ಸಂಪುಟ ವಿಸ್ತರಣೆ : ದೆಹಲಿಗೆ ಹೊರಟ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ನವೆಂಬರ್ 09 : 5 ಕ್ಷೇತ್ರಗಳ ಉಪ ಚುನಾವಣೆ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ವಿಸ್ತರಣೆಯತ್ತ ಗಮನಹರಿಸಿದ್ದಾರೆ. ಜೆಡಿಎಸ್‌ನಿಂದ ಇಬ್ಬರು ಶಾಸಕರು ಸಂಪುಟ ಸೇರುವ ನಿರೀಕ್ಷೆ ಇದೆ.
ಉಪ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಜಯಗಳಿದೆ. ಚುನಾವಣೆ ಫಲಿತಾಂಶದ ಬಳಿಕ ಹಲವು ದಿನದಿಂದ ಬೇಡಿಕೆ ಇದ್ದ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ 7 ಸ್ಥಾನಗಳು ಖಾಲಿ ಇದ್ದವು. ಪ್ರಾಥಮಿಕ ಶಿಕ್ಷಣ ಸಚಿವ ಬಿಎಸ್ಪಿಯ ಎನ್.ಮಹೇಶ್ ರಾಜೀನಾಮೆಯಿಂದ ಮತ್ತೊಂದು ಸ್ಥಾನ ಖಾಲಿ ಆಗಿದೆ. ಈಗ 8 ಸ್ಥಾನ ಖಾಲಿ ಇದ್ದು ಜೆಡಿಎಸ್‌ಗೆ 2 ಸ್ಥಾನ ಸಿಗಲಿದೆ.
ಜೆಡಿಎಸ್ ಪಕ್ಷದಲ್ಲಿ ಶಾಸಕರನ್ನು ಸೇರಿಸಿಕೊಳ್ಳುವುದ ಸುಲಭದ ಮಾತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಸಿಗುವ 6 ಸಚಿವ ಸ್ಥಾನಗಳನ್ನು ಪಡೆಯಲು 12ಕ್ಕೂ ಅಧಿಕ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಅದರಲ್ಲೂ ಕೆಲವು ಹಿರಿಯ ಶಾಸಕರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ದೇವೇಗೌಡರ ಒಪ್ಪಿಗೆ ಸಿಕ್ಕಿದೆ
ಸಚಿವ ಸಂಪುಟ ವಿಸ್ತರಣೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಒಪ್ಪಿಗೆ ನೀಡಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ದೇವೇಗೌಡರನ್ನು ಭೇಟಿ ಮಾಡಿದ್ದರು. ಅಗ ಸಂಪುಟ ವಿಸ್ತರಣೆ ಮಾಡಲು ಅವರು ಒಪ್ಪಿಗೆ ಕೊಟ್ಟಿದದಾರೆ.

ಮುಂದಿನ ವಾರ ದೆಹಲಿಗೆ
ಎಚ್.ಡಿ.ಕುಮಾರಸ್ವಾಮಿ ಅವರು ಮೂರು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ. ನವೆಂಬರ್ 11ರ ಬಳಿಕ ಅವರು ದೆಹಲಿಗೆ ತೆರಳಲಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ. ಬಳಿಕ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿಗಳ ನೇಮಕಾತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸಿದ್ದರಾಮಯ್ಯ ಭೇಟಿ
ಕಾಂಗ್ರೆಸ್ ಪಕ್ಷದಲ್ಲಿಯೂ ಸಹ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ಅವರು ದೆಹಲಿಗೆ ಭೇಟಿ ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಸಹ ದೆಹಲಿಗೆ ಭೇಟಿ ನೀಡಲಿದ್ದಾರೆ. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹ ದೆಹಲಿಗೆ ತೆರಳಲಿದ್ದಾರೆ.

ಹೊರಟ್ಟಿ, ಎಚ್.ಕೆ.ಕುಮಾರಸ್ವಾಮಿ
ಜೆಡಿಎಸ್ ಪಕ್ಷಕ್ಕೆ 2 ಸಚಿವ ಸ್ಥಾನಗಳು ಸಿಗಲಿವೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಸಂಪುಟ ಸೇರುವ ನಿರೀಕ್ಷೆ ಇದೆ.












Click it and Unblock the Notifications