ರಾಜ್ಯದಲ್ಲಿ ಮಳೆ ಇಳಿಮುಖ: ಜಲಾಶಯದಲ್ಲಿ ಎಷ್ಟು ನೀರಿದೆ?
ಬೆಂಗಳೂರು, ಜು.15: ಮಲೆನಾಡು, ಕರಾವಳಿ, ಕೊಡಗಿನಲ್ಲಿ ಸೋಮವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ರಾಜ್ಯದ ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸುಬ್ರಹ್ಮಣ್ಯ, ಭಾಗಮಂಡಲ, ಮಂಡಗದ್ದೆ ಸೇರಿದಂತೆ ಹಲವೆಡೆ ರಸ್ತೆ ಸಂಚಾರ ಕಡಿತಗೊಂಡಿದೆ.
ಭಾಗಮಂಡಲ ಪ್ರವೇಶಕ್ಕೆ ನಿಷೇಧ: ತಲಕಾವೇರಿಗೆ ತೆರಳುವ ರಸ್ತೆಯ ಅಕ್ಕಪಕ್ಕದಲ್ಲಿರುವ ಬೃಹದಾಕಾರದ ಕಲ್ಲುಬಂಡೆಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಭಾಗಮಂಡಲ ಪ್ರವೇಶಕ್ಕೆ 15 ದಿನ ಕೊಡಗು ಜಿಲ್ಲಾಡಳಿತ ನಿಷೇಧ ಹೇರಿದೆ.

ಅಪಾಯದ ಮಟ್ಟದಲ್ಲಿ ತುಂಗಾನದಿ: ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ತುಂಗಾ ಜಲಾಶಯದಲ್ಲಿ 68,000 ಕ್ಯುಸೆಕ್‌ಗೆ ಒಳಹರಿವು ಇದೆ. ಜಲಾಶಯದ ಎಲ್ಲ ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡಲಾಗಿದೆ. ಇದರಿಂದಾಗಿ ಮಂಡಗದ್ದೆ ಪಕ್ಷಿಧಾಮಕ್ಕೂ ನೀರು ನುಗ್ಗಿದೆ.
ಮುಂದುವರಿದ ಕಡಲ್ಕೊರೆತ: ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಪಡುಬಿದ್ರಿಯ ಎರ್ಮಾಳ್‌ನಲ್ಲಿ ಕಡಲ್ಕೊರೆತ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಸೋಮವಾರ ಬೆಳಿಗ್ಗೆ ನೇತ್ರಾವತಿ ನದಿಗೆ ಬಿದ್ದು ಸ್ಥಳೀಯ ನಿವಾಸಿ ಶೇಖರ ಪೂಜಾರಿ (45) ಕೊಚ್ಚಿ ಹೋಗಿದ್ದಾರೆ.
ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ.
| ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? | ||||
| ಜಲಾಶಯ | ಗರಿಷ್ಠ ಮಟ್ಟ | ಇಂದಿನ ನೀರಿನ ಮಟ್ಟ | ||
| ಲಿಂಗನಮಕ್ಕಿ | 1819 | 1754.50 | ||
| ಭದ್ರಾ | 186 | 144 | ||
| ಹಾರಂಗಿ | 2,859 | 2841.66 | ||
| ಕೆಆರ್‌ಎಸ್ | 124.8 | 84.92 | ||
| ಹೇಮಾವತಿ | 2922 | 2879.30 | ||
| ಕಬಿನಿ | 2284 | 2274.80 | ||
| ಸೂಪಾ(ಮೀ) | 564 | 523.63 | ||
| ಮಾಣಿ | 594 | 572.90 | ||
| ಮಲಪ್ರಭಾ | 2079.5 | 2034.80 | ||
| ಘಟಪ್ರಭಾ | 2175 | 2069.71 | ||
| ಆಲಮಟ್ಟಿ (ಮೀ) | 519.60 | 507.31 | ||
*ನೀರಿನ ಮಟ್ಟ ಅಡಿಗಳಲ್ಲಿ *ಒಳ ಹರಿವು ,ಹೊರಹರಿವು ಕ್ಯೂಸೆಕ್ ಲೆಕ್ಕದಲ್ಲಿ











Click it and Unblock the Notifications