ಗುತ್ತಿಗೆದಾರ ಸಚಿನ್ ಕೇಸ್‌ನಲ್ಲಿ ಸಚಿವ ಪ್ರಿಯಾಂಕ್ ಆಪ್ತ ಸೇರಿ ಐದು ಮಂದಿ ಅರೆಸ್ಟ್
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿ, ಬಿಜೆಪಿ-ಕಾಂಗ್ರೆಸ್ ನಡುವೆ ಗಲಾಟೆಗೆ ಕಾರಣವಾಗಿದ್ದ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಗುತ್ತಿಗೆದಾರ ಸಚಿನ್ ಅವರು ಡೆತ್‌ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದರು. ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನೂ ಎನ್ನಲಾದ ವ್ಯಕ್ತಿ ಸೇರಿ ಹಲವರ ಹೆಸರಿತ್ತು.
ಮುಖ್ಯವಾಗಿ ಸಚಿವ ಪ್ರಿಯಾಂಕ್ ಅವರ ಆಪ್ತ ಎನ್ನಲಾದ ರಾಜು ಕಪನೂರು ಸೇರಿದಂತೆ ಒಟ್ಟು ಎಂಟು ಮಂದಿಯ ಹೆಸರು ಡೆತ್‌ನೋಟ್‌ನಲ್ಲಿತ್ತು. ಈ ಕೇಸ್ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಗಳು ಇಂದು ಬೀದರ್ನಲ್ಲಿ ಐದು ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳಾದ ರಾಜು ಕಪನೂರು, ರಾಮನಗೌಡ ಪಾಟೀಲ್, ಸತೀಶ್, ಗೋರಕ್ ನಾಥ್, ನಂದಕುಮಾರ್ ನಾಗಬುಜಂಗಿ ಎಂಬುವವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಈ ಕೇಸ್ ಸಂಬಂಧ ಡೆತ್‌ನೋಟ್‌ನಲ್ಲಿದ್ದ ಹೆಸರಿನ ವ್ಯಕ್ತಿಗಳನ್ನು ಸಿಐಡಿ ಅಧಿಕಾರಿಗಳು ಬೆನ್ನುಹತ್ತಿದ್ದರು. ಆರೋಪಿಗಳನ್ನು ವಿಚಾರಣೆಗೆ ಬರುವಂತೆ ನೋಟಿಸ್ ಕೂಡ ಕೊಡಲಾಗಿತ್ತು. ಆದರೆ, ಅಧಿಕಾರಿಗಳಿಗೆ ಸರಿಯಾದ ಉತ್ತರ ಬಾರದ ಹಿನ್ನೆಲೆ ಐದು ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಸದ್ಯ ಬಂಧಿತರನ್ನು ಬೀದರ್‌ನ ಜೆಎಂಎಫ್ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ವಶಕ್ಕೆ ನೀಡುವಂತೆ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಗುತ್ತಿಗೆದಾರ ಸಚಿನ್ ಎಂಬುವವರು ಇತ್ತೀಚೆಗೆ ರೈಲಿಗೆ ತಲೆ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಸೇರಿದಂತೆ ಹಲವರ ವಿರುದ್ಧ ಸಚಿನ್ ಆರೋಪಿಸಿ ಡೆತ್‌ನೋಟ್ ಬರೆದಿಟ್ಟಿದ್ದರು. ಟೆಂಡರ್‌ಗಾಗಿ ಹಣ ಪಡೆದು ವಂಚನೆ ಮಾಡಿದಲ್ಲದೆ, ಒಂದು ಕೋಟಿ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ಬಳಿಕ ಈ ಡೆತ್‌ನೋಟ್ ವಿಚಾರವಾಗಿ ಬಿಜೆಪಿ ಕೂಡ ಬೃಹತ್ ಪ್ರತಿಭಟನೆ ಮಾಡಿತ್ತು. ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿದ್ದು, ಕೂಡಲೇ ರಾಜೀನಾಮೆ ಕೊಡಬೇಕು ಎಂದು ಪಟ್ಟುಹಿಡಿದ್ದರು. ರಾಜಕೀಯವಾಗಿ ಸಂಘರ್ಷಕ್ಕೆ ಕಾರಣವಾಗಿದ್ದ ಈ ಸೂಸೈಡ್ ಕೇಸ್ ಅನ್ನು ಸದ್ಯ ಸಿಬಿಐ ತನಿಖೆ ನಡೆಸುತ್ತಿದೆ. ಈ ಕೇಸ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ತಳುಕು ಹಾಕಿಕೊಂಡಿರುವುದು ಹೊಸ ತಿರುವು ಪಡೆದುಕೊಂಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಆತ್ಮಹತ್ಯೆ ಭಾಗ್ಯ ಜಾರಿಗೊಳಿಸಿದೆ. ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವು ದೇಶದಲ್ಲೇ ಸುದ್ದಿ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದರು.












Click it and Unblock the Notifications