ರಾಜ್ಯದ ಮಹಿಳಾ ಮತದಾರರು ಬುದ್ಧಿವಂತರಾಗಿದ್ದಾರೆ,ಕಾಂಗ್ರೆಸ್ ಪೊಳ್ಳು ಭರವಸೆಗಳಿಗೆ ಮರುಳಾಗುವುದಿಲ್ಲ: ಶಶಿಕಲಾ ಜೊಲ್ಲೆ
ಬೆಂಗಳೂರು,ಜನವರಿ 18: ನಾ ನಾಯಕಿಯಂತಹ ಕಾಂಗ್ರೆಸ್ ಕಾರ್ಯಕ್ರಮಗಳ ಪೊಳ್ಳು ಭರವಸೆಗಳಿಗೆ ಮರುಳಾಗುವಷ್ಟು ದಡ್ಡರಲ್ಲ ನಮ್ಮ ರಾಜ್ಯದ ಮಹಿಳಾ ಮತದಾರರು ಬಹಳಷ್ಟು ಬುದ್ದಿವಂತರಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ ಗಾಂಧಿ ಅವರ ನಾ ನಾಯಕಿ ಕಾರ್ಯಕ್ರಮದ ರೀತಿಯ ಗಿಮಿಕ್‍ಗಳನ್ನು ಕಾಂಗ್ರೆಸ್ ಕಾಲಕಾಲಕ್ಕೆ ಮಾಡುತ್ತಲೇ ಬಂದಿದೆ ಎಂದು ಕಾಂಗ್ರೆಸ್ ಘೋಷಣೆಗಳ ವಿರುದ್ದ ಕಿಡಿಕಾರಿದರು.
ಕೆಲವು ತಿಂಗಳ ಹಿಂದೆ ಉತ್ತರಪ್ರದೇಶದಲ್ಲಿ 'ಮೈ ಲಡ್ಕಿ ಹೂಂ ಮೈ ಲಡ್ ಸಕ್ತಿ ಹೂಂ' ಎಂದು ಘೋಷಣೆ ಹಾಕಿದ್ದರು. ಬಳಿಕ ಇಡೀ ರಾಜ್ಯದಲ್ಲಿ 380ಕ್ಕೂ ಹೆಚ್ಚು ಸೀಟುಗಳಲ್ಲಿ ಠೇವಣಿ ಕಳಕೊಂಡಿದ್ದನ್ನ ನಾವು ಸ್ಮರಿಸಬಹುದು. ತಮ್ಮ ಅಧಿಕಾರದ ಅವಧಿಯಲ್ಲಿ ಮಹಿಳೆಯರನ್ನ ಮೂಲೆಗುಂಪಾಗಿಸಿದ್ದು ನಮ್ಮ ರಾಜ್ಯದ ಜನರಿಗೆ ಸರಿಯಾಗಿಯೇ ನೆನಪಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಹಿಳಾ ಮತದಾರರು ಕಾಂಗ್ರೆಸ್ ಗೆ ನೆನೆಪಾಗಿದ್ದಾರೆ. ಕೇವಲ ಮತಕ್ಕಾಗಿ, ಅಧಿಕಾರದ ದಾಹಕ್ಕಾಗಿ ಹೊಸ ಘೋಷಣೆಗಳೊಂದಿಗೆ ಕಾಂಗ್ರೆಸ್ ಜನರ ಮುಂದೆ ಹೋಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ರಾಜ್ಯದ ಮತದಾರರು ಅದರಲ್ಲೂ ಮಹಿಳಾ ಮತದಾರರು ಬಹಳಷ್ಟು ಬುದ್ದಿವಂತರಿದ್ದಾರೆ. ಇಂತಹ ಪೊಳ್ಳು ಭರವಸೆಗಳಿಗೆ ಸೊಪ್ಪು ಹಾಕುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಡಬಲ್ ಇಂಜಿನ್ ಸರಕಾರ ಮಹಿಳೆಯರ ಸರ್ವತೋಮುಖ ಅಭಿವೃದ್ದಿಗೆ ಹಲವಾರು ಕಾರ್ಯಕ್ರಮಗಳನ್ನ ನೀಡುತ್ತಿದೆ.
ಮಹಿಳೆಯರ ಸಬಲೀಕರಣ ಮತ್ತು ಕ್ಷೇಮಾಭಿವೃದ್ದಿಗಾಗಿ ಆಯವ್ಯಯದಲ್ಲಿ 43,188 ಅನುದಾನ ನೀಡಲಾಗಿದೆ. ಅಲ್ಲದೇ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಕೋವಿಡ್ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳ ಮನೆ ವೆಚ್ಚ ನಿರ್ವಹಣೆಗಾಗಿ, ಮನೆಯ ಮುಖ್ಯಸ್ಥೆಯಾದ ಮಹಿಳೆಯರಿಗೆ ಸಹಾಯಧನ ನೀಡುವ ವಿಶೇಷ ಯೋಜನೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ. ಈ ಕಾರ್ಯಕ್ರಮಗಳೇ ನಮಗೆ ಶ್ರೀರಕ್ಷೆಯಾಗಲಿವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಗೊತ್ತಿದ್ದು, ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ: ಆರಗ ಜ್ಞಾನೇಂದ್ರ
ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಅವರಿಗೆ ಗೊತ್ತಿದೆ. ಹೀಗಾಗಿ ಅವರು ರಾಜ್ಯದ ಜನರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ನ ಭರವಸೆಗಳ ಕುರಿತು ಲೇವಡಿ ಮಾಡಿದ್ದಾರೆ.

ಜವಾಬ್ದಾರಿಯುತವಾಗಿರುವ ಪಕ್ಷ ಉಚಿತ ಕೊಡುಗೆ ಕೊಡೋಕೆ ಹೋಗಲ್ಲ. ಹೀಗೆ ಉಚಿತ ಘೋಷಣೆ ಮಾಡೋಕೆ ಬೊಕ್ಕಸಕ್ಕೆ ಹಣ ಎಲ್ಲಿಂದ ಬರುತ್ತದೆ. ಹೀಗೆ ಸುಳ್ಳು ಭರವಸೆ ಕೊಟ್ಟರೆ ರೈತರು, ನೀರಾವರಿ, ರಸ್ತೆಗಳು ಇದಕ್ಕೆಲ್ಲ ಎಲ್ಲಿಂದ ದುಡ್ಡು ತರುತ್ತಾರೆ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ಅನೇಕ ಕಾರ್ಯಕ್ರಮಗಳನ್ನ ಜಾರಿಗೆ ತಮದರು, ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್ ನವರು ವೋಟಿಗಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ. ಸುಳ್ಳು ಭರವಸೆ ಕೊಟ್ಟು ಚುನಾವಣೆ ಎದುರಿಸುತ್ತಿದ್ದಾರೆ. ಇವರ ಸುಳ್ಳು ಭರವಸೆಯನ್ನ ಜನರು ನಂಬಲ್ಲ. ಜನರಿಗೆ ಎಲ್ಲವೂ ಗೊತ್ತಾಗಲಿದೆ ಅವರೇ ಪಾಠ ಕಲಿಸುತ್ತಾರೆ ಎಂದು ಟಾಂಗ್ ನೀಡಿದರು.












Click it and Unblock the Notifications