ಶರದ್ ಪವಾರ್ ಸಂಪರ್ಕದಲ್ಲಿ ಸಿ.ಎಂ.ಇಬ್ರಾಹಿಂ, ಅಕ್ಟೋಬರ್ 16 ರ ನಂತರ ಮಹತ್ವದ ನಿರ್ಧಾರ?
ಬೆಂಗಳೂರು, ಅಕ್ಟೋಬರ್ 04: ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮುಂಬರುವ 16 ರ ನಂತರ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಗೆ ಸೇರ್ಪಡೆಗೊಳ್ಳುವ ನಿರ್ಧಾರವನ್ನು ಜೆಡಿಎಸ್ ಘೋಷಿಸಿದ ಕೆಲವೇ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಬುಧವಾರ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಕ್ಟೋಬರ್ 16 ರಂದು ಸಮಾನ ಮನಸ್ಕರೊಂದಿಗೆ ಸಭೆ ನಡೆಸಿ ಪಕ್ಷದೊಂದಿಗೆ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಇಬ್ರಾಹಿಂ ಹೇಳಿದ್ದಾರೆ.

"ನಾನು ಕೇಂದ್ರ ನಾಯಕರಾದ ಶರದ್ ಪವಾರ್ ಮತ್ತು ನಿತೀಶ್ ಕುಮಾರ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಅಕ್ಟೋಬರ್ 16 ರಂದು ಹಲವಾರು ರಾಜ್ಯ ನಾಯಕರು ಮತ್ತು ಪ್ರಮುಖ ನಾಯಕರು ನನ್ನನ್ನು ಭೇಟಿಯಾಗುತ್ತಿದ್ದಾರೆ. ಅವರ ಅಭಿಪ್ರಾಯವನ್ನು ತೆಗೆದುಕೊಂಡ ನಂತರ, ನಾನು ಅದೇ ದಿನ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಇಬ್ರಾಹಿಂ ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಿರ್ಧಾರ ಕೈಗೊಳ್ಳುವ ಮುನ್ನ ಪಕ್ಷದ ನಾಯಕರಾದ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಎರಡೂ ಪಕ್ಷಗಳ ನಡುವಿನ ಒಪ್ಪಂದದ ಬಗ್ಗೆ ನನಗೆ ಯಾವುದೇ ಸ್ಪಷ್ಟತೆ ಇಲ್ಲ. ಜೆಡಿಎಸ್ ಸಿದ್ಧಾಂತವನ್ನು ಬಿಜೆಪಿ ಒಪ್ಪಿದೆಯೋ ಅಥವಾ ಇದರ ಸಿದ್ದಾಂತ ಅದು ಒಪ್ಪಿದೆಯೋ ಗೊತ್ತಿಲ್ಲ. ಕೋರ್ ಕಮಿಟಿ ಸದಸ್ಯರು ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ನಂತರ ನಿರ್ಧರಿಸುತ್ತಾರೆ ಎಂದು ಹೇಳಲಾಗಿದೆ. ಆದರೆ, ಕೋರ್ ಕಮಿಟಿಯ ಪ್ರವಾಸ ಆರಂಭವಾಗುವ ಮುನ್ನವೇ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಮೈತ್ರಿ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.
ನಿರ್ಧಾರ ಮರುಪರಿಶೀಲನೆ ದೇವೇಗೌಡರಿಗೆ ಮನವಿ:
ಪಕ್ಷದ ಕೇರಳ ಘಟಕವು ಬಿಜೆಪಿ ಜೈಡಿಎಸ್ ಮೈತ್ರಿಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದೆ. ಇದರಿಂದ ಜೆಡಿಎಸ್ ರಾಜ್ಯಾಧ್ಯಕ್ಷರು ಪಕ್ಷದ ಚಿಹ್ನೆಯನ್ನು ಉಳಿಸಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಪಕ್ಷವು ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಪ್ರಬಲವಾಗಿದೆ. ಕೇರಳದ ನಾಯಕರು ಭೇಟಿಯಾಗಿ ಈ ಮೈತ್ರಿಗೆ ವಿರೋಧವಿದೆ. ಹೀಗಾಗಿ ರಾಜ್ಯ ನಾಯಕರು ಬೇರೆ ಬೇರೆಯಾದರೆ ಪಕ್ಷದ ಚಿಹ್ನೆ ಕಳೆದುಕೊಳ್ಳಬಹುದು. ಪಕ್ಷದ ಅಧ್ಯಕ್ಷರು ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲ ಮುಖಂಡರ ಜತೆ ಸಮಾಲೋಚನೆ ನಡೆಸುವಂತೆ ಕೋರುತ್ತೇನೆ ಎಂದು ಇಬ್ರಾಹಿಂ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಗೆ ಹೋಗುವ ಮುನ್ನ ತಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದು, ಈ ಬಗ್ಗೆ ನನಗೇ ಮಾಹಿತಿ ಇಲ್ಲ. ಈ ವಿಷಯಗಳು ಪಕ್ಷದ ಮಟ್ಟದಲ್ಲಿ ಚರ್ಚೆಯಾಗುತ್ತವೆಯೇ ಹೊರತು ಶಾಸಕಾಂಗ ಪಕ್ಷದ ನಾಯಕರಲ್ಲ. ಕುಮಾರಸ್ವಾಮಿ ನನ್ನ ಜೊತೆ ಮಾತನಾಡಿದ್ದರೆ ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೆ ಎಂದು ಇಬ್ರಾಹಿಂ ಹೇಳಿದರು.
ಜೆಡಿಎಸ್‌ನ ಹಲವು ಮುಸ್ಲಿಂ ಮುಖಂಡರು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರುವ ಪ್ರಕ್ರಿಯೆಯಲ್ಲಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಎಂಎಲ್‌ಸಿಯಾಗಿದ್ದ ಇಬ್ರಾಹಿಂ ಅವರು ವಿಧಾನಸಭೆಯ ಮೇಲ್ಮನೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನವನ್ನು ನಿರಾಕರಿಸಿದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು 2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಕುಮಾರಸ್ವಾಮಿ ಅವರು ಕಳೆದ ತಿಂಗಳು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಎನ್‌ಡಿಎ ಸೇರುವ ನಿರ್ಧಾರ ಪ್ರಕಟಿಸಿದ್ದರು.












Click it and Unblock the Notifications