ಮೈತ್ರಿ ಸರ್ಕಾರದ ಸಂಪುಟ ಪುನಾರಚನೆ : 6 ಸಚಿವರು ಸಂಪುಟದಿಂದ ಔಟ್
Recommended Video
ಬೆಂಗಳೂರು, ಮೇ 27 : ಲೋಕಸಭಾ ಚುನಾವಣಾ ಫಲಿತಾಂಶದ ಬಳಿ ಕರ್ನಾಟಕದ ಮೈತ್ರಿ ಸರ್ಕಾರ ಸಂಪುಟ ಪುನಾರಚನೆಗೆ ಮುಂದಾಗಿದೆ. ಕಾಂಗ್ರೆಸ್ ಪಕ್ಷದ ಒಪ್ಪಿಗೆ ಸಿಕ್ಕಿದರೆ ಬುಧವಾರವೇ ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಮೈತ್ರಿಕೂಟ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದೆ. ಅದರ ಭಾಗವಾಗಿಯೇ ಅಸಮಾಧಾನ ಬಗೆಹರಿಸಲು ಕೆಲವು ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲಾಗುತ್ತದೆ.
ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆಗಳು ನಡೆದಿವೆ. ಸಿದ್ದರಾಮಯ್ಯ ಅವರು ಸಹ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ತಲಾ ಮೂವರು ಸಚಿವರನ್ನು ಕೈ ಬಿಡುವುದು. ಜೆಡಿಎಸ್ ಪಾಲಿನ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದು ಸದ್ಯದ ಚಿಂತನೆ. ಕೆಲವು ಹಿರಿಯ ನಾಯಕರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಪಕ್ಷ ಸಂಘಟನೆ ಹೊಣೆ ನೀಡಲು ತೀರ್ಮಾನಿಸಲಾಗಿದೆ....

ಸಂಪುಟ ಪುನಾರಚನೆ
ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಭೇಟಿ ಮಾಡಿದಾಗ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆದಿದೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಪಟ್ಟಿ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಎಲ್ಲವೂ ಸರಿಯಾದರೆ ಮೇ 29ರಂದು ಸಚಿವ ಸಂಪುಟ ಪುನಾರಚನೆ ನಡೆಯಲಿದೆ.

6 ಸಚಿವರ ಸ್ಥಾನ ಕೈ ತಪ್ಪಲಿದೆ
ಕಾಂಗ್ರೆಸ್‌ನ 3, ಜೆಡಿಎಸ್‌ನ 3 ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ. ಜೆಡಿಎಸ್ ಕೋಟಾದಲ್ಲಿ ಖಾಲಿ ಇರುವ 2 ಸಚಿವ ಸ್ಥಾನ ಭರ್ತಿ ಮಾಡಲಾಗುತ್ತದೆ. ಒಟ್ಟು 8 ಸಚಿವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟವನ್ನು ಸೇರಲಿದ್ದಾರೆ.

ಹಿಂದೆಯೇ ಸೂಚನೆ ನೀಡಲಾಗಿತ್ತು
ಲೋಕಸಭಾ ಚುನಾವಣೆ ತಯಾರಿ ಸಮಯದಲ್ಲಿಯೇ ಸಚಿವರಿಗೆ ಸಂಪುಟ ಪುನಾರಚನೆ ಬಗ್ಗೆ ಸೂಚನೆ ನೀಡಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಸೂಚಿಸಲಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆಯಲ್ಲಿ ಕೇವಲ 1 ಸ್ಥಾನ ಮಾತ್ರಗಳಿಸಿವೆ. ಈ ಫಲಿತಾಂಶ ಮುಂದಿಟ್ಟುಕೊಂಡು ಸಂಪುಟ ಪುನಾರಚನೆ ಮಾಡಲು ಸಿದ್ಧತೆ ನಡೆದಿದೆ.

ಸರ್ಕಾರ ಉಳಿಸಿಕೊಳ್ಳಬೇಕು
ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ನಡೆಸಬಹುದು. ಆದ್ದರಿಂದ, ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಅಸಮಾಧಾನಗೊಂಡಿರುವ ಶಾಸಕರಿಗೆ ಸಚಿವ ಸ್ಥಾನ ನೀಡಲು ಮೈತ್ರಿಕೂಟ ಮುಂದಾಗಿದೆ.

ಯಾವ-ಯಾವ ಸಚಿವರು?
ಕಾಂಗ್ರೆಸ್ ಪಕ್ಷದಿಂದ ಸಿ.ಎಸ್.ಪುಟ್ಟರಂಗ ಶೆಟ್ಟಿ, ಡಾ.ಜಯಮಾಲಾ, ಯು.ಟಿ.ಖಾದರ್ ಸಚಿವ ಸ್ಥಾನ ಕಳೆದುಕೊಳ್ಳಬಹುದು ಎಂಬ ಸುದ್ದಿಗಳು ಹಬ್ಬಿವೆ. ಸಚಿವ ಕೃಷ್ಣ ಬೈರೇಗೌಡ ಅವರ ಹೆಸರು ಸಹ ಕೇಳಿ ಬರುತ್ತಿದೆ.












Click it and Unblock the Notifications