ಅನ್ಯಾಯ ಮಾಡಿದ್ದಕ್ಕೆ ನೀವು ಕುಂಟುತ್ತಿದ್ದೀರಿ: ಸಿದ್ದರಾಮಯ್ಯ ವಿರುದ್ಧ ನಾಲಗೆ ಹರಿಬಿಟ್ಟ ಬಿಜೆಪಿ ನಾಯಕ
ಬೆಂಗಳೂರು, ಮಾರ್ಚ್ 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ದಿನಗಳಿಂದ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ವೀಲ್ಚೇರ್ನಲ್ಲಿ ಓಡಾಡುತ್ತಿದ್ದಾರೆ. 76 ವರ್ಷವಾದರೂ ಪಕ್ಷದ ಚಟುವಟಿಕೆ, ಸರ್ಕಾರದ ಕಾರ್ಯಕ್ರಮಗಳ ಜೊತೆಗೆ ಬಜೆಟ್ ಕುರಿತಾಗಿಯೂ ಸಿದ್ದತೆಯನ್ನ ನಡೆಸಿಕೊಂಡಿದ್ದಾರೆ. ಎಷ್ಟೇ ಓಡಾಟ ಅಂತಾ ಬಂದ್ರೆ, ತುಂಬಾನೇ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಮಂಡಿನೋವಿನಿಂದಾಗಿ ವೀಲ್ಚೇರ್ನಲ್ಲಿ ಓಡಾಡ್ತಿದ್ದಾರೆ. ಆದರೆ, ರಾಜಕೀಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಟೀಕಿಸೋ ಭರದಲ್ಲಿ, ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ನಾಲಗೆ ಹರಿಬಿಟ್ಟಿದ್ದಾರೆ.
ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರವನ್ನ ಟೀಕಿಸುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದು,ಇದೀಗ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿದೆ ಎಂದು ಆರೋಪಿಸಿ ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಛಲವಾದಿ ನಾರಾಯಣಸ್ವಾಮಿ ಅವರು, ಮಂಡಿ ನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರು ವೀಲ್ ಚೇರ್‌ನಲ್ಲಿ ಓಡಾಡುತ್ತಿರುವ ಬಗ್ಗೆ ಲೇವಡಿ ಮಾಡಿದರು. ದಲಿತರ 25 ಸಾವಿರ ಕೋಟಿ ರೂ. ದುರ್ಬಳಕೆಯಾಗಿದೆ. ನಮ್ಮ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನೀವು ಕುಂಟುತ್ತಿದ್ದೀರಿ. ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನಿಮಗೆ ಈ ಸ್ಥಿತಿ ಬಂದಿದೆ. ದಲಿತರ ಹಣ ದುರುಪಯೋಗ ಮಾಡಿಕೊಂಡಿದ್ದಕ್ಕೆ ಇಂದು ವೀಲ್ ಚೇರ್‌ನಲ್ಲಿ ಬರುವಂತಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ತುಳಿತಕ್ಕೆ ಒಳಗಾದ ಪರಿಶಿಷ್ಟ ಸಮುದಾಯದವರಿಗಾಗಿ ಇರುವ ಎಸ್‍ಇಪಿ- ಟಿಎಸ್‍ಪಿ ವಿಶೇಷ ಯೋಜನೆ. ವಿದ್ಯಾವಂತರನ್ನಾಗಿ ಮಾಡುವುದು, ಜಮೀನು ಖರೀದಿಸಿ ಕೊಡುವುದು, ಭೂಮಿಗೆ ಕೊಳವೆಬಾವಿ ಹಾಕಿಸಿ ನೀರು ಕೊಡುವುದು, ಕೈಗಾರಿಕೆ ಸ್ಥಾಪನೆಗೆ ನೆರವಿನಂಥ ಆಸ್ತಿ ನಿರ್ಮಾಣಕ್ಕೆ ಹಣ ಕೊಡುವ ಯೋಜನೆ ಇದು. ಅದರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಮೋಸ ಮಾಡಿದ್ದಾರೆ. ಪರಿಶಿಷ್ಟ ಸಮುದಾಯದವರು ಫ್ರೀ ಬಸ್ಸಿನಲ್ಲಿ ಓಡಾಡುವುದಿಲ್ಲ; ಮೋಜು ಮಸ್ತಿ ಮಾಡುವುದಿಲ್ಲ. ಆದರೆ, ನೀವು ನಮ್ಮವರ ವಿಶೇóಷ ಯೋಜನೆಯ ಹಣವನ್ನು ತೆಗೆದು ನಿಮ್ಮ ಖಾತೆಗೆ ಹಾಕಿದ್ದೀರಿ ಎಂದು ಆಕ್ಷೇಪಿಸಿದರು. ಇದು ನಮ್ಮ ಜನಾಂಗಕ್ಕೆ ಮಾಡಿದ ಮೋಸ ಅಲ್ಲವೇ? ಎಂದು ಪ್ರಶ್ನಿಸಿದರು. ನಮ್ಮಲ್ಲಿ ವಿದ್ಯಾವಂತರು ಹೆಚ್ಚಾಗಿದ್ದಾರೆ. ಆದರೆ, ನಿರುದ್ಯೋಗವೂ ಅಷ್ಟೇ ಬೆಳೆಯುತ್ತಿದೆ. ಯುವನಿಧಿ ಪೇಪರಲ್ಲಿ ಇದೆಯೇ ಹೊರತು ನಮ್ಮ ಜನರಿಗೆ ಇದು ದಕ್ಕಿಲ್ಲ ಎಂದು ಛಲವಾದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಪಿ-ಟಿಎಸ್‌ಪಿ ಅನುದಾನ ದುರ್ಬಳಕೆ ಕುರಿತು ವಾಗ್ದಾಳಿ ನಡೆಸಿದ ಅವರು, ಪರಿಶಿಷ್ಟರಲ್ಲಿ ವಿದ್ಯಾವಂತರು ಹೆಚ್ಚಾಗ್ತಿದ್ದಾರೆ. ನಿರುದ್ಯೋಗ ಸಹ ಹೆಚ್ಚಾಗಿದೆ. ಪೇಪರ್‌ಗಳಲ್ಲಿ ಅಷ್ಟೇ ಗ್ಯಾರಂಟಿ ಇದೆ. ನಮಗೆ ಆ ಗ್ಯಾರಂಟಿ ಸಿಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟೇ ಇಲ್ಲ. ದಲಿತರು ಬೀದಿಯಲ್ಲಿ ಕುಳಿತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗುಲಾಮಗಿರಿಯ ಸುಖದ ಸಂಭ್ರಮ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿಕೊಂಡು ಬಂದಿದೆ. ದಲಿತರಿಗೆ ಅನ್ಯಾಯ ಮಾಡಿದ್ದಕ್ಕೆ ಅವರು ಈಗ ಕುಂಟುವ ಹಾಗಾಗಿದೆ. ದಲಿತರ ಹಣ ನುಂಗಿದಕ್ಕೆ ಅವರ ಗಂಟಲು ಸರಿಯಿಲ್ಲ, ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ. ನಮ್ಮ ಜನರಿಗೆ ಅನ್ಯಾಯ ಮಾಡಿ ಓಡಾಡಲು ಹೋದರಲ್ಲಾ ಅದಕ್ಕೆ ಅವರು ಕುಂಟುತ್ತಾ ಇರೋದು. ಈಗ ವೀಲ್ ಚೇರ್ ಬಂದಿದೆ, ಮುಂದೆ ವೀಲ್ ಚೇರ್ ಹೋಗಿ ಬೇರೆ ಚೇರ್ ಬರುತ್ತದೆ ಎಂದು ಕ ಛಲವಾದಿ ನಾರಾಯಣಸ್ವಾಮಿ ನಾಲಗೆ ಹರಿಬಿಟ್ಟಿದ್ದಾರೆ.












Click it and Unblock the Notifications