ಪಕ್ಷ ಸಂಘಟನೆಗೆ ‘ಹೈ’ ಸೂಚನೆ: ಮೈಕೊಡವಿ ಮೇಲೇಳುತ್ತಾ ಕಾಂಗ್ರೆಸ್?

ಬೆಂಗಳೂರು, ಫೆಬ್ರವರಿ 22: ದೆಹಲಿ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ಹಿಂದಿನ ಕಾರಣಗಳು ಕೈ ನಾಯಕರ ಅರಿವಿಗೆ ಬಂದಂತೆ ಗೋಚರಿಸುತ್ತಿದೆ. ಚುನಾವಣೆ ವೇಳೆಯಲ್ಲಿ ಅಖಾಡಕ್ಕಿಳಿದು ಪ್ರಚಾರ ಮಾಡಿದ ತಕ್ಷಣ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅದಾನಿ, ಅಂಬಾನಿ ಬಗ್ಗೆ ಬೊಬ್ಬೆಹೊಡೆದರೆ, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಪರವಾಗಿ ಕಣ್ಣೀರು ಸುರಿಸಿದರೆ, ಗ್ಯಾರಂಟಿ ಯೋಜನೆ ಘೋಷಿಸಿದರೆ.. ಇದ್ಯಾವುದೂ ಮತವಾಗಿ ಪರಿವರ್ತನೆಯಾಗಲ್ಲ ಎಂಬ ಸತ್ಯ ಗೊತ್ತಾಗಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕರಿಗೆ ಪಕ್ಷ ಸಂಘಟನೆಯತ್ತ ಮುಖ ಮಾಡಲು ಸೂಚನೆ ನೀಡಿದ್ದಾರೆ.

ಸುಮಾರು 60ಕ್ಕೂ ಹೆಚ್ಚು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷಕ್ಕೆ ಇವತ್ತು ಬಹಳಷ್ಟು ರಾಜ್ಯಗಳಲ್ಲಿ ಕಾರ್ಯಕರ್ತರ ಪಡೆಯೇ ಇಲ್ಲದಂತಾಗಿದೆ. ಕಾಂಗ್ರೆಸ್ ಈಗಾಗಲೇ ಬಹಳಷ್ಟು ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದೆ. ಅಲ್ಲೆಲ್ಲ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಗೆಲುವಿನ ಕಡೆಗೆ ಕೊಂಡೊಯ್ಯುವ ನಾಯಕರ ಸಂಖ್ಯೆ ಕ್ಷೀಣಿಸಿದೆ. ಏಕ ಪಕ್ಷವಾಗಿ ಮುನ್ನಡೆಯುವ ಸಾಮರ್ಥ್ಯ ಕಳೆದು ಕೊಂಡಿರುವ ಕಾಂಗ್ರೆಸ್ ಗೆ ಊರುಗೋಲಾಗಿ ನಿಲ್ಲುವ ಪ್ರಾದೇಶಿಕ ಪಕ್ಷದ ಅಗತ್ಯತೆ ಎದ್ದು ಕಾಣಿಸುತ್ತಿದೆ.

Congress Leadership Restructuring Indications After Election Losses

ಕೇಂದ್ರಮಟ್ಟದಲ್ಲಿ ಒಂದಷ್ಟು ನಾಯಕರಿದ್ದರೂ ಕರ್ನಾಟಕ ಹೊರತು ಪಡಿಸಿ ಹೆಚ್ಚಿನ ರಾಜ್ಯಗಳಲ್ಲಿ ನಾಯಕರ ಕೊರತೆ ಎದುರಾಗಿದೆ. ಅಲ್ಲದೆ ನೆಹರು ಕುಟುಂಬದ ಆಚೆ ನಿಂತು ಪಕ್ಷವನ್ನು ಕಟ್ಟಿ ಬೆಳೆಸುವ ಸಾಮರ್ಥ್ಯವೂ ನಾಯಕರಿಗೆ ಇಲ್ಲದಾಗಿದೆ. ಜೊತೆಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ಬದಿಗಿಟ್ಟು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಯಾವುದೇ ನಾಯಕರಿಗೆ ಇಲ್ಲದಾಗಿದೆ. ಹೀಗಾಗಿ ಪಕ್ಷದಲ್ಲಿ ಸಂಘಟನಾ ಚತುರತೆ ಹೊಂದಿದ ನಾಯಕರಿದ್ದರೂ ಅವರು ಹೇಳಿಕೆಗಳನ್ನು ನೀಡುವುದಕ್ಕಷ್ಟೆ ಸೀಮಿತರಾಗುತ್ತಿದ್ದಾರೆ. ಹೀಗಾಗಿ ಪ್ರತಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಿದೆ.

ಕಾಂಗ್ರೆಸ್‌ನ ಹಳೆಯ ತಂತ್ರಗಳು ಫಲಕೊಡಲ್ಲ!

ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 100ರಷ್ಟು ಸ್ಥಾನ ಪಡೆದಿದ್ದು ಒಂದು ಸಾಧನೆಯಂತೆ ಕಂಡು ಬಂದರೂ ಅಷ್ಟು ಸೀಟು ಪಡೆಯಲು ಕಾರಣವಾಗಿದ್ದು ಇಂಡಿ ಒಕ್ಕೂಟದ ನಾಯಕರು ನೀಡಿದ ಸಾಥ್ ಮತ್ತು ಹೊರಗಿನಿಂದ ಹರಿದು ಬಂದ ಸಂಪನ್ಮೂಲ ಎನ್ನುವುದು ಕೂಡ ಅಷ್ಟೇ ಸತ್ಯ. ಬಹುಶಃ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ನ ಹಳೆಯ ತಂತ್ರಗಳು ಯಾವುದೂ ನಡೆಯುವುದಿಲ್ಲ ಎನ್ನುವುದು ಗೊತ್ತಿರು ವಿಚಾರವೇ.. ಏಕೆಂದರೆ ಮುಂದೆ ಬಿಹಾರ, ಕೇರಳ, ಮೊದಲಾದ ಕಡೆಗಳಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಮೈತ್ರಿ ಮುಂದುವರೆಯುತ್ತಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಲೋಕಸಭಾ ಚನಾವಣೆಯಲ್ಲಿ ಬಿಜೆಪಿ ಅಜೆಂಡಾವನ್ನು ಇಷ್ಟಪಡದ ಕೆಲವೊಂದು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜತೆಗೆ ಕೈಜೋಡಿಸಿವೆ. ಹೀಗಾಗಿ ಇಂಡಿಕೂಟ ರಚನೆಯಾಗಿ ಹಿಂದಿನ ಯುಪಿಎಗೆ ಹೋಲಿಸಿದರೆ 2024ರ ಚುನಾವಣೆಯಲ್ಲಿ ಒಂದೊಳ್ಳೆಯ ಸಾಧನೆ ಮಾಡಿವೆ ಎಂದೇ ಹೇಳಬೇಕಾಗುತ್ತದೆ. ಆದರೆ ಲೋಕಸಭಾ ಚುನಾವಣೆ ಕಳೆದು ವರ್ಷವಾಗುವ ಮುನ್ನವೇ ಎರಡು ಬಲಿಷ್ಠ ಪಕ್ಷಗಳಾದ ಟಿಎಂಸಿ ಮತ್ತು ಎಎಪಿ ಕಾಂಗ್ರೆಸ್ ನ ಸಖ್ಯ ಕಳೆದುಕೊಂಡಿವೆ. ಇವತ್ತು ದೆಹಲಿಯಲ್ಲಿ ಎಎಪಿ ಅಧಿಕಾರ ಕಳೆದುಕೊಂಡಿದ್ದರೆ ಅದಕ್ಕೆ ಕಾಂಗ್ರೆಸ್ ಕೂಡ ಕಾರಣವೇ..

Congress Leadership Restructuring Indications After Election Losses

ಪಕ್ಷ ಸಂಘಟನೆಗೆ 'ಕೈ' ನಾಯಕರಿಗೆ ಖರ್ಗೆ ಸೂಚನೆ

ಸುಮಾರು ಹನ್ನೆರಡು ವರ್ಷಗಳ ಎಎಪಿ ಸಾಮ್ರಾಜ್ಯ ಇವತ್ತು ಕಳಚಿ ಬಿದ್ದಿದೆ ಎಂದರೆ ಅದರಲ್ಲಿ ಒಂದಷ್ಟು ಕಾಂಗ್ರೆಸ್ ನ ಪಾಲಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಚುನಾವಣೆಯಲ್ಲಿ ಬಿಜೆಪಿಯನ್ನು ಹೆಚ್ಚು ಟಾರ್ಗೆಟ್ ಮಾಡಲೇ ಇಲ್ಲ. ಎಎಪಿಯನ್ನೇ ಟಾರ್ಗೆಟ್ ಮಾಡಿತು. ಲೋಕಸಭೆಯಲ್ಲಿ ದೋಸ್ತಿಗಳಾಗಿದ್ದವರು ದೆಹಲಿ ಚುನಾವಣೆಯಲ್ಲಿ ಎದುರು ನಿಂತು ಹೋರಾಡಿದರ ಪರಿಣಾಮ ಬಿಜೆಪಿಗೆ ಲಾಭವಾಯಿತು.

ಇದು ಎಎಪಿ ನಾಯಕರಿಗೆ ಕಾಂಗ್ರೆಸ್ ನೀಡಿದ ಶಾಕ್. ಲೋಕಸಭೆಯ ನಂತರ ಇಂಡಿಕೂಟದ ನಾಯಕರು ಒಂದೆಡೆ ಸೇರಿ ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಚರ್ಚೆ ಮಾಡುವುದಾಗಲೀ, ನಾಯಕತ್ವವನ್ನು ಯಾರಿಗೆ ವಹಿಸಬೇಕೆನ್ನುವ ಕುರಿತಾಗಲೀ ಯಾವುದೇ ತೀರ್ಮಾನ ಮಾಡಿಲ್ಲ. ಸದ್ಯ ಇಂಡಿಕೂಟ ನಾವಿಕನಿಲ್ಲದ ಹಡಗಿನಂತೆ ದಿಕ್ಕಾಪಾಲಾಗಿದೆ.

ಸದ್ಯ ಕಾಂಗ್ರೆಸ್ ನಾಯಕರಿಗೂ ಒಂದು ವಿಚಾರ ಮನದಟ್ಟಾಗಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆ ನಮ್ಮೊಂದಿಗೆ ಈಗಿರುವ ಪಕ್ಷಗಳ ಪೈಕಿ ಒಂದಷ್ಟು ನಾಯಕರು ಕೈ ಬಿಟ್ಟು ಹೋಗುವ ಸಾಧ್ಯತೆಯಿದೆ. ಅದಕ್ಕಿಂತ ಹೆಚ್ಚಾಗಿ ಮುಂದಿನ ವಿಧಾನಭಾ ಚುನಾವಣೆ ವೇಳೆಗೆ ಈಗ ತಮ್ಮೊಂದಿಗಿರುವವರೇ ತಮ್ಮ ಎದುರಾಳಿಯಾಗಬಹುದು. ಹೀಗೆ ಆದರೆ ದೆಹಲಿಯಲ್ಲಿ ಆದ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ. ಆದ್ದರಿಂದ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಮುಂದಾಗುವ ತೀರ್ಮಾನಕ್ಕೆ ಬಂದಿದೆ. ಈಗಾಗಲೇ ನಾಯಕರಿಗೂ ಖಡಕ್ ಸಂದೇಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರವಾನಿಸಿದ್ದಾರೆ.

Congress Leadership Restructuring Indications After Election Losses

ಕಾರ್ಯಕರ್ತರ ಪಡೆ ಕಟ್ಟುವುದೇ ಕಾಂಗ್ರೆಸ್‌ಗೆ ಸವಾಲ್

ಸ್ಥಳೀಯ ಸಂಸ್ಥೆ ಚುನಾವಣೆಯಿಂದ ವಿಧಾಸಭಾ ಚುನಾವಣೆವರೆಗೆ ಎಲ್ಲ ಚುನಾವಣೆಯಲ್ಲಿ ಗೆದ್ದು, ಗೆಲ್ಲಿಸಿಕೊಂಡು ಬರುವ ತಾಕತ್ ತೋರಿಸುವಂತೆ ಹೇಳಿದ್ದಾರೆ. ತಳಮಟ್ಟದಿಂದಲೇ ದುರ್ಬಲಗೊಂಡಿರುವ ಪಕ್ಷವನ್ನು ಮೇಲೆತ್ತುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಮೇಲ್ಮಟ್ಟದ ನಾಯಕರ ನಡೆ, ನುಡಿ, ಅವರು ನೀಡುವ ಹೇಳಿಕೆಗಳು ತಳಮಟ್ಟದವರೆಗೆ ಪರಿಣಾಮ ಬೀರುತ್ತಿದೆ. ಮತದಾರರು ಜಾಗೃತರಾಗಿದ್ದಾರೆ. ಎಲ್ಲವನ್ನು ಗಮನಿಸುತ್ತಿದ್ದಾರೆ. ಹೀಗಾಗಿ ತಳಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನು ಕಟ್ಟುವುದು ಕಾಂಗ್ರೆಸ್ ಗೆ ಸವಾಲ್ ಆಗಿದೆ.

ದಕ್ಷಿಣ ಭಾರತದ ಪೈಕಿ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಹಾಗೆಂದು ಬುಡವನ್ನು ಅಲುಗಾಡಿಸುವ ಮಟ್ಟಕ್ಕೆ ಗಟ್ಟಿಯಾಗಿದೆ ಎನ್ನುವುದು ಕಷ್ಟವೇ.. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಘಟಾನುಘಟಿ ನಾಯಕರಿದ್ದಾರೆ. ಅವರ ಪೈಕಿ ಕೆಲವರಿಗೆ ಅವರು ಮಾತ್ರವಲ್ಲದೆ ಬೇರೆಯವರನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯವಿದೆ. ಆದರೆ ಇಲ್ಲಿಯೂ ಅಧಿಕಾರಕ್ಕಾಗಿ ನಡೆಯುತ್ತಿರುವ ಪ್ರತಿಷ್ಠೆಯ ಹೋರಾಟ ಅರ್ಥಾತ್ ಬಣಜಗಳ ಪಕ್ಷವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತದೆಯೋ ಗೊತ್ತಿಲ್ಲ.

ದೇಶದಲ್ಲಿ ಮೇಲೆದ್ದು ನಿಲ್ಲುತ್ತಾ 'ಕೈ' ಪಡೆ

ಒಟ್ಟಾರೆಯಾಗಿ ಹೇಳಬೇಕೆಂದರೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ಕಾರ್ಯಕರ್ತರ ಪಡೆಯನ್ನು ಗಟ್ಟಿಗೊಳಿಸದೆ ಹೋದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವುದು 'ಕೈ' ನಾಯಕರಿಗೆ ಗೊತ್ತಾಗಿದೆ. ಹೀಗಾಗಿಯೇ ಪಕ್ಷ ಸಂಘಟನೆಯತ್ತ ತೊಡಗಿಸಿಕೊಳ್ಳಿ ಎಂಬ ಸೂಚನೆ ಹೈಕಮಾಂಡಿನಿಂದ ಎಲ್ಲ ಕಡೆಗೂ ರವಾನಿಸಲಾಗಿದೆ. ಆದರೆ ಕಾಂಗ್ರೆಸ್ ನಾಯಕರು ಈಗಾಗಲೇ ಮಾಡಿಕೊಂಡ ಎಡವಟ್ಟು ಪಕ್ಷವನ್ನು ಪಾತಾಳಕ್ಕೆ ತಳ್ಳಿದೆ. ಹೀಗಾಗಿ ಅದನ್ನು ಮೇಲೆತ್ತುವುದು ಅಂದುಕೊಂಡಷ್ಟು ಸುಲಭವೇನಲ್ಲ. ಆದರೆ ಅದನ್ನು ಹೇಗೆ ಮಾಡುತ್ತಾರೆ ಎನ್ನುವುದನ್ನು ಕಾದು ನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+