'ಅನ್ನ' ಸಿನಿಮಾ ನೋಡಿ ಅನ್ನಭಾಗ್ಯ ನೆನೆದ ಸಿಎಂ
ಸಿಎಂ ಸಿದ್ದರಾಮಯ್ಯ ಅವರು ರಾಜಕೀಯದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಿಸಿ ಜಾಲಿ ಮೂಡ್‌ಗೆ ತೆರಳಿದ್ದಾರೆ. ನಿನ್ನೆ ಮೈಸೂರಿಗೆ ತೆರಳಿದ್ದ ಅವರು, ಡಿ.ಆರ್.ಸಿ ಚಿತ್ರಮಂದಿರದಲ್ಲಿ "ಅನ್ನ" ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಅನ್ನದ ಮಹತ್ವದ ಕುರಿತಾಗಿ ಬೆಳಕು ಚೆಲ್ಲಿರುವ ಈ ಸಿನಿಮಾವನ್ನು ಕೊಂಡಾಡಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದಾರೆ. ಅನ್ನ ಸಿನಿಮಾ ನೋಡುತ್ತಾ ತಮ್ಮ ಬಾಲ್ಯದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಬಗ್ಗೆಯೂ ಸ್ಮರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನಿನ್ನೆ ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ "ಅನ್ನ" ಸಿನಿಮಾ ವೀಕ್ಷಿಸಿದೆ. ಅನ್ನ ಉಣ್ಣಲು ನನ್ನೂರಿನ ಜನ ಹಬ್ಬಕ್ಕಾಗಿ ಕಾಯುತ್ತಿದ್ದ ನನ್ನ ಬಾಲ್ಯದ ದಿನಗಳು ಈ ಸಿನಿಮಾದ ಕಥೆಯ ಮೂಲಕ ಕಣ್ಣೆದುರು ಬಂದವು ಎಂದು ಮೆಲುಕು ಹಾಕಿದ್ದಾರೆ.
ನಾನು ಕಂಡ ಹಸಿವು, ಬಡತನಗಳು ನಾಡಿನ ಯಾರೊಬ್ಬರನ್ನೂ ಬಾಧಿಸದಿರಲಿ ಎಂದು 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಕೊಟ್ಟಿದ್ದೆ, ಚಿತ್ರದ ಕೊನೆಯಲ್ಲಿ ಈ ಯೋಜನೆಯ ಮಹತ್ವದ ಬಗ್ಗೆಯೂ ಸಿನೆಮಾ ಬೆಳಕು ಚೆಲ್ಲಿದೆ. ಮನೋರಂಜನೆಯ ಜೊತೆಗೆ ಹಸಿವಿನ ಎದುರು ಬೇರೆಲ್ಲಾ ಸಂಬಂಧಗಳು ಹೇಗೆ ನಗಣ್ಯವೆನಿಸುತ್ತವೆ ಎಂಬ ಸಂದೇಶವನ್ನು ಒಳಗೊಂಡ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಶುಭವಾಗಲಿ, ಚಿತ್ರ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದ್ದಾರೆ.

ಹನೂರು ಚನ್ನಪ್ಪ ಅವರ ಕಥಾಸಂಕನದಲ್ಲಿರುವ 'ಅನ್ನ' ಎಂಬ 22 ಪುಟಗಳ ಕಥೆ ಆಧರಿಸಿ ಈ ಸಿನಿಮಾವನ್ನು ಎನ್.ಎಸ್.ಇಸ್ಲಾಹುದ್ದೀನ್ ಆಕ್ಷನ್ ಕಟ್ ಹೇಳಿದ್ದಾರೆ. ಇದು 80ರ ದಶಕದಲ್ಲಿ ನಡೆಯುವ ಕಥೆ ಎನ್ನಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಹಬ್ಬದ ದಿನ ಮಾತ್ರವೇ ಅನ್ನ ಮಾಡುವ ಪದ್ಧತಿ ಇತ್ತು. ಈ ವಿಚಾರ ಕುರಿತಾಗಿಯೇ ಈ ಸಿನಿಮಾ ಬೆಳಕು ಚೆಲ್ಲಿದೆ.
ಮುಖ್ಯವಾಗಿ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಬಡ ಹುಡುಗನೊಬ್ಬ ಜಾತ್ರೆಯಲ್ಲಿ ನಾಪತ್ತೆಯಾಗುತ್ತಾನೆ. ಬಳಿಕ ಅವನ ಜೀವನದಲ್ಲಿ ಎದುರಾಗುವ ಘಟನೆಗಳು ಹಾಗೂ ಅನ್ನದ ಬಗ್ಗೆ ಅರಿವು ಮೂಡಿಸುತ್ತಾ ಕಥೆ ಸಾಗುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ನಂದನ್ ನಟಿಸಿದ್ದು, ಪದ್ಮಶ್ರೀ, ಬಲ ರಾಜವಾಡಿ, ಸಿದ್ದು ಪ್ರಸನ್ನ, ಸಂಪತ್ ಮತ್ತಿತರರ ತಾರಾಗಣವಿದೆ.

ಸಿದ್ದರಾಮಯ್ಯ ಅವರು ಈ ಹಿಂದೆ ಅನ್ನ ಚಿತ್ರದ ಪೋಸ್ಟರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೆಪ್ಟೆಂಬರ್ 6ರಂದು ಅನ್ನ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.
ಸಿದ್ದರಾಮಯ್ಯ ಅವರು ಹಲವು ವೇದಿಕೆಗಳಲ್ಲಿ ಅನ್ನದ ಮಹತ್ವವನ್ನು ಸಾರಿದ್ದರು. ಹಸಿದವರಿಗೆ ಮಾತ್ರ ಊಟದ ಮಹತ್ವ ತಿಳಿದಿರುತ್ತದೆ. ಬಡಜನರು ಇನ್ನೊಬ್ಬರ ಮನೆಯಿಂದ ತುತ್ತು ಅನ್ನ ಕೇಳಿ ಪಡೆಯುತ್ತಿದ್ದ ಕಷ್ಟ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದೆ. ಈ ಕಾರಣದಿಂದಲೇ ಯಾರೂ ಸಹ ತುತ್ತು ಅನ್ನಕ್ಕಾಗಿ ಬೇರೊಬ್ಬರ ಮನೆ ಬಾಗಿಲಿಗೆ ಹೋಗದಂತೆ ಮಾಡಬೇಕು ಎಂದು ಶಪಥ ಮಾಡಿದ್ದೆ ಎಂದು ಹೇಳಿದ್ದರು. ಬಡಜನರಿಗೂ ಅನ್ನ ನೀಡುವ ಸಾರ್ಥಕ ಉದ್ದೇಶದಿಂದಲೇ ರೂಪಿಸಿದ ಯೋಜನೆಯೇ ಅನ್ನಭಾಗ್ಯ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು.












Click it and Unblock the Notifications