ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಗೆಲ್ಲಲು ಪಣ ತೊಟ್ಟ ಕಾಂಗ್ರೆಸ್: ಯಾರಿದ್ದಾರೆ ರೇಸ್ ನಲ್ಲಿ?
ಬೆಂಗಳೂರು,ಜನವರಿ 05: ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಭರ್ಜರಿಯಾಗಿ ಸಿದ್ದತೆ ನಡೆಸಿದೆ. ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಪಣ ತೊಟ್ಟಿರುವ ಕಾಂಗ್ರೆಸ್ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನ ವಶಪಡಿಸಿಕೊಳ್ಳಲು ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯ ಹುಡುಕಾಟವನ್ನ ನಡೆಸಿದೆ.
ಹೌದು, 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆಸಿದ್ದು, ಕೆಲ ಬಿಜೆಪಿ ನಾಯಕರನ್ನ ಪಕ್ಷ ಕರೆತರಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೂ ಬಿಜೆಪಿಯ ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷದಲ್ಲಿ ಬೇರೆ ಪ್ರತಿ ಸ್ಪರ್ಧಿಗಳು ಹುಟ್ಟಿಕೊಂಡಿಲ್ಲ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಎಂದರೇ ಬಿಜೆಪಿಯ ಭದ್ರಕೋಟೆ. ಈ ಕ್ಷೇತ್ರವನ್ನ ಪಡೆಯಲು ಕಾಂಗ್ರೆಸ್‌ನಿಂದ ಯಾವುದೇ ಅಭ್ಯರ್ಥಿಯ ಹೆಸರು ಮುನ್ನೆಲೆಗೆ ಬಂದಿಲ್ಲ. ಯಾವುದೇ ಕಾಂಗ್ರೆಸ್ ನಾಯಕರು ಸ್ಪರ್ಧಿಸುವ ಬಗ್ಗೆ ಆಸಕ್ತಿ ತೋರಿಸಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ಮಾಜಿ ಸಂಸದರಾದ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ವಿಫಲವಾಗಿದೆ.
ಇತ್ತ ಕಳೆದ ಬಾರಿ ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್ ಸ್ಪರ್ಧಿಸಿದ್ದರು. ಈ ಬಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಹಾಗೂ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಅವರ ಹೆಸರು ಮುನ್ನಲೆಗೆ ಬಂದಿದೆ. ಆದರೆ, ರಾಮಲಿಂಗಾರೆಡ್ಡಿ ಆಗಲಿ, ಸೌಮ್ಯಾರೆಡ್ಡಿ ಅವರಾಗಲಿ ಈ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಕಳೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನ ಕಣಕ್ಕಿಳಿಸಿತ್ತು. ಆದರೆ, ಈ ಬಾರಿಯ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ. ಹೀಗಾಗಿ ಪ್ರತಿಷ್ಟಿತ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್ ಪಕ್ಷಗಳ ಮಧ್ಯೆಯೇ ನೇರ ಹಣಾಹಣಿ ಏರ್ಪಡಲಿದೆ.
ಕಳೆದ 32 ವರ್ಷಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ವಿಜಯ ಸಾಧಿಸಿರುವ ಬಿಜೆಪಿ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆಯಲ್ಲಿದೆ. ಬಿಜೆಪಿ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಯಾರೂ ಮುಂದೆ ಬರುತ್ತಿಲ್ಲ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತದೆ. ಗೆಲುವಿನ ಖಾತರಿ ಇಲ್ಲ. ಆದ್ದರಿಂದ ಸ್ಪರ್ಧೆಯ ಸಹವಾಸವೇ ಬೇಡ ಎಂದು ಹಿಂದೇಟು ಹಾಕುತ್ತಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿಯನ್ನ ಕಣಕ್ಕಿಳಿಸುವ ನಿಟ್ಟಿನಲ್ಲಿ ಹೊಸ ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಇತ್ತ ಬೆಂಗಳೂರು ಜಿಲ್ಲಾ ಉಸ್ತುವಾರಿಯಾಗಿರುವ ಡಿ ಕೆ ಶಿವಕುಮಾರ್ ಅವರ ಹಲವು ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಈ ಬಾರೀ ಮುಸ್ಲಿಂ ಮತ್ತು ಒಕ್ಕಲಿಗ ಮತ ಬ್ಯಾಂಕ್ ವಿಭಜನೆ ಆಗುವ ಅವಕಾಶಗಳು ಕಾಣುತ್ತಿದೆ.
ಇತ್ತ ಬೆಂಗಳೂರು ವ್ಯಾಪ್ತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮದೇ ಆದ ಹಿಡಿತವನ್ನ ಹೊಂದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಪುತ್ರಿಯನ್ನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಒಟ್ನಲಿ ಬಿಜೆಪಿ ಭದ್ರಕೋಟೆಯಾದ ಬೆಂಗಳೂರು ದಕ್ಷಿಣ ಕ್ಷೇತ್ರವನ್ನ ಕಾಂಗ್ರೆಸ್ ವಶಪಡಿಸಿಕೊಳ್ಳಲು ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದೆ. ಆದರೆ, ಕಾಂಗ್ರೆಸ್ ನಲ್ಲಿ ದಕ್ಷಿಣ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯ ಕೊರತೆ ಎದುರಾಗಿದೆ. ಅಂತಿಮವಾಗಿ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಯಾರನ್ನ ಕೈ ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಾಗಿದೆ.












Click it and Unblock the Notifications