Get Updates
Get notified of breaking news, exclusive insights, and must-see stories!

ಮಕ್ಕಳ ನಾಪತ್ತೆ ಪ್ರಕರಣ: ದೇಶದಲ್ಲಿ ಕರ್ನಾಟಕದ ಸ್ಥಾನ-3, ಅಂಕಿ ಅಂಶಗಳು ಹಾಗೂ ಪೋಷಕರು ಗಮನಿಸಬೇಕಾದ ಮುಖ್ಯ ಮಾಹಿತಿ

ಕರ್ನಾಟಕ, ಆಗಸ್ಟ್‌, 29: ಇತ್ತೀಚೆಗಿನ ವರದಿಗಳ ಪ್ರಕಾರ ಮಕ್ಕಳ ನಾಪತ್ತೆ ಪ್ರಕರಣದ ವಿಚಾರದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಲಭಿಸಿದೆ. ಇದು ಹೆಮ್ಮೆ ಅಲ್ಲ ಪ್ರಜ್ಞಾವಂತ ನಾಗರಿಕ ಸಮಾಜವೇ ತಲೆ ತಗ್ಗಿಸುವ, ಹೆತ್ತವರು ಭಯಪಡುವ ವಿಷಯವಾಗಿದೆ. ಜೊತೆಗೆ ಎಲ್ಲೊ ಒಂದು ಕಡೆ ಕಾಣದ ಕೈಗಳು ಅಪ್ರಾಪ್ತ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದಾರಾ? ಎಂಬ ಸಂಶಯಗಳು ನಾಪತ್ತೆ ಪ್ರಕರಣದ ಸುತ್ತ ಗಿರಕಿ ಹೊಡೆಯುತ್ತಿವೆ.

ಈಗೀಗ ಮಕ್ಕಳ ನಾಪತ್ತೆ ಅದರಲ್ಲೂ ಅಪ್ರಾಪ್ತ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳ ಹಿಂದಿನ ಮಾಫಿಯಾ ನಮ್ಮ ನಿಮ್ಮೆಲ್ಲರನ್ನು ಚುಚ್ಚುತ್ತಿದೆ. ಅಷ್ಟೇ ಅಲ್ಲದೆ ಹೆತ್ತವರಿಗೆ ಮಕ್ಕಳ ಬಗೆಗಿನ ಜವಬ್ದಾರಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಸಾಮಾನ್ಯವಾಗಿ ನಾವೆಲ್ಲರೂ ಮಕ್ಕಳ ನಾಪತ್ತೆ ಪ್ರಕರಣದ ಬಗ್ಗೆ ಓದುತ್ತಲೇ ಇರುತ್ತೇವೆ. ಅವು ನಾಪತ್ತೆ ಸುದ್ದಿಯಾಗಿ ಉಳಿದು ಹೋಗುತ್ತಿದೆ.

children-missing-cases

ಆ ಸುದ್ದಿಯನ್ನು ಅದೆಷ್ಟು ಮಂದಿ ಗಂಭೀರವಾಗಿ ಪರಿಗಣಿಸಿದ್ದಾರೋ ಗೊತ್ತಿಲ್ಲ. ಆದರೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ಅದೊಂದು ವರದಿ ಈಗ ಎಲ್ಲರನ್ನು ನಿದ್ದೆಗೆಡಿಸುವಂತೆ ಮಾಡಿದೆ. ಜೊತೆಗೆ ನಾಪತ್ತೆ ಪ್ರಕರಣದ ಹಿಂದಿನ ಅಸಲಿಯತ್ತನ್ನು ಹೊರಹಾಕುತ್ತಿದೆ.

5 ವರ್ಷದಲ್ಲಿ 2.75ಲಕ್ಷ ನಾಪತ್ತೆ ಪ್ರಕರಣ

ದೇಶದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕರ್ನಾಟಕ ಮೂರನೇ ಸ್ಥಾನ ಪಡೆದಿರುವುದು ನಾವೆಲ್ಲರೂ ಯೋಚನೆ ಮಾಡುವಂತೆ ಮಾಡಿದೆ. ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 2.75 ಲಕ್ಷಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆ ಪೈಕಿ 27,528 ಮಕ್ಕಳು ರಾಜ್ಯದಿಂದ ನಾಪತ್ತೆಯಾಗಿದ್ದಾರೆ ಎನ್ನುವುದೇ ನಾವೆಲ್ಲರೂ ತಲೆಕೆಡಿಸಿಕೊಳ್ಳಬೇಕಾದ ಬಹುಮುಖ್ಯ ವಿಚಾರವಾಗಿದೆ.

ದೇಶದಲ್ಲಿ ನಾಪತ್ತೆಯಾಗಿರುವ ಮಕ್ಕಳ ಅಂಕಿ-ಅಂಶಗಳನ್ನು ಕಲೆಹಾಕಿ ನೋಡಿದ್ದೇ ಆದರೆ 2018ರ ಜನವರಿ 1ರಿಂದ 2023ರ ಜೂನ್ 30ರ ವರೆಗೆ ದೇಶದಲ್ಲಿ 2.12 ಲಕ್ಷ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದರೆ, ಗಂಡು ಮಕ್ಕಳ ಸಂಖ್ಯೆ 62 ಸಾವಿರ. ಈ ಪೈಕಿ 1.73 ಲಕ್ಷ ಹೆಣ್ಣುಮಕ್ಕಳು ಮತ್ತು 66 ಸಾವಿರ ಗಂಡು ಮಕ್ಕಳು ಸೇರಿದಂತೆ 2.4 ಲಕ್ಷ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಹೇಳಿದೆ.

ಪತ್ತೆಯಾಗದೆ ಉಳಿಯುತ್ತಿರುವ ಹೆಣ್ಮಕ್ಕಳು

ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಎಷ್ಟು ಮಕ್ಕಳು ನಾಪತ್ತೆಯಾಗಿದ್ದಾರೆ ಮತ್ತು ಎಷ್ಟು ಮಂದಿಯನ್ನು ಪತ್ತೆ ಮಾಡಲಾಗಿದೆ ಎಂಬುದನ್ನು ನೋಡಿದ್ದೇ ಆದರೆ 8,632 ಗಂಡು ಮಕ್ಕಳು ಹಾಗೂ 18,893 ಹೆಣ್ಣು ಮಕ್ಕಳು ನಾಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 7,163 ಗಂಡುಮಕ್ಕಳು 14,649 ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 21,817 ಮಕ್ಕಳನ್ನು ರಕ್ಷಿಸಲಾಗಿದೆ ಎಂಬ ಮಾಹಿತಿಯಿದೆ.

ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಕೆಲವು ಮಕ್ಕಳು ಹಲವು ಕಾರಣಗಳಿಂದ ಮನೆ ಬಿಟ್ಟು ಹೋಗಿರುತ್ತಾರೆ. ಅಂತಹ ಮಕ್ಕಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗುವುದಿಲ್ಲ. ಆದರೆ ಮಕ್ಕಳ ಕಳ್ಳತನ ಮತ್ತು ಕಳ್ಳಸಾಗಾಣಿಕೆ ಆಗಿದ್ದರೆ ಅಂತಹ ಮಕ್ಕಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲ್ ಆಗಿದೆ. ರಾಜ್ಯದಲ್ಲಿ ಪ್ರತಿದಿನ 5 ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಇದರ ಹಿಂದೆ ಮಾನವ ಕಳ್ಳಸಾಗಾಣಿಕೆ ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ತಂಡಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳೇ ಟಾರ್ಗೆಟ್ ಎನ್ನುವುದು ಕೂಡ ಅಷ್ಟೇ ಸತ್ಯ.

ಕೆಟ್ಟ ಪರಿಸ್ಥಿತಿಯಲ್ಲಿ ಹಲವು ಮಕ್ಕಳ ಜೀವನ

ರಾಜ್ಯದಲ್ಲಿ ಮಕ್ಕಳ ಮಾರಾಟ ಮತ್ತು ಕಳ್ಳತನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಸೂಕ್ತ ತನಿಖೆ ನಡೆಸುವಂತೆಯೂ ಆಯೋಗ ಮನವಿ ಮಾಡಿದೆ. ಸರ್ಕಾರ ಮಕ್ಕಳ ಕಳ್ಳತನ ಸೇರಿದಂತೆ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಿರ್ಭಯ ನಿಧಿ ಅಡಿಯಲ್ಲಿ 35 ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕಗಳನ್ನು ಸ್ಥಾಪಿಸಿದೆ.

ಜೊತೆಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಾಲಾ ಕಾಲೇಜು, ಬಸ್ ನಿಲ್ದಾಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಓಡಾಡುವ ಸ್ಥಳಗಳಲ್ಲಿ ಹೆಚ್ಚಿನ ಗಸ್ತು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದೆಡೆ ಕೆಟ್ಟ ಪರಿಸ್ಥಿತಿಯಲ್ಲಿ ಮಕ್ಕಳು ಜೀವನ ಮಾಡುತ್ತಿದ್ದಾರೆ. ಶಾಲೆಗಳಿಂದ ಹೊರಗುಳಿಯುತ್ತಿರುವ ಮಕ್ಕಳು ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಕೆಲವು ಮಕ್ಕಳನ್ನು ಬಲವಂತದಿಂದ ದುಡಿಮೆಗೆ ದೂಡಲಾಗುತ್ತಿದೆ.

ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ

ನಾಪತ್ತೆಯಾಗುವ ಮಕ್ಕಳು ಏನಾಗುತ್ತಿದ್ದಾರೆ ಎಂಬುದನ್ನು ನೋಡಿದ್ದೇ ಆದರೆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವ ಉದ್ದೇಶದಿಂದ ಮದುವೆಯಾಗುವ ಆಮಿಷವೊಡ್ಡಿ ಕರೆದೊಯ್ಯಲಾಗುತ್ತಿದೆ. ವೇಶ್ಯಾವಾಟಿಕೆ ಉದ್ದೇಶದಿಂದಲೇ ಮಕ್ಕಳನ್ನು ಕದಿಯುವ, ವಂಚಿಸುವ, ಬೆದರಿಕೆ ಹಾಕಿ ಹೆಣ್ಣು ಮಕ್ಕಳನ್ನು ಅಪಹರಿಸುವ ಕೆಲಸ ನಡೆಯುತ್ತಿದೆ.

ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಆಮಿಷವೊಡ್ಡಿ ಅವರಲ್ಲಿ ಬಣ್ಣಬಣ್ಣದ ಬಯಕೆಗಳನ್ನು ಹುಟ್ಟು ಹಾಕಿ ಸುಲಭವಾಗಿ ಮನಪರಿವರ್ತನೆ ಮಾಡುವಲ್ಲಿ ಕೆಲವರು ಕಾರ್ಯಪ್ರವೃತ್ತರಾಗಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸುಲಭವಾಗಿ ಆ ಕೆಲಸಗಳು ನಡೆಯುತ್ತಿವೆ. ಈ ವಿಷಯದಲ್ಲಿ ಪೋಷಕರು ಎಚ್ಚರವಾಗಿರುವುದು ಒಳಿತು. ಗಂಡು ಮಕ್ಕಳನ್ನು ಕಳವು ಮಾಡಿ ಭಿಕ್ಷೆ ಬೇಡಲು, ಮಾದಕ ವಸ್ತು, ಶಸ್ತ್ರಾಸ್ತ್ರಗಳನ್ನು ಸಾಗಿಸಲು, ಸಮಾಜಘಾತುಕ ಕಾರ್ಯಗಳಿಗೂ ಬಳಸಲಾಗುತ್ತಿದೆ.

ಎಲ್ಲವೂ ರಹಸ್ಯವಾಗಿಯೇ ಉಳಿದು ಹೋಗುತ್ತಿದೆ

ಇನ್ನೊಂದು ಭಯಾನಕ ಸಂಗತಿಯೂ ಇದೆ. ಅದು ಏನೆಂದರೆ? ಕೆಲವು ಪ್ರವಾಸಿ ತಾಣಗಳಲ್ಲಿ ವಿದೇಶದಿಂದ ಬರುವ ಪ್ರವಾಸಿಗರ ತೃಪ್ತಿಪಡಿಸಲು ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಮಸಾಜ್ ಸೇರಿದಂತೆ ವೇಶ್ಯಾಗೃಹಗಳಿಗೂ ಅಪ್ತಾಪ್ತ ಹೆಣ್ಣು ಮಕ್ಕಳನ್ನು ದೂಡಲಾಗುತ್ತಿದೆ. ಇದರ ಹಿಂದೆ ಬೃಹತ್ ಜಾಲವಿದೆ. ಅಪಹರಿಸಿದವರನ್ನು ಗೃಹಬಂಧನದಲ್ಲಿ ಇರಿಸುತ್ತಿರುವುದರಿಂದ ಎಲ್ಲವೂ ರಹಸ್ಯವಾಗಿ ಉಳಿಯುತ್ತಿದೆ. ಸಂತ್ರಸ್ತ ಹೆಣ್ಣು ಮಕ್ಕಳು ಜೀವಭಯದಲ್ಲಿ ಬದುಕುತ್ತಿದ್ದು, ಯಾವುದೇ ಮಾಹಿತಿ ಹೊರ ಹೋಗದಂತೆ ನೋಡಿಕೊಳ್ಳಲಾಗುತ್ತದೆ.

ವೇಶ್ಯಾವಾಟಿಕೆಗೆ ಒಳಪಡುವ ಹೆಣ್ಣುಮಕ್ಕಳನ್ನು ಗೌಪ್ಯವಾಗಿರಿಸುವುದಲ್ಲದೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯದ ವೇಶ್ಯಾಗೃಹಗಳಿಗೆ ಬದಲಾಯಿಸುತ್ತಲೇ ಇರುವುದರಿಂದ ಮಾನಸಿಕವಾಗಿ ಕುಗ್ಗಿ ಹೋಗಿಬಿಡುತ್ತಾರೆ. ಗಂಡು ಮಕ್ಕಳ ಪರಿಸ್ಥಿತಿಯೂ ಹೊರತಾಗಿಲ್ಲ. ಇಂತಹದೊಂದು ಚಟುವಟಿಕೆ ನಡೆಯುತ್ತಿದೆ ಎಂಬುದು ನಮಗೆ ಗೊತ್ತಿರುತ್ತದೆಯಾದರೂ ಎಲ್ಲಿ ನಡೆಯುತ್ತಿದೆ ಎಂಬುದು ರಹಸ್ಯವಾಗಿ ಉಳಿಯುವುದರಿಂದ ಪೊಲೀಸರಿಗೆ ಪತ್ತೆಹಚ್ಚಲು ಕಷ್ಟವಾಗುತ್ತಿದೆ.

ಪೋಷಕರೇ ಮಕ್ಕಳತ್ತ ಎಚ್ಚರ ವಹಿಸಿ

ಇದೆಲ್ಲದರ ನಡುವೆ ಮಕ್ಕಳ ಅಪಹರಣ ನವಜಾತ ಶಿಶುವಿನಿಂದಲೇ ನಡೆಯುತ್ತಿದ್ದು, ಅದು ಕೆಲವು ಕ್ರಿಮಿನಲ್‌ಗಳಿಗೆ ಹಣ ತಂದು ಕೊಡುವ ಕಸುಬಾಗಿದೆ. ಹೀಗಾಗಿ ಮಕ್ಕಳ ಹುಟ್ಟಿನಿಂದಲೇ ಪೋಷಕರು ಎಚ್ಚರ ವಹಿಸುವುದು ಬಹುಮುಖ್ಯವಾಗಿದೆ. ಶಾಲೆಗೆ ಕಳುಹಿಸಿ ಬಿಟ್ಟರೆ ಸಾಲದು ಅವರ ಮೇಲೆ ನಿಗಾವಹಿಸಬೇಕಾಗುತ್ತದೆ. ಮಕ್ಕಳ ಮೇಲೆ ಒತ್ತಡ ತರದೆ ಪ್ರೀತಿಯಿಂದ ನೋಡಿಕೊಳ್ಳಬೇಕಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+