'ನಾನು ಇಬ್ಬರ ಹತ್ಯೆ ಮಾಡಿದ್ದೇನೆ. ನನ್ನನ್ನು ಬಂಧಿಸಿ': ಬಿಜೆಪಿ ನಾಯಕರ ಪೋಸ್ಟರ್ ರಿಲೀಸ್ ಮಾಡಿದ ಕಾಂಗ್ರೆಸ್
ಬೆಂಗಳೂರು, ಜನವರಿ 05: ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು ವಿಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಕರಸೇವಕನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಿದ್ದು, ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯಪಾಲರಿಗೂ ದೂರು ನೀಡಿದೆ.
ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪಕ್ಷದ ನಾಯಕರು ನಾನು ಕರಸೇವಕ ನನ್ನನ್ನೂ ಬಂಧಿಸಿ ಅಭಿಯಾನ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರ ಈ ಅಭಿಯಾನವನ್ನು ಕಾಂಗ್ರೆಸ್ ಲೇವಡಿ ಮಾಡಿದ್ದು, ಬಿಜೆಪಿ ಮುಖಂಡರ ಫೋಟೋ ಜೊತೆಗೆ ನನ್ನನ್ನು ಬಂಧಿಸಿ ಬೋರ್ಡ್ ನೀಡಿ ವ್ಯಂಗ್ಯವಾಡಿದೆ

ಈ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮೊದಲು ಮಾಜಿ ಸಚಿವ ಸಿ.ಟಿ ರವಿ ಅವರ ಫೋಟೋ ಜೊತೆಗೆ ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ. ನನ್ನನ್ನು ಬಂಧಿಸಿ ಎನ್ನುವ ಎಡಿಟೆಡ್ ಪೋಸ್ಟರ್ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದೆ. ಜೊತೆಗೆ ಕರ್ನಾಟಕದ ಬಿಜೆಪಿ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು. ಸಿ.ಟಿ ರವಿಯವರೇ ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ? ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಪ್ರಶ್ನಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಫೋಟೋ ಜೊತೆಗೆ ನಾನು ಆರ್‌ಟಿಜಿಎಸ್ ಮೂಲಕ ಲಂಚ ಪಡೆದಿದ್ದೇನೆ. 40,000 ಕೋಟಿಯ ಅಕ್ರಮದಲ್ಲಿ ಪಾಲುದಾರ ನನ್ನನ್ನು ಬಂಧಿಸಿ ಎನ್ನುವ ಎಡಿಟೆಡ್ ಪೋಸ್ಟರ್ ಹಿಡಿದಿರುವ ಫೋಟೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಬಿ.ವೈ ವಿಜಯೇಂದ್ರ ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ. ಬಿಜೆಪಿಗರೆಲ್ಲರೂ "ನನ್ನನ್ನೂ ಬಂಧಿಸಿ" ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿ ಶಾಸಕ ಸುನೀಲ್ ಕುಮಾರ್ ಫೋಟೋ ಹಂಚಿಕೊಂಡಿರುವ ಕಾಂಗ್ರೆಸ್ ನಾನು ಪರಶುರಾಮ ಮೂರ್ತಿಯ ಕಂಚನ್ನು ಕದ್ದಿದ್ದೇನೆ. ಸರ್ಕಾರಿ ಸಿಮೆಂಟ್ ಕದ್ದಿದ್ದೇನೆ. ನನ್ನನ್ನು ಬಂಧಿಸಿ ಎನ್ನುವ ಎಡಿಟೆಡ್ ಪೋಸ್ಟರ್ ಹಿಡಿದಿರುವ ಫೋಟೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ನನ್ನನ್ನೂ ಬಂಧಿಸಿ ಎನ್ನುತ್ತಿರುವ ಸುನಿಲ್ ಕುಮಾರ್ ಕಾರ್ಕಳ ಅವರೇ, ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ? ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪ್ರತಾಪ್ ಸಿಂಹ ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ ಎಂದಿರುವ ಕಾಂಗ್ರೆಸ್, ನಾನು ಸಂಸತ್ ದಾಳಿಕೋರರಿಗೆ ಪಾಸ್‌ಕೊಟ್ಟು ಸಹಕರಿಸಿದ್ದೇನೆ. ನನ್ನನ್ನು ಬಂಧಿಸಿ ಎನ್ನುವ ಸಂಸದ ಪ್ರತಾಪ್ ಸಿಂಹ ಎಡಿಟೆಡ್ ಪೋಸ್ಟರ್ ಹಿಡಿದಿರುವ ಫೋಟೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.












Click it and Unblock the Notifications