ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆಗೆ ಕಾರಣ ಬಹಿರಂಗ, ಏನದು?
ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಆದರೆ ಇದಕ್ಕೆ ನಿಖರ ಕಾರಣಗಳು ತಿಳಿಸಿರಲಿಲ್ಲ. ಇಂದು ತಮ್ಮ ರಾಜೀನಾಮೆ ಬಗ್ಗೆ ಮಾತನಾಡಿರುವ ಬಿ.ಆರ್.ಪಾಟೀಲ್ ಅವರು ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಸ್ಪಷ್ಟನೆ ನೀಡಿರುವ ಅವರು ನಿನ್ನೆ ಮೊನ್ನೆ ರಾಜೀನಾಮೆ ನೀಡಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ವಿವರವಾದ ಪತ್ರ ಬರೆದಿದ್ದೇನೆ. ಸಿದ್ದರಾಮಯ್ಯ ಅವರು ಕರೆ ಮಾಡಿದರೆ ಅವರೊಂದಿಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ರಾಜೀನಾಮೆ ನೀಡಲು ಹಲವಾರು ಕಾರಣಗಳಿವೆ. ಆದರೆ ನಾನು ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ನಾನು ನನ್ನ ರಾಜೀನಾಮೆಯನ್ನು ಯಾವ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದಾಗಿ ನಮ್ಮ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ, ಅಲ್ಲದೆ ನಾನು ಸುಖಾಸುಮ್ಮನೆ ರಾಜೀನಾಮೆ ಕೊಟ್ಟಿಲ್ಲ. ಕೆಲವು ಸಮಸ್ಯೆಗಳು ಇರುವ ಕಾರಣದಿಂದ ನಾನು ರಾಜೀನಾಮೆ ನೀಡಿದ್ದೇನೆ. ಇನ್ನು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿರುವುದು ವಿಶೇಷವೇನಲ್ಲ. ನಾನು ಮೊದಲೇ ರಾಜೀನಾಮೆ ಕೊಡಬೇಕಿತ್ತು. ಆದರೆ ಈಗ ರಾಜೀನಾಮೆ ನೀಡುವ ಸಂದರ್ಭ ಬಂದಿದೆ ಎಂದಿದ್ದಾರೆ.
ನಾನು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡನೇ ಪತ್ರ ಬರೆದಿದ್ದೇನೆ. ಮುಡಾ ಕೇಸ್‌ನಿಂದಾಗಿ ಸಿದ್ದರಾಮಯ್ಯ ಅವರು ಸದ್ಯ ಬಹಳ ಒತ್ತಡದಲ್ಲಿದ್ದಾರೆ. ಕೊನೆವರೆಗೂ ನನ್ನೊಂದಿಗೆ ಇರುವುದಾಗಿ ತಿಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಬರುತ್ತಿಲ್ಲ. ಇದರಿಂದ ನನಗೆ ಯಾವ ಅಸಮಾಧಾನವೂ ಇಲ್ಲ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ಎಲ್ಲವನ್ನೂ ನಾನು ತಿಳಿಸಿದ್ದೇನೆ. ಎದುರಾಗಿರುವ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಿಲ್ಲ ಎಂದು ಬಿಆರ್ ಪಾಟೀಲ್ ತಿಳಿಸಿದ್ದಾರೆ. ಆದರೆ ಅಸಲಿಗೆ ಪಾಟೀಲ್ ಅವರು ತಮ್ಮ ಕ್ಷೇತ್ರಕ್ಕೆ ಆಳಂದಕ್ಕೆ ಹೆಚ್ಚಿನ ಅನುದಾನವನ್ನು ಮೊದಲಿನಿಂದಲೂ ಬಯಸಿದ್ದರು. ಅಲ್ಲದೆ ಸಚಿವ ಸ್ಥಾನದ ಆಕಾಂಕ್ಷಿಯೂ ಎನ್ನಲಾಗಿದೆ.
ಸಚಿವ ಸ್ಥಾನ ಸಿಗದ ಕಾರಣ ಕೊನೆಗೆ ಕ್ಷೇತ್ರಕ್ಕಾದರೂ ಹೆಚ್ಚಿನ ಅನುದಾನ ಸಿಗುತ್ತದೆ ಎಂದು ನಿರೀಕ್ಷಿಸಿದ್ದರು. ಇದು ಸಾಧ್ಯವಾಗದ ಕಾರಣ ಅವರು ಮನನೊಂದು ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ರಾಜೀನಾಮೆ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದು, ಈ ಬಜೆಟ್‌ನಲ್ಲಿ ಹೆಚ್ಚು ಅನುದಾನಕ್ಕೆ ಬೇಡಿಕೆ ಇಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಿಎಂ ಹೇಳಿದ್ದೇನು?: ಇನ್ನು ಬಿ.ಆರ್.ಪಾಟೀಲ್ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ. ನಾನು ಪಾಟೀಲ್ ಅವರೊಂದಿಗೆ ಮಾತನಾಡುತ್ತೇನೆ. ರಾಜೀನಾಮೆ ಪತ್ರವು ಬೆಂಗಳೂರಿನಿಂದ ಬಂದಿದ್ದು, ನಾನು ಇನ್ನೂ ಪತ್ರವನ್ನು ಓದಿಲ್ಲ. ನಾನು ಪಾಟೀಲ್ ಅವರಿಗೆ ಕರೆ ಮಾಡಿ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications