ನರೇಗಾ ಭ್ರಷ್ಟಾಚಾರ : ಪ್ರಾಣ ಬಿಟ್ಟ ಇಂಜಿನಿಯರ್
ಚಾಮರಾಜನಗರ, ಜೂ. 24 : ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ಯುವ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷರ ಅಕ್ರಮಗಳಿಗೆ ಸಹಕಾರ ನೀಡಲಾಗದೆ ಯುವಕ ಸಾವಿಗೆ ಶರಣಾಗಿದ್ದಾನೆ.
ಮೃತಪಟ್ಟ ಇಂಜಿನಿಯರ್ ಅನ್ನು ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆಯ ಸುರೇಶ್ (24) ಎಂದು ಗುರುತಿಸಲಾಗಿದೆ. ಇಕುರಟ್ಟಿ ಹೊಸೂರು ಸೇರಿದಂತೆ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸುರೇಶ್ ಸೇವೆ ಸಲ್ಲಿಸುತ್ತಿದ್ದರು.

ಕೆಲವು ದಿನಗಳ ಹಿಂದೆ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಸುರೇಶ್, ಉದ್ಯೋಗ ಖಾತ್ರಿ ಯೋಜನೆಯಡಿ 8 ತಿಂಗಳ ಹಿಂದೆ ಕೊಳ್ಳೇಗಾಲ ತಾಲೂಕಿನ ಕುರಟ್ಟಿಹೊಸೂರು ಸೇರಿದಂತೆ 5 ಗ್ರಾಮ ಪಂಚಾಯಿತಿಗಳ ನರೇಗಾ ಯೋಜನೆ ಉಸ್ತುವಾರಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದರು. [ಉದ್ಯೋಗ ಖಾತ್ರಿಯಡಿ ಸಚಿನ್, ಬಚ್ಚನ್ ಕೆಲಸ!]
ಕುರಟ್ಟಿ ಹೊಸೂರಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರು ಸುರೇಶ್ ಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ. ಕಿರುಕುಳದಿಂದ ಮನನೊಂದಿದ್ದ ಸುರೇಶ್ ಸೋಮವಾರ ಕಾಗಲವಾಡಿ ಮೋಳೆಯ ಮನೆಯಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿಡರು.
ಮನೆಯಲ್ಲಿದ್ದ ಸುರೇಶ್ ತಾಯಿ, ಮಗನನ್ನು ರಕ್ಷಿಸಲು ಪ್ರಯತ್ನ ಪಟ್ಟಿದ್ದರು. ಸ್ಥಳೀಯರ ಸಹಕಾರದಿಂದ ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಶೇ. 90ರಷ್ಟು ಮೈ ಸುಟ್ಟುಕೊಂಡಿದ್ದ ಸುರೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದೂರು ದಾಖಲು : ಸುರೇಶ್ ಸಾವಿನ ಕುರಿತು ಅವರ ತಂದೆ ಮರಿಸ್ವಾಮಿ ಶೆಟ್ಟಿ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ 2013-14 ನೇ ಸಾಲಿನಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ನರೇಗಾ ಯೋಜನೆ ಕಾಮಗಾರಿಯನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲಾಗಿತ್ತು.
ಆದರೆ, ಈ ಕಾಮಗಾರಿಯಲ್ಲಿ ಹೆಚ್ಚು ಅಕ್ರಮ ನಡೆದಿತ್ತು. ಈ ಕುರಿತು ಸುಳ್ಳು ದಾಖಲೆ ಸಿದ್ಧಪಡಿಸುವಂತೆ ಹಿಂದಿನ ಗ್ರಾಪಂ ಅಧ್ಯಕ್ಷ ಸರ್ದಾರ್, ಪಿಡಿಒ ವೈರಮುಡಿ ಮಾಣಿಕ್ಯಂ ಹಾಗೂ ಸರ್ದಾರ್ ಪತ್ನಿ ಸರೋಜಾ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ, ಸುರೇಶ್ ಇದಕ್ಕೆ ಸಹಕರಿಸಿರಲಿಲ್ಲ. ಈ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications