ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡಿನ ಭರ್ಜರಿ ಗಿಫ್ಟ್: ದಿನಗಣನೆ ಆರಂಭ?
ಇತ್ತೀಚೆಗೆ ಮುಗಿದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಮೂರನೇ ಅಭ್ಯರ್ಥಿ ಕೆ ಸಿ ರಾಮಮೂರ್ತಿಗೆ ಬಂದ ಒಟ್ಟು ಮತ, ಪಕ್ಷದ ಮೊದಲೆರಡು ಅಭ್ಯರ್ಥಿಗಳಿಗೂ ಬಂದಿರಲಿಲ್ಲ. ಅಷ್ಟರ ಮಟ್ಟಿಗೆ ಪಕ್ಷ ವಹಿಸಿದ್ದ ಜವಾಬ್ದಾರಿಯನ್ನು ವೃತ್ತಿಪರತೆಯಿಂದ ಮಾಡಿ ಮುಗಿಸಿದ್ದರು ಇಂಧನ ಸಚಿವ ಡಿ ಕೆ ಶಿವಕುಮಾರ್.
ಜೆಡಿಎಸ್ ಆಭ್ಯರ್ಥಿ ಫಾರೂಕ್ ನಾಮಪತ್ರಕ್ಕೆ ಪಕ್ಷೇತರರು ಅನುಮೋದನೆ ಸಹಿ ಮಾಡಿದ್ದಾರೆ ಎನ್ನುವ ಮಾಹಿತಿ ವಾಟ್ಸಾಪ್ ಮೂಲಕ ಬಂದ ನಂತರ ಆಖಾಡಕ್ಕಿಳಿದ ಡಿ ಕೆ ಶಿವಕುಮಾರ್, ತಾನಾಡಿದ ಆಟ.. ಉರುಳಿಸಿದ ರಾಜಕೀಯ ದಾಳಕ್ಕೆ ಗೌಡ್ರ ಕ್ಯಾಂಪ್ ತಬ್ಬಿಬ್ಬಾಗಿದ್ದಂತೂ ನಿಜ. (ರಾಜ್ಯಸಭೆ, ಕಾಂಗ್ರೆಸ್ 3, ಬಿಜೆಪಿ 1, ಜೆಡಿಎಸ್ ಶೂನ್ಯ)
ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ವಹಿಸಿಕೊಂಡ ನಂತರ ತನ್ನ ಹಿಂದಿನ ನಿರ್ಧಾರದಿಂದ ಹಿಂದಕ್ಕೆ ಸರಿದ ಕಾಂಗ್ರೆಸ್ ಹೈಕಮಾಂಡ್, ಇಂಧನ ಸಚಿವ ಮತ್ತು ಅಪ್ರತಿಮ ಸಂಘಟನಕಾರ ಡಿ ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವುದು ಬಹುತೇಕ ಖಚಿತ ಎನ್ನುವ ಮಾಹಿತಿ ಕಾಂಗ್ರೆಸ್ ವಲಯದಿಂದ ಕೇಳಿ ಬರುತ್ತಿದೆ.
ಬಿಎಸ್ವೈ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಘೋಷಿಸುವ ಮುನ್ನ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆಶಿ ಹೆಸರನ್ನು ಪರಿಶೀಲನೆಗೂ ಹೈಕಮಾಂಡ್ ತೆಗೆದುಕೊಂಡಿರಲಿಲ್ಲ.
ಜನಸಂಖ್ಯೆಯ ಆಧಾರದಲ್ಲಿ ರಾಜ್ಯದ ನಂಬರ್ ಒನ್ ಆಗಿರುವ ಲಿಂಗಾಯತ ಸಮುದಾಯದ ಎಸ್ ಆರ್ ಪಾಟೀಲ್ ಅವರ ಹೆಸರು ಆ ಸ್ಥಾನಕ್ಕೆ ಕೇಳಿ ಬರುತ್ತಿದ್ದದ್ದು ಹಳೇ ಸುದ್ದಿ. ಅಲ್ಲೊಮ್ಮೆ, ಇಲ್ಲೊಮ್ಮೆ.. ಎ ಮಂಜು, ವಿ ಮುನಿಯಪ್ಪ ಹೆಸರು ಬಿಟ್ಟರೆ.. (ರಾಜ್ಯಸಭಾ ಚುನಾವಣೆ: ದೇಶಾದ್ಯಂತ ಬಿಜೆಪಿ ಮೇಲುಗೈ)
ಜಾತಿ ಲೆಕ್ಕಾಚಾರ ತಪ್ಪು ಎಂದು ಹೇಳುವವರೇ, ಜಾತಿ ಸಮೀಕರಣದ ಮೂಲಕ ಪೊಲಿಟಿಕ್ಸ್ ಮಾಡುವುದು ರಾಜಕಾರಣಿಗಳ ಸ್ಪೆಷಾಲಿಟಿ. ಲಿಂಗಾಯಿತ ಸಮುದಾಯದವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ, ರಾಜ್ಯದ ಎರಡನೇ ಪ್ರಾಭಲ್ಯದ ಒಕ್ಕಲಿಗ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ವಿಚಾರದಲ್ಲಿ ಹೈಕಮಾಂಡ್ 'ಅಧಿಕೃತ ಘೋಷಣೆ' ಮಾಡುವುದನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ ಎನ್ನಲಾಗುತ್ತಿದೆ.

ಸಿಎಂ ಸಿದ್ದು ಮತ್ತು ಡಿಕೆಶಿ
ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಸಂಪರ್ಕವುಳ್ಳ. ಚತುರ ಸಂಘಟನಾಕಾರ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದರಲ್ಲಿ ನಿಪುಣರಾಗಿರುವ ಡಿ ಕೆ ಶಿವಕುಮಾರ್, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿಗ್ವಿಜಯ್ ಸಿಂಗ್ ಜೊತೆಗೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದು ಹೈಕಮಾಂಡಿನ ಆದ್ಯತೆಯಲ್ಲೊಂದು.

ಮುಂದಿನ ಚುನಾವಣೆಯ ದೂರಾಲೋಚನೆ
ಪ್ರಬಲ ಕೋಮು ಎನ್ನಿಸಿಕೊಂಡಿರುವ ಒಕ್ಕಲಿಗ ಜನಾಂಗದ ಡಿ ಕೆ ಶಿವಕುಮಾರ್ ಅವರನ್ನು ಮುಂದಿಟ್ಟುಕೊಂಡು, ಇನ್ನೆರಡು ವರ್ಷದಲ್ಲಿ ಎದುರಿಸಬೇಕಾಗಿರುವ ಚುನಾವಣೆಗೆ ಈಗಿಂದಲೇ ತಂತ್ರಗಾರಿಕೆ ರೂಪಿಸುವುದು ಕಾಂಗ್ರೆಸ್ಸಿನ ದೂರಾಲೋಚನೆ. ಇದಲ್ಲದೇ, ಯಡಿಯೂರಪ್ಪನವರ ಮಾಸ್ ವರ್ಚಸ್ಸಿಗೆ ಒಂದು ಮಟ್ಟಿಗೆ ಸರಿದೂಗಬಲ್ಲ ನಾಯಕನೆಂದರೆ ಸದ್ಯ ಕಾಂಗ್ರೆಸ್ಸಿನಲ್ಲಿ ಲಭ್ಯವಿರುವುದು ಡಿ ಕೆ ಶಿವಕುಮಾರ್ ಮಾತ್ರ.

ರಾಜ್ಯಸಭಾ ಚುನಾವಣೆ
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮೂರೂ ಅಭ್ಯರ್ಥಿಗಳು ಗೆದ್ದ ಹಿಂದೆ ಡಿ ಕೆ ಶಿವಕುಮಾರ್ ಅವರ ರಾಜಕೀಯ 'ಕೈ'ಚಳ ಕಾರಣ. ಪಕ್ಷೇತರ ಅಭ್ಯರ್ಥಿಗಳ ಮನವೊಲಿಕೆ ಮತ್ತು ಜೆಡಿಎಸ್ ಭಿನ್ನಮತೀಯರ ಜೊತೆ ಇನ್ನೂ ಮೂವರಿಂದ ಕ್ರಾಸ್ ವೋಟಿಂಗ್ ಮಾಡಿಸುವಲ್ಲಿ ಡಿ ಕೆ ಶಿವಕುಮಾರ್ ಯಶಸ್ವಿಯಾಗಿದ್ದರು. ಸದ್ಯದ ರಾಜಕಾರಣದಲ್ಲಿ ಈ ತಂತ್ರಗಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ ಎನ್ನುವುದು ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ಸಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.

ಎಸ್ ಎಂ ಕೃಷ್ಣ ಶಿಷ್ಯ
ಪ್ರಮುಖವಾಗಿ ಹಿರಿಯ ಮುಖಂಡ ಎಸ್ ಎಂ ಕೃಷ್ಣ ಅವರ ಶಿಷ್ಯನೆಂದೇ ಗುರುತಿಸಿಕೊಂಡಿರುವ ಡಿಕೆಶಿಗೆ ಇವರ ಆಶೀರ್ವಾದ ಇದ್ದೇ ಇದೆ. ಜೊತೆಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಬೆಂಬಲವೂ ಶಿವಕುಮಾರ್ ಮೇಲಿದೆ. ಇತ್ತೀಚಿಗೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲೂ ಡಿಕೆಶಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿದ್ದು ಕಡೆಯಿಂದಲೂ, ಹೈಕಮಾಂಡಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನುವ ಮಾಹಿತಿಯಿದೆ.

ಜೆಡಿಎಸ್ ಎದುರಿಸಲು ಇವರು ಮೈನ್
ಜೆಡಿಎಸ್ ಪ್ರಾಭ್ಯಲ್ಯವಿರುವ ಮಂಡ್ಯ ಮತ್ತು ಹಳೇ ಮೈಸೂರು ಭಾಗದಲ್ಲಿ ದೇವೇಗೌಡ್ರೂ ನಾಚುವಂತೆ ರಾಜಕೀಯ ತಂತ್ರಗಾರಿಕೆ ರೂಪಿಸಿ ಸೈ ಎನಿಸಿಕೊಂಡಿರುವ ಹೆಚ್ಚುಗಾರಿಕೆಯೂ ಡಿಕೆಶಿಗಿದೆ. ಯಾಕೆಂದರೆ, ಈ ಭಾಗದಲ್ಲಿ ಬಿಜೆಪಿ ನಾಮಕೇವಾಸ್ತೆ.. ಫೈಟ್ ಏನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ..

ರಾಹುಲ್ ಗಾಂಧಿಗೆ ಆಪ್ತರು
ಎಲ್ಲಕ್ಕಿಂತಲೂ ಮುಖ್ಯವಾಗಿ ಡಿ ಕೆ ಶಿವಕುಮಾರ್, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಆಪ್ತರು. ದೇಶದ ಇತರ ರಾಜ್ಯಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಡಿಕೆಶಿ, ರಾಹುಲ್ ಗಾಂಧಿಗೆ ಸಾಥ್ ನೀಡಿದ್ದರು. ಜೊತೆಗೆ, ಮೊನ್ನೆ ಮೊನ್ನೆ ಮುಗಿದ ಕೇರಳ ಚುನಾವಣೆಯ ಪ್ರಚಾರದಲ್ಲೂ, ಸೋನಿಯಾ ಗಾಂಧಿಯವರ ಕೆಲವೊಂದು ಸಾರ್ವಜನಿಕ ಸಭೆಯ ಉಸ್ತುವಾರಿಯನ್ನೂ ಡಿಕೆಶಿ ವಹಿಸಿಕೊಂಡಿದ್ದರು.

ಬಿಜೆಪಿಯ ಕಾಂಗ್ರೆಸ್ ಮುಕ್ತ್ ಭಾರತ್
ಬಿಜೆಪಿಯ 'ಕಾಂಗ್ರೆಸ್ ಮುಕ್ತ್ ಭಾರತ್' ಎನ್ನುವ ರಾಜಕೀಯ ಘೋಷಣೆಯಂತೆ, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ದಿನದಿಂದ ದಿನಕ್ಕೆ ಅಧೋಗತಿಗೆ ಇಳಿಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ದಕ್ಷಿಣ ಭಾರತದಲ್ಲಿರುವ ಹಿಡಿತವೆಂದರೆ ಅದು ಕರ್ನಾಟಕ. ಅದನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಲು ಬಯಸದ ಹೈಕಮಾಂಡ್, ಡೈನಾಮಿಕ್ ನಾಯಕನೊಬ್ಬನಿಗೆ ಕೆಪಿಸಿಸಿ ಅಧ್ಯಕ್ಷ ಚುಕ್ಕಾಣಿ ನೀಡುವುದು ಖಚಿತ.











Click it and Unblock the Notifications