Siddaramaiah: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸಿದ್ದರಾಮಯ್ಯ ಕೊಟ್ಟ ಖಡಕ್ ಸೂಚನೆಗಳೇನು? ಇಲ್ಲಿವೆ ನೋಡಿ
ಬೆಂಗಳೂರು, ಮೇ 24 : ರಾಜ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷವೂ ಸರ್ಕಾರ ರಚನೆಯ ಬಳಿಕ ಹೆಚ್ಚು ಸಕ್ರಿಯವಾಗಿದ್ದು, 2024 ರ ಚುನಾವಣೆ ಹಿನ್ನಲೆ ಪಕ್ಷವನ್ನ ಹೆಚ್ಚು ಬಲಪಟಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರಿಗೆ ಖಡಕ್ ಸೂಚನೆಯನ್ನ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರುಗಳಿಗೆ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಖಡಕ ಸೂಚನೆಯನ್ನ ನೀಡಿದ್ದಾರೆ. 135 ಸ್ಥಾನಗಳನ್ನ ಗಳಿಸಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ ಸಹ ಪಕ್ಷ ಸಂಘಟನೆಗೆ ಶ್ರಮವಹಿಸಿ ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ.

ಇನ್ನೂ ಕರ್ನಾಟಕದ 15ನೇ ವಿಧಾನಸಭೆಯ ಕೊನೆಯ ದಿನವಾದ ಇಂದು (ಬುಧವಾರ) 16ನೇ ವಿಧಾನಸಭೆಯ ಸಭಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಯು.ಟಿ.ಖಾದರ್ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವೇಳೆ ಅಭಿನಂದಿಸಿ ಶುಭ ಹಾರೈಸಿದರು.
ಹರಪನಹಳ್ಳಿ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಫರ್ಧಿಸಿ ಜಯಗಳಿಸಿರುವ ಲತಾ ಮಲ್ಲಿಕಾರ್ಜುನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯರನ್ನಾಗಿ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅನುಮೋದಿಸಿದರು.
ಶಾಸಕರುಗಳಿಗೆ ಸಿದ್ದರಾಮಯ್ಯ ಅವರು ನೀಡಿದ ಸೂಚನೆಗಳು.
* ರಾಜ್ಯದ ಜನತೆ ಅಪಾರ ನಿರೀಕ್ಷೆಗಳ ಜತೆಗೆ ನಮಗೆ ಅಪಾರ ಬಹುಮತದ ಮೂಲಕ ಜವಾಬ್ದಾರಿ ವಹಿಸಿದ್ದಾರೆ. 5 ವರ್ಷಗಳ ಕಾಲ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ನಿಮ್ಮ ಕ್ಷೇತ್ರಗಳ ಜನರ ನಿರೀಕ್ಷೆ ಈಡೇರಿಸಿ.
* ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹೆಚ್ಚು ಕ್ರಿಯಾಶೀಲತೆಯಿಂದ ಭಾಗವಹಿಸಿ.
* ಬಿಜೆಪಿಯವರು ಮಾಡುವ ಸುಳ್ಳು ಅಪಾದನೆಗಳನ್ನು ಯಶಸ್ವಿಯಾಗಿ ಎದುರಿಸಲು ಎಲ್ಲಾ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕು.
* ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯದ ಜನತೆಗೆ ಅಪಾರ ನಷ್ಟವಾಗಿದೆ. ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ತೆರಿಗೆ ಪಾಲಿನಲ್ಲೂ ಅನ್ಯಾಯವಾಗಿದೆ.
* ನಮ್ಮ ನಾಡಿನ ಜನತೆ ಕಟ್ಡುವ ತೆರಿಗೆಯಲ್ಲಿ ನಮ್ಮ ಪಾಲು ಸಮರ್ಪಕವಾಗಿ ಬರುತ್ತಿಲ್ಲ. ನಾವು ಕ್ರಿಯಾಶೀಲ ಒತ್ತಡ ಮತ್ತು ಬೇಡಿಕೆ ಮೂಲಕ ನಮ್ಮ ಪಾಲನ್ನು ನಾವು ಪಡೆದುಕೊಳ್ಳಬೇಕು.

* ಕೇಂದ್ರದಿಂದ ರಾಜ್ಯಕ್ಕೆ, ನಾಡಿನ ಜನತೆಗೆ ಅನ್ಯಾಯ ಆಗುತ್ತಿದ್ದರೂ ರಾಜ್ಯದಿಂದ ಆಯ್ಕೆ ಆದ ಸಂಸದರು ನಾಲ್ಕೂವರೆ ವರ್ಷಗಳ ಕಾಲ ನಾಡಿನ ಜನತೆಯ ಪರವಾಗಿ ಬಾಯಿ ಬಿಡಲಿಲ್ಲ. ಇದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಕೋವಿಡ್, ಪ್ರವಾಹದ ಸಂದರ್ಭದಲ್ಲೂ ಈ ಸಂಸದರು ರಾಜ್ಯದ ಪರವಾಗಿ ಕೇಂದ್ರದ ಮುಂದೆ ಬಾಯಿ ಬಿಡಲಿಲ್ಲ. ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಸರಿಯಾದ ಉತ್ತರ ಕೊಡಬೇಕು.
* ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನಪರವಾಗಿ ಕೆಲಸ ಮಾಡಿ.












Click it and Unblock the Notifications