲ್ಲ ಅಂತ ಅಲ್ವಾ ಸರ್ ನೀವು ನಮ್ಮನ್ನು ಇಷ್ಟೊಂದು ಪೀಡಿಸಿಕೊಂಡು ತಿಂತಿದ್ದೀರಿ ನಮ್ಮ ಬಳಿ ದುಡ್ಡಿದಿದ್ದರೆ ನಾವು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ವಿ ಅಂತ ಕಣ್ಣೀರಿಡುತ್ತಿದ್ದಾರೆ ಎಂದು ಅತ್ಯಂತ ನೋವಿನಿಂದಲೇ ಈ ವಿಚಾರವನ್ನು ವಿಧಾನಸಭೆಯಲ್ಲಿ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಿಂದಲೂ ವಿರೋಧ ವ್ಯಕ್ತವಾಗುತ್ತಿದೆ.
ಚಾಟಿ ಬೀಸಿದ ಬಿಜೆಪಿ: ಇನ್ನು ಇದೇ ವಿಚಾರವಾಗಿ ಬಿಜೆಪಿ ಸಹ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬಳ್ಳಾರಿ ಭಾಗದ ಜನತೆಗೆ ಬ್ರಿಮ್ಸ್ ಆಸ್ಪತ್ರೆ ಹೇಗೆ ಯಮಲೋಕವಾಗಿದೆ ಎಂಬುದನ್ನು ಕಾಂಗ್ರೆಸ್‌ನ ಶಾಸಕ ಭರತ್ ರೆಡ್ಡಿಯವರು ಸದನದ ಮುಂದೆ ಬಿಚ್ಚಿಟ್ಟಿದ್ದಾರೆ. ಈ ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಹೋದವರಿಗಿಂತ, ಹೆಣವಾಗಿ ಹೊರ ಹೋದವರ ಸಂಖ್ಯೆ ಹೆಚ್ಚು ಎಂಬುದು ಅತ್ಯಂತ ಕಳವಳಕಾರಿಯಾದ ಸಂಗತಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಮುಂದುವರಿದು ಅನಾರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೆ, ಸಚಿವರಾಗಿ ನಿಮ್ಮ ಇಲಾಖೆಯ ರಿಪೋರ್ಟ್ ಕಾರ್ಡ್ ಅನ್ನು ನಿಮ್ಮ ಪಕ್ಷದ ಶಾಸಕರೇ ಸದನದ ಮುಂದೆ ಬಿಚ್ಚಿಟ್ಟಿದ್ದಾರೆ. ನಿಮಗೆ ಕಿಂಚಿತ್ತಾದರೂ ಮಾನ-ಮರ್ಯಾದೆ-ಪಾಪಪ್ರಜ್ಞೆ ಇದ್ದರೆ ಮೊದಲು ನಿಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಬಿಜೆಪಿ ಆಗ್ರಹಿಸಿದೆ.
ಸರ್ಕಾರದ ಹಾಗೂ ಆರೋಗ್ಯ ಸಚಿವರ ತಪ್ಪುಗಳನ್ನು ಕಾಂಗ್ರೆಸ್‌ನ ಶಾಸಕರೇ ಸದನದಲ್ಲಿ ತೆರೆದಿಟ್ಟಿದ್ದಾರೆ. ಇನ್ನಾದರೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಕೊಡಲಿ ಎಂದು ಬಿಜೆಪಿ ಹೇಳಿದೆ.












Click it and Unblock the Notifications