ಬಿಜೆಪಿ ನಾಯಕರು ಆರೆಸ್ಸೆಸ್‌ನವರ ಲಾಠಿ ಕಸಿದು ಬಡಿದಾಡಿಕೊಂಡರು ಅಚ್ಚರಿಯಿಲ್ಲ: ಕಾಲೆಳೆದ ಕಾಂಗ್ರೆಸ್!
ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ದಿನದಿಂದ ದಿನಕ್ಕೆ ಬಹಿರಂಗವಾಗಿತ್ತಿದೆ. ಇನ್ನೂ ಹಲವು ಬಿಜೆಪಿ ನಾಯಕರು ಸೋಲಿನ ಹತಾಶೆಯಿಂದ ಹೊರಬಂದಿಲ್ಲ, ತಮ್ಮದೇ ಪಕ್ಷದವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.
ತಮ್ಮದೇ ಪಕ್ಷದ ನಾಯಕರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹಲವು ನಾಯಕರು ಆರೋಪ ಮಾಡಿದ್ದರೆ, ಇದಕ್ಕೆ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು ಅದನ್ನು ಬಹಿರಂಗವಾಗಿ ಮಾತನಾಡದೇ, ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿಯ ಒಳಜಗಳ ಈಗ ಕಾಂಗ್ರೆಸ್‌ಗೆ ಪ್ರಮುಖ ಅಸ್ತ್ರವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಇನ್ನೂ ಕೆಲ ದಿನಗಳಲ್ಲೇ ಬಿಜೆಪಿ ನಾಯಕರು ಆರೆಸ್ಸೆಸ್ ಲಾಠಿ ಕಸಿದುಕೊಂಡು ಹೊಡೆದಾಡಿದರೂ ಅಚ್ಚರಿ ಪಡಬೇಕಿಲ್ಲ ಎಂದು ವ್ಯಂಗ್ಯವಾಡಿದೆ.
ಬಿಜೆಪಿಯಲ್ಲಿ ಸದ್ಯ ಮಾತಿನಲ್ಲಿ ಯುದ್ಧ ನಡೆಯುತ್ತಿದೆ ಮುಂದೆ ಅದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಬಹುದು ಎಂದು ಕಾಂಗ್ರೆಸ್ ಕಾಲೆಳದಿದೆ. ಇದಕ್ಕೆಲ್ಲಾ ಬಿಎಲ್ ಸಂತೋಷ್, ಜೋಶಿ ಕಾರಣ ಎಂದು ಆರೋಪ ಮಾಡಿದೆ.
ಕಾಂಗ್ರೆಸ್ ಟ್ವೀಟ್‌ನಲ್ಲಿ ಏನಿದೆ?
" ಬೊಮ್ಮಾಯಿ vs ಯತ್ನಾಳ್, ಯತ್ನಾಳ್ vs ನಿರಾಣಿ, ಈಶ್ವರಪ್ಪ vs ವಲಸಿಗರು, ಪ್ರತಾಪ್ ಸಿಂಹ vs ಬೊಮ್ಮಾಯಿ, ಸೋಮಣ್ಣ vs ಸಂತೋಷ್, ಸಿ ಟಿ ರವಿ vs ಬಿಎಸ್‌ವೈ. ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ, ಮುಂದೆ RSS ನವರ ಲಾಠಿ ಕಸಿದುಕೊಂಡು ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ! ಚುನಾವಣೆಯ ಸೋಲಿನ ನಂತರ ಮರೆಗೆ ಸರಿದ ಜೋಶಿ ಸಂತೋಷ್ ಜೋಡಿ ತೆರೆಯ ಹಿಂದೆ ಕುಳಿತು ಆಡಿಸುತ್ತಿರುವ ಗೊಂಬೆಯಾಟ ಇದು." ಎಂದು ಟ್ವೀಟ್ ಮಾಡಿದೆ.
ಬೊಮ್ಮಾಯಿ vs ಯತ್ನಾಳ್
— Karnataka Congress (@INCKarnataka) June 27, 2023
ಯತ್ನಾಳ್ vs ನಿರಾಣಿ
ಈಶ್ವರಪ್ಪ vs ವಲಸಿಗರು
ಪ್ರತಾಪ್ ಸಿಂಹ vs ಬೊಮ್ಮಾಯಿ
ಸೋಮಣ್ಣ vs ಸಂತೋಷ್
ಸಿ ಟಿ ರವಿ vs BSY
ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ, ಮುಂದೆ RSS ನವರ ಲಾಠಿ ಕಸಿದುಕೊಂಡು ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ!
ಚುನಾವಣೆಯ ಸೋಲಿನ ನಂತರ ಮರೆಗೆ ಸರಿದ ಜೋಶಿ ಸಂತೋಷ್ ಜೋಡಿ ತೆರೆಯ ಹಿಂದೆ…
ಬಿಜೆಪಿ ಒಳಜಗಳ ತಾರಕಕ್ಕೆ
ಇನ್ನು ಬಿಜೆಪಿಯಲ್ಲಿ ಒಳಜಗಳ ತಾರಕಕ್ಕೇರಿದೆ. ಚುನಾವಣಾ ಫಲಿತಾಂಶ ಬಂದು ಒಂದೂವರೆ ತಿಂಗಳಾದರೂ ಇನ್ನೂ ವಿರೋಧ ಪಕ್ಷದ ನಾಯಕ ಯಾರೆಂದು ತೀರ್ಮಾನವಾಗಿಲ್ಲ. ಈ ನಡುವೆ ಹಲವು ನಾಯಕರು ವಿರೋಧ ಪಕ್ಷದ ನಾಯಕರು ಪೈಪೋಟಿಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಹಿರಿಯ ನಾಯಕರ ಸೂಚನೆಯಂತೆ ತನ್ನ ಕ್ಷೇತ್ರ ತೊರೆದು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತ ಹಿರಿಯ ನಾಯಕ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.
ಇನ್ನೊಂದು ಕಡೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಾನು ರಾಜೀನಾಮೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಈಶ್ವರಪ್ಪ ಆಪರೇಷನ್ ಕಮಲ ಬಿಜೆಪಿ ಸೋಲಿಗೆ ಕಾರಣ, ಪಕ್ಷಾಂತರಿಗಳಿಂದ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ ಎಂದು ತಿರುಗಿಬಿದ್ದಿದ್ದಾರೆ. ಪ್ರತಾಪ್ ಸಿಂಹ, ಸಿಟಿ ರವಿ ಬಿಜೆಪಿಯ ಕೆಲವು ಹಿರಿಯ ನಾಯಕರು ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಯತ್ನಾಳ್ ಮತ್ತು ಬೊಮ್ಮಾಯಿ ನಡುವೆ ವಾಕ್ಸಮರ ನಡೆದರೆ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ಕೂಡ ಕಿತ್ತಾಡಿಕೊಂಡಿದ್ದಾರೆ. ಒಂದು ಸೋಲು ಬಿಜೆಪಿಗೆ ಭಾರಿ ಹಿನ್ನಡೆ ಉಂಟು ಮಾಡಿರುವುದಂತೂ ಸತ್ಯ.












Click it and Unblock the Notifications