Car Accident: ಮಾಜಿ ಸಚಿವ ರೇವಣ್ಣ ಪುತ್ರನ ಕಾರು ಅಪಘಾತ, ಯುವಕ ದುರ್ಮರಣ
ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ, ಮಾಜಿ ಸಚಿವ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಪುತ್ರನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 23 ವರ್ಷದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಆ ಫಾರ್ಚೂನರ್ ಕಾರು ರೇವಣ್ಣ ಅವರ ಪುತ್ರ ಶಶಾಂಕ್ ಅವರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ನಿನ್ನೆ ತಡರಾತ್ರಿ ಈ ದುರ್ಘಟನೆ ನಡೆದಿದ್ದು, ಮೃತ ಯುವಕನನ್ನು ರಾಜೇಶ್ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಸುಮಾರು 10.30ರ ವೇಳೆಗೆ ಗುಡೆಮಾರೇನಳ್ಳಿ ಟೋಲ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ದಾಬಸ್‌ಪೇಟೆ ಕಡೆಯಿಂದ ಬರುತ್ತಿದ್ದ ರಾಜೇಶ್‌ಗೆ ರೇವಣ್ಣ ಪುತ್ರ ಶಶಾಂಕ್ ಅವರ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಳಿಕ ಕಾರು ನಿಲ್ಲಿಸದೆ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸ್ಥಳೀಯರು ಆ ಕಾರನ್ನು ಹಿಂಬಾಲಿಸಿ ತಡೆದಾಗ ನಾನು ರೇವಣ್ಣ ಅವರ ಪುತ್ರ ಎಂದು ಹೇಳಿದ್ದಾರೆ. ಅಪಘಾತ ನಡೆದ ಘಟನಾ ಸ್ಥಳದಿಂದ ಸುಮಾರು ಐದು ಕಿಲೋಮೀಟರ್‌ವರೆಗೆ ಹಿಂಬಾಲಿಸಿ ಕಾರು ತಡೆದಿದ್ದಾರೆ. ಅಲ್ಲದೆ ಶಶಾಂಕ್ ಹಾಗೂ ತನ್ನ ಕುಟುಂಬ ಕಾರಿನಲ್ಲಿತ್ತು. ಅಪಘಾತದ ಬಗ್ಗೆ ಪ್ರಶ್ನಿಸಿದಾಗ ಶಶಾಂಕ್ ದೌಲತ್ತಿನಿಂದ ಮಾತನಾಡಿ ಅಲ್ಲಿಂದ ತೆರಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇನ್ನು ಮೃತ ಯುವಕ ರಾಜೇಶ್ ಮಾಗಡಿ ತಾಲ್ಲೂಕಿನ ಬೆಳಗುಂಬ ಗ್ರಾಮದ ನಿವಾಸಿಯಾಗಿದ್ದು, ದಾಬಸ್‌ಪೇಟೆಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ಕೆಲಸ ಮುಗಿಸಿ ವಾಪಸ್ ಬರುವಾಗ ಈ ಅಪಘಾತ ನಡೆದಿದೆ. ಕುಟುಂಬಕ್ಕೆ ಆಧಾರವಾಗಿದ್ದ ರಾಜೇಶ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.
ನನ್ನ ಮಗ ಗಾಡಿ ಓಡಿಸಿಲ್ಲ
ಈ ಅಪಘಾತದ ಬಗ್ಗೆ ಹೆಚ್.ಎಂ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ. 'ನನ್ನ ಪುತ್ರ ಕಾರು ಚಾಲನೆ ಮಾಡಿಲ್ಲ, ಡ್ರೈವರ್ ಇದ್ದ. ಅಪಘಾತವಾಗಿದೆ, ನನಗೂ ಅನುಕಂಪವಿದೆ ಎಂದಿದ್ದಾರೆ. ನಿನ್ನೆ ರಾತ್ರಿ ಗುಡೇಮಾರನಹಳ್ಳಿ ಬಳಿ ಅಪಘಾತ ನಡೆದಿದೆ. ಅಲ್ಲಿ ಗಲಾಟೆ ಆಗುತ್ತೆ ಎಂದು ಕಾರು ಮುಂದೆ ಬಂದಿದೆ. ಘಟನೆ ನಡೆದಾಗ ಕಾರನ್ನು ಪುತ್ರ ಚಾಲನೆ ಮಾಡುತ್ತಿರಲಿಲ್ಲ. ಡ್ರೈವರ್ ಇದ್ದು, ಕುಟುಂಬದವರು ಇದ್ದರು. ಗಲಾಟೆ ಆಗುವ ಭಯದಿಂದ ಮುಂದೆ ಬಂದಿದ್ದು, ಈ ದುರ್ಘಟನೆಗೆ ಕ್ಷಮೆ ಕೇಳುತ್ತೇನೆ. ಮೃತನ ಕುಟುಂಬಸ್ಥರನ್ನು ಭೇಟಿಯಾಗುತ್ತೇನೆ. ಸಂತ್ರಸ್ತ ಕುಟುಂಬದವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.












Click it and Unblock the Notifications