ತುಮಕೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಘರ್ಷಣೆ- ಹಲವರಿಗೆ ಗಾಯ
ತುಮಕೂರು ಏಪ್ರಿಲ್ 22: ಬಿಜೆಪಿ ಮತ್ತು ಜನತಾದಳ ಸೆಕ್ಯುಲರ್ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಜೆಪಿಯ ಇಬ್ಬರು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಆರೋಪ ಮಾಡಲಾಗಿದೆ. ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಮುಬಾರಕ್ ಪಾಷಾ ಮತ್ತು ನಜೀರ್ ಎಂದು ಗುರುತಿಸಲಾಗಿದೆ. ಅವರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಬೆನ್ನಲ್ಲೇ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರನ್ನು ಒಡೆದ ಬಾಟಲಿಗಳು ಮತ್ತು ಚಾಕುವಿನಿಂದ ಇರಿದಿದ್ದಾರೆ ಎಂದು ಸ್ಥಳೀಯ ಅಂಗಡಿಯವರು ಆರೋಪಿಸಿದ್ದಾರೆ. ಈ ಕುರಿತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ತಿಂಗಳ ಆರಂಭದಲ್ಲಿ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಮೈದಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಘರ್ಷಣೆ ನಡೆಸಿದ ನಂತರ ಕರ್ನಾಟಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಮಾರ್ಚ್ 19 ರಂದು ನಡೆಯಲಿರುವ ಮಹಿಳಾ ಸಮಾವೇಶಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಮತ್ತು ಭಿತ್ತಿಪತ್ರಗಳನ್ನು ಹಾಕುವುದನ್ನು ಬಿಜೆಪಿ ಬೆಂಬಲಿಗರು ವಿರೋಧಿಸಿದ ನಂತರ ಮಾರಾಮಾರಿ ನಡೆದಿದೆ. ಮಾತಿಗೆ ಮಾತು ವಾದ ಜಗಳಕ್ಕೆ ತಿರುಗಿ ಎರಡೂ ಪಕ್ಷಗಳ ಬೆಂಬಲಿಗರು ಕಲ್ಲುಗಳು ಮತ್ತು ದೊಣ್ಣೆಗಳಿಂದ ಪರಸ್ಪರ ದಾಳಿ ಮಾಡುವುದರೊಂದಿಗೆ ಅನೇಕರಿಗೆ ಗಾಯಗಳಾಗಿವೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದ್ದಾರೆ. ಎರಡೂ ಗುಂಪುಗಳು ಕಲ್ಲು ತೂರಾಟ ನಡೆಸಿದ್ದು, ನಮ್ಮ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ್ ಬಿ ನಿಂಬರಗಿ ತಿಳಿಸಿದ್ದಾರೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ದಿನಾಂಕ ಏಪ್ರಿಲ್ 20ಕ್ಕೆ ಕೊನೆಗೊಂಡಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಕೂಡ ಮುಗಿದಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications