ಜಾತಿ ಗಣತಿ ಕಿತ್ತಾಟ: ಮುಸ್ಲಿಮರು ನಂಬರ್ 1 ಜಾತಿ ಎಂಬ ಅಂಕಿ- ಸಂಖ್ಯೆಗೆ ಸಿದ್ದರಾಮಯ್ಯ ಏನಂದ್ರು?
ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ ಸದ್ಯ ಜಾತಿ ಗಣತಿ ಕಿತ್ತಾಟ ಜೋರಾಗಿದೆ. ಜಾತಿ ಗಣತಿಗೆ ಸಂಬಂಧಿಸಿಂತೆ ಅಂಕಿ- ಸಂಖ್ಯೆಗಳು ಹರಿದಾಡುತ್ತಿದ್ದು, ಮುಸ್ಲಿಮರು ಸಂಖ್ಯೆಯನ್ನು ನಂಬರ್ 1 ಎಂದು ಇದು ಹೇಳುತ್ತಿವೆ. ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಮಯ್ಯ ಅವರು ಪ್ರತಿಕ್ರಿಯಿಸಿದ್ದು, ಜಾತಿ ಗಣತಿ ಕುರಿತು ವಿಶೇಷ ಕ್ಯಾಬಿನೆಟ್ ಸಭೆಯ ಬಳಿಕಷ್ಟೇ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ. ಜಾತಿ ಗಣತಿ ವರದಿಯನ್ನು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗಿದೆ. ವರದಿಯ ಪ್ರತಿಯನ್ನು ಎಲ್ಲಾ ಸಚಿವರಿಗೆ ನೀಡಲಾಗಿದೆ ಹಾಗೂ ಇದನ್ನು ಓದಿಕೊಂಡು ಬರಲು ಹೇಳಲಾಗಿದೆ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ: ಬಿ. ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಪೂರ್ವ ದ್ವಾರದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 17 ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಜಾತಿ ಗಣತಿ ವಿಚಾರವಾಗಿ ಮಾತ್ರ ಚರ್ಚೆ ಆಗಲಿದೆ. ಸಭೆಯ ಬಳಿಕ ಜಾತಿ ಗಣತಿ ವಿಚಾರವಾಗಿ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಸರ್ಕಾರ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರ ಅನುಸರಿಸುವ ಪ್ರಯತ್ನ ಮಾಡುತ್ತಿದ್ದು, ಅವರು ಬಯಸಿದಂತ ಸಮಾಜವನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಮ್ಮ ಸರ್ಕಾರವತ್ಯಂತ ಗೌರವ, ನಮ್ರತೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸುತ್ತಿದೆ. ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರದೇ ಸಮಾಜದಲ್ಲಿ ಶೋಷಿತರು, ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಅನ್ಯಾಯದಿಂದ ಮುಕ್ತಿ ಪಡೆಯಬೇಕೆಂದು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು.
ಮಹಾನ್ ಮೇಧಾವಿಯಾಗಿದ್ದ ಅಂಬೇಡ್ಕರ್, ಅವರ ಸ್ವಾರ್ಥಕ್ಕಾಗಿ ಓದಿಕೊಳ್ಳದೆ ಶೋಷಿತರ, ಅಸ್ಪೃಶ್ಯತೆಯಿಂದ ನರಳುತ್ತಿರುವವ ಜನರಿಗೆ ವಿಮೋಚನೆ ನೀಡಲೆಂದೇ ಜ್ಞಾನಾರ್ಜನೆ ಮಾಡಿಕೊಂಡಿದ್ದರು. ದೇಶದ ಕೆಲವೇ ಮೇಧಾವಿಗಳಲ್ಲಿ ಅವರೂ ಒಬ್ಬರು. ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ. ಎಲ್ಲರೂ ಮನುಷ್ಯರಾಗಿ ಬದುಕಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರಕಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಬೇಕು. ಹಾಗಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಅಸ್ಪೃಶ್ಯತೆ ನಾಶವಾಗಬೇಕು ಎಂದು ಅಂಬೇಡ್ಕರ್ ಶ್ರಮಿಸಿದ್ದರು ಎಂದರು.
ಇತ್ತೀಚೆಗೆ ಕೆಲವರು ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ತಮಗೆ ಸೇರಿದವರೆಂದು(own) ಬಿಂಬಿಸಲು ಪ್ರಾರಂಭಿಸಿದ್ದಾರೆ. ಮಹಾತ್ಮಾ ಗಾಂಧಿಯವರನ್ನು ಕೊಂದವರು, ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ ಮನುವಾದಿಗಳೇ ಇಂದು ಅವರನ್ನು ತಮ್ಮ ಸ್ವಂತ ಎನ್ನಲು ಪ್ರಾರಂಭಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ ನಾಲ್ಕೈದು ದಿನಗಳಲ್ಲೇ 'ದಿ ಆರ್ಗನೈಜರ್' ಪತ್ರಿಕೆಯಲ್ಲಿ ವಿರೋಧ ಮಾಡಿ ಬರೆದಿದ್ದರು. ಈಗ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತ್ತು ಎಂದು ಮಾತನಾಡುತ್ತಾರೆ.
ಅಂಬೇಡ್ಕರ್ ಅವರೇ ನನ್ನನ್ನು ಸೋಲಿಸಿದವರು ಸಾವರ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಎಸ್.ಎ ಡಾಂಗೆ ಎಂದು ಪತ್ರ ಬರೆದಿದ್ದರು. ಬಿಜೆಪಿ ಸ್ವಾರ್ಥಕ್ಕಾಗಿ ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನು ತಮ್ಮದೇ ಸ್ವಂತ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ಅವರು 'ನಾನು ಹಿಂದೂ ಆಗಿ ಹುಟ್ಟಿದೆ ಆದರೆ ಹಿಂದೂವಾಗಿ ಸಾಯಲಾರೆ' ಎಂದು ಹೇಳಿದ್ದರು. ಹಿಂದೂ ಧರ್ಮ ತ್ಯಜಿಸಿ ಭೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಿಸಿ, ಅದು ಸಾಧ್ಯವಾಗುವುದಿಲ್ಲ ಎಂದು ಅರಿವಾದ ನಂತರ ಹಿಂದೂ ಧರ್ಮವನ್ನು ತ್ಯಜಿಸಿ, ಮಾನವೀಯತೆ ಮತ್ತು ಸಮಾನತೆ ಇದ್ದ ಭೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು.
ಬಿಜೆಪಿಯವರು ಜವಾಹಾರ್ ನೆಹರೂ ಅವರನ್ನು ವಿರೋಧಿಸುತ್ತಾರೆ. ಅಂಬೇಡ್ಕರ್ ಅವರನ್ನು ನೆಹರೂ ವಿರೋಧಿಸಲಿಲ್ಲ. ಹಾಗಿದ್ದರೆ, ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಲು ಆಯ್ಕೆ ಮಾಡುತ್ತಿರಲಿಲ್ಲ. ಹಿಂದೂ ಕೋಡ್ ಬಿಲ್ ತಂದಾಗ ನೆಹರೂ ಅದರ ಪರವಾಗಿಯೇ ಇದ್ದರು. ನಮ್ಮಲ್ಲಿರುವ ಕೆಲವು ಶಕ್ತಿಗಳು ನೆಹರೂ ಅವರು ಅದನ್ನು ಜಾರಿ ಮಾಡಲು ಬಿಡಲಿಲ್ಲ. ಆದರೆ ಹಿಂದೂ ಕೋಡ್ ಬಿಲ್ ನಲ್ಲಿರುವ ಅಂಶಗಳನ್ನು ನೆಹರೂ ಅವರು ಅವರ ಅಧಿಕಾರದ ಅವಧಿಯಲ್ಲಿ ಜಾರಿ ಮಾಡುವ ಪ್ರಯತ್ನ ಮಾಡಿದ್ದರು ಎಂದರು.












Click it and Unblock the Notifications