ತಮ್ಮ ಬದಲಾವಣೆ ಕುರಿತು ಸಿಎಂ ಯಡಿಯೂರಪ್ಪ ಮಹತ್ವದ ಹೇಳಿಕೆ!
ಬೆಂಗಳೂರು, ನ. 04: ಉಪ ಚುನಾವಣೆ ಮತದಾನದ ಬಳಿಕ ಇದೀಗ ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಜೋರಾಗಿವೆ ನಡೆದಿದೆ. ಚುನಾವಣಾ ಫಲಿತಾಂದ ಬಂದ ಬಳಿಕ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುತ್ತಾರೆ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿಕೆ ಕೊಟ್ಟಿದ್ದಾರೆ. ನಾನು ಸಿಎಂ ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದೆ. ಯಡಿಯೂರಪ್ಪ ಅವರ ಬದಲಾವಣೆಗೆ ಅದೂ ಒಂದು ಕಾರಣವಾಗಿರಬಹುದು ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶದ ಮೇಲೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ನಿಂತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಶಿರಾ ವಿಧಾನಸಭಾ ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ಸಿಎಂ ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗಂಭೀರವಾಗಿ ತೆಗೆದುಕೊಂಡು, ಶಿರಾದಲ್ಲಿಯೇ ಬೀಡು ಬಿಟ್ಟಿದ್ದರು. ದೆಹಲಿಯಿಂದಲೇ ನನಗೆ ಮಾಹಿತಿ ಬಂದಿದೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ.
ಬಿಜೆಪಿ ಹೈಕಮಾಂಡ್ ನಿಜಕ್ಕೂ ಅಂತಹ ತೀರ್ಮಾನವನ್ನು ತೆಗದುಕೊಂಡಿದೆಯಾ? ಇದೀಗ ಸಿದ್ದರಾಮಯ್ಯ ಆರೋಪ ಹಾಗೂ ಮುಖ್ಯಮಂತ್ರಿ ಹುದ್ದೆಯಿಂದ ತಮ್ಮನ್ನು ಇಳಿಸಲಾಗುತ್ತದೆ ಎಂಬ ಚರ್ಚೆಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಡಿಯೂರಪ್ಪ ಏನು ಹೇಳಿದ್ದಾರೆ?

ಕರೆದರೆ ದೆಹಲಿಗೆ ಹೋಗುತ್ತೇನೆ
ನಾಳೆ (ನ.05) ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಮಂಗಳೂರಿಗೆ ಪ್ರಯಾಣ ಹೋಗುವ ಮೊದಲು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಅವರು ಸಿಎಂ ಬದಲಾವಣೆ ಕುರಿತು ಮಹತ್ವದ ಮಾತನ್ನಾಡಿದ್ದಾರೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಹೇಳಿಕೆ ಕೊಟ್ಟಿರುವ ಅವರು, ಸಂಪುಟ ವಿಸ್ತರಣೆ ಕುರಿತು ದೆಹಲಿಗೆ ಹೋಗುವ ಬಗ್ಗೆ ಇನ್ನೂ ನಿಶ್ಚಯ ಆಗಿಲ್ಲ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆಯೂ ನಿನ್ನೆ ಮಾತಾಡಿದ್ದೇನೆ. ಪಕ್ಷದ ವರಿಷ್ಠರು ಕರೆದರೆ ಮಾತ್ರ ದೆಹಲಿಗೆ ತೆರಳುತ್ತೇನೆ ಎಂದಿದ್ದಾರೆ.

ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿರುವ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಪದೇ ಪದೇ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ದೆಹಲಿ ವರಿಷ್ಠರು ಕೆಳಗೆ ಇಳಿಸುತ್ತಾರೆ ಅಂತಾ ಹೇಳಿಕೆ ಕೊಡುತ್ತಿದ್ದಾರೆ. ಶಿರಾದಲ್ಲಿ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ, ನೀವು ಸೋಲ್ತಿರಿ. ರಾಜರಾಜೇಶ್ವರಿನಗರದಲ್ಲೂ ನೀವು ಹೀನಾಯವಾಗಿ ಸೋಲುತ್ತೀರಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವಿಪಕ್ಷ ನಾಯಕ ಸ್ಥಾನದಿಂದ ಇಳಿಸುತ್ತಾರೆ
ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗುವ ನವೆಂಬರ್ 10ರ ವರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಯಲಿ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದ ಮೇಲೆ, ಕಾಂಗ್ರೆಸ್ ಹೈಕಮಾಂಡ್ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸುತ್ತಾರೆಂದು ಸಿದ್ದರಾಮಯ್ಯ ಅವರಿಗೆ ಸಿಎಂ ಯಡಿಯೂರಪ್ಪ ತಿರುಗೇಟು ಕೊಟ್ಟಿದ್ದಾರೆ.
Recommended Video

ನಾಳೆ ಬಿಜೆಪಿ ಕಾರ್ಯಕಾರಣಿ
ನಾಳೆ (ನ.05) ಮಂಗಳೂರಿನಲ್ಲಿ ಬಿಜೆಪಿಯ ಮಹತ್ವದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ. ಕಾರ್ಯಕಾರಣಿ ಸಭೆಯಲ್ಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಹಲವು ವಿಚಾರಗಳು ಪ್ರಸ್ತಾಪವಾಗಲಿವೆ. ರಾಜ್ಯ ಕಾರ್ಯಕಾರಣಿ ನಡೆಯುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮತ್ತೆ ನಡೆದಿರುವುದು ಬಿಜೆಪಿ ಪಾಳೆಯದಲ್ಲಿ ಸಂಚಲನ ಮೂಡಿಸಿದೆ.
ಜೊತೆಗೆ ಸಿದ್ದರಾಮಯ್ಯ ಅವರು ಸಿಎಂ ಬದಲಾವಣೆಯ ಕುರಿತು ನನಗೆ ದೆಹಲಿಯಿಂದ ಮಾಹಿತಿ ಬಂದಿದೆ ಎಂದು ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications