ಜಾತಿ ಗಣತಿಯ ಏ.30ರ ಗಡುವು ವಿಸ್ತರಣೆಯಿಲ್ಲ
ಬೆಂಗಳೂರು, ಏ. 23 : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೆನ್ಸಿಲ್‍ನಲ್ಲಿ ಮಾಹಿತಿ ದಾಖಲಿಸಿಕೊಳ್ಳದಂತೆ ಕಟ್ಟಪ್ಪಣೆ ಮಾಡಿದರು. ಸಮೀಕ್ಷೆಯಲ್ಲಿ ತಪ್ಪು ನುಸುಳಿದರೆ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಸಿದರು. ಗಣತಿಗೆ ವಿಧಿಸಿರುವ ಏ.30ರ ಗಡುವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಮಧ್ಯಾಹ್ನ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು, ಮನೆ ಮನೆ ಸಮೀಕ್ಷಾ ಸಂದರ್ಭದಲ್ಲಿ ಗಣತಿದಾರರು ಸಂಗ್ರಹಿಸಿದ ಮಾಹಿತಿಯನ್ನು ಆ ಮನೆಯವರ ಸಮ್ಮುಖದಲ್ಲಿಯೇ ಲೇಖನಿಯಲ್ಲಿಯೇ ದಾಖಲಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. [ಸಿದ್ದರಾಮಯ್ಯ ಮನೆಯಲ್ಲಿ ಗಣತಿ, ಚಿತ್ರಗಳು]

ಸಮೀಕ್ಷೆಯ ಸಂದರ್ಭದಲ್ಲಿ ಗಣತಿದಾರರು ಪೆನ್ ಬದಲಾಗಿ ಪೆನ್ಸಿಲ್‍ನಲ್ಲಿ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದಾರೆ. ಸಮೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳನ್ನು ಕೇಳದೆಯೇ ತೆರಳುತ್ತಿದ್ದಾರೆ ಎಂಬ ದೂರುಗಳಿವೆ. ಜಿಲ್ಲಾಧಿಕಾರಿಗಳೂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು. [ಜಾತಿ ಗಣತಿ: ಯಾವ ಜಾತಿಗೆ ಯಾವ ಕಾಲಂ]
ಮನೆಯವರಿಂದ ನಿಖರ ಮಾಹಿತಿ ಪಡೆದು ಆ ಮನೆಯವರ ಗಮನಕ್ಕೆ ತಂದೇ ಜಾತಿ ಹಾಗೂ ಉಪ ಜಾತಿಗಳ ಸಂಕೇತಗಳನ್ನು ನಮೂದಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಗದಿತ ನಮೂನೆಯ ಬದಲಿಗೆ ಜೆರಾಕ್ಸ್ ಪ್ರತಿಗಳನ್ನು ಬಳಸುವಂತಿಲ್ಲ. ಎಂದರು. [ಜಾತಿ ಗಣತಿ : ಏಕೆ, ಏನು, ಇದೆಲ್ಲಾ ಬೇಕೆ?]

ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡುವುದರ ಜೊತೆಗೆ ಕ್ಷೇತ್ರಮಟ್ಟದಲ್ಲಿ ಪ್ರವಾಸ ತೆರಳಿ ಪರಿಶೀಲನೆ ನಡೆಸಬೇಕು. ಸಮೀಕ್ಷೆಯಲ್ಲಿ ಸಂಗ್ರಹಿಸುವ ಮಾಹಿತಿಗಳಲ್ಲಿ ತಪ್ಪುಗಳು ನುಸುಳಿದರೆ ಅದಕ್ಕೆ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಅನ್ಬು ಕುಮಾರ್ ಮುಂತಾದವು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications