ಬಿಜೆಪಿ ತಲೆಗೆ ಮತ್ತೊಂದು ಮಲೆನಾಡು ಸೆಕ್ಸ್ ಸ್ಕ್ಯಾಂಡಲ್
ಚಿಕ್ಕಮಗಳೂರು, ಸೆ.13: ಬಿಜೆಪಿ ಆಡಳಿತದಲ್ಲಿದ್ದಾಗ ರೇಣುಕಾಚಾರ್ಯ, ಹರತಾಳು ಹಾಲಪ್ಪ, ರಘುಪತಿ ಅಂತಹ ಘಟಾನುಘಟಿಗಳು ಲೈಂಗಿಕ ಹಗರಣಗಳಲ್ಲಿ ತಳಕು ಹಾಕಿಕೊಂಡು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಹಳೆಯ ಸುದ್ದಿ. ಇದೀಗ ಭಾರತೀಯ ಜನತಾ ಪಕ್ಷ ಅಂತಹುದೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಈ ಪ್ರಕರಣವೀಗ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಮಲೆನಾಡಿನಲ್ಲಿ ಬಿಜೆಪಿ ವಿರುದ್ಧ ಮತ್ತೊಂದು ಲೈಂಗಿಕ ಹಗರಣದ ಮಸಿ ಮೆತ್ತಿಕೊಂಡಿದೆ. ಕಾಮಕಾಂಡದ ವಾಸನೆ ಬೆನ್ನತ್ತಿಹೋದಾಗ ಈಗಾಗಲೇ ಎರಡು ಪೊಲೀಸ್ FIRಗಳು ದಾಖಲಾಗಿವೆ. ಇಲ್ಲಿ ಆರೋಪಿಗಳು, ದೂರುದಾರರು ಎಲ್ಲರೂ ಬಿಜೆಪಿಯವರೇ ಎಂಬುದು ಗಮನಾರ್ಹ. ಈ ಎರಡೂ FIRಗಳು ಸೆಕ್ಸ್ ಸ್ಕ್ಯಾಂಡಲ್ ಒಂದರ ಸುತ್ತ ಗಿರಕಿ ಹೊಡೆಯುತ್ತಿದೆ. ಎಫ್ಐಆರ್ ದಾಖಲಾಗಿ ಸುಮಾರು 15 ದಿನಗಳೇ ಕಳೆದಿದ್ದರೂ ಎಲ್ಲವೂ ಇನ್ನೂ ನಿಗೂಢವಾಗಿಯೇ ಇದೆ.

ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಮನು ಎಂಬಾತ ಈ ಕಾಮಕಾಂಡದ ಪ್ರಮುಖ ಪಾತ್ರಧಾರಿ! ಈತ ಕಾಮಕಾಂಡದ blackmail ಸೂತ್ರಧಾರಿಯೂ ಹೌದು.
ಹಿಂದೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಸರ್ಕಾರಿ ಜಾಗದ ಒತ್ತುವರಿ ನಡೆದಿತ್ತು. ಒತ್ತುವರಿ ಮಾಡಿಕೊಂಡಿದ್ದು ಇದೇ ಮನು. ಅದರ ಸಂಬಂಧ ಸಮಾಜ ಪರಿವರ್ತನಾ ಸಂಘದ ಎಸ್ಆರ್ ಹಿರೇಮಠ್ ಅವರಿಂದ ಪರಿಶೀಲನೆಯೂ ನಡೆದಿತ್ತು.
ಆಗ, ಮನುವಿಗೆ ಎನ್ ಆರ್ ಪುರ ತಾಲೂಕು ಪಂಚಾಯ್ತಿ ಅಧ್ಯಕ್ಷ ಜೆಜಿ ನಾಗರಾಜ್ ಹಾಗೂ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೀಶ್ ಕುಮಾರ್ ಸೇರಿದಂತೆ ಕೆಲವು ಪ್ರಮುಖ ಮುಖಂಡರು ಬುದ್ಧಿವಾದ ಹೇಳಿದ್ದರಂತೆ. ಇದರಿಂದ ವ್ಯಘ್ರಗೊಂಡ ಮನು, ನನಗೇ ಬುದ್ಧಿ ಹೇಳೋಕೆ ಬರ್ತೀರಾ, ನೀವೇನ್ ಸಾಚಾನಾ, ನಿಮ್ಮ ಮಾನ ಮರ್ಯಾದೆ ಹರಾಜು ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದನಂತೆ.
ಮುಂದೆ... ಯುವತಿಯೊಬ್ಬಳ ಹೆಸರನ್ನು ಬಳಸಿಕೊಂಡು ಮನು ಈ ಮುಖಂಡರಿಗೆಲ್ಲ ಫೋನ್ ಮಾಡಿದ ಮನುವರ್ಯ 'ನೀವು ಆ ಯುವತಿಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ನನಗೆ ಗೊತ್ತಾಗಿದೆ. ಇದರ ಬಗ್ಗೆ ನನ್ನ ಬಳಿ ಸಾಕ್ಷ್ಯವೂ ಇದೆ. ನಿಮ್ಮನ್ನು ಹೇಗೆ ಮುಗಿಸಬೇಕು ಅನ್ನೋದು ನನಗೆ ಗೊತ್ತಿದೆ' ಎಂದು blackmailಗಿಳಿದಿದ್ದಾನೆ.
ಅಷ್ಟೇ ಅಲ್ಲ. 'ಸದರಿ ಯುವತಿಗೆ ನೀವು ಆಸ್ತಿ ಕೊಡಬೇಕು. ಜತೆಗೆ, ನಿಮ್ಮ ಅರ್ಧದಷ್ಟು ಆಸ್ತಿಯನ್ನು ನನ್ನ ಹೆಸರಿಗೂ ಬರೆಯಬೇಕು. ಇಲ್ಲಾಂದ್ರೆ ನಿಮ್ಮಗಳ ವಿರುದ್ಧ ಯುವತಿಯ ಕಡೆಯಿಂದ ರೇಪ್ ಕೇಸ್ ಹಾಕಿಸಿ, ಮಾನ ಮರ್ಯಾದೆ ಹರಾಜು ಹಾಕುತ್ತೇನೆ' ಎಂದೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಹೀಗೆ ಮನುವಿನಿಂದ blackmailಗೊಳಗಾದ ತಾಲೂಕು ಪಂಚಾಯ್ತಿ ಅಧ್ಯಕ್ಷ ನಾಗರಾಜ್ ಮತ್ತು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಆಶೀಶ್ ಕುಮಾರ್ ಅವರು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ. FIRಗಳು ಕೂಡಾ ದಾಖಲಾಗಿವೆ. ಹಣ ಸುಲಿಗೆ, ಮಾನಹಾನಿ ಬೆದರಿಕೆ ಹಾಗೂ ಮಾನಸಿಕ ಹಿಂಸೆ ಕೊಡುತ್ತಿರುವ ಮನು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರನ್ನು ಅಲವತ್ತುಕೊಂಡಿದ್ದಾರೆ.
ಈ ಮಧ್ಯೆ, ಎಫ್ಐಆರ್ ದಾಖಲಾಗಿ ಇಷ್ಟು ದಿನಗಳಾದರೂ ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ? ತೆರೆಮರೆಯಲ್ಲಿ ರಾಜಿಸಂಧಾನಗಳು ಜೋರಾಗಿವೆಯಾ? ಮನು ಮಾಡಿರುವ ಅನೈತಿಕ ಸಂಬಂಧದ ಆರೋಪದಲ್ಲಿ ಹುರುಳಿದೆಯಾ? ಎಂಬ ಪ್ರಶ್ನೆಗಳು ಕಾಡುತ್ತಿವೆ.












Click it and Unblock the Notifications