Karnataka Government: ವಿಶ್ವಬ್ಯಾಂಕ್ ನೆರವಿನಿಂದ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಂಪುಟ ಅಸ್ತು
ಬೆಂಗಳೂರು, ಡಿಸೆಂಬರ್ 07: ಜುಲೈ 2025 ರಿಂದ ಜೂನ್ ರವರೆಗೆ 4 ವರ್ಷಗಳಲ್ಲಿ ರೂ.2500.0 ಕೋಟಿಗಳ (ರೂ.1750 ಕೋಟಿ ವಿಶ್ವ ಬ್ಯಾಂಕ್‍ನಿಂದ ಮತ್ತು ರೂ.750.0 ಕೋಟಿ ರಾಜ್ಯ ಸರ್ಕಾರದಿಂದ) ಬಾಹ್ಯ ನಿಧಿ ಸಹಯೋಗದೊಂದಿಗೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಬಾಹ್ಯ ನಿಧಿಯ ಅನುಮೋದನೆಗಾಗಿ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ ಪ್ರಾಥಮಿಕ ಯೋಜನೆಯ ವರದಿಯನ್ನು ವಿಶ್ವಬ್ಯಾಂಕ್‍ಗೆ ಸಲ್ಲಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ್ದು, ಗುಣಮಟ್ಟದ ಶಿಕ್ಷಣ ನೀಡುವುದು ಇಲಾಖೆಯ ಪ್ರಾಥಮಿಕ ಗುರಿಯಾಗಿದ್ದು, ಉನ್ನತ ಶಿಕ್ಷಣದ ಮಟ್ಟವನ್ನು ಸುಧಾರಿಸಲು ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳು ಒದಗಿಸುವ ಸಂಪನ್ಮೂಲಗಳನ್ನು ಒದಗಿಸುವುದು ಗುರಿಯಾಗಿದೆ ಎಂದು ಸಂಪುಟ ತಿಳಿಸಿದೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (1ನೇ ತಿದ್ದುಪಡಿ) ನಿಯಮಗಳು 2024 (ಅನುಬಂಧ-3) ಕರಡನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗುವವರಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲು ಮತ್ತು ಕರಡನ್ನು ನಿಯಮಗಳಿಗೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗದಿದ್ದಲ್ಲಿ ಅಥವಾ ಸ್ವೀಕೃತವಾದ ಆಕ್ಷೇಪಣೆ / ಸಲಹೆಗಳನ್ನು ಪರಿಗಣಿಸಿ ಕರಡು ನಿಯಮಗಳಲ್ಲಿ ಯಾವುದೇ ಪ್ರಮುಖ ತಿದ್ದುಪಡಿಗಳನ್ನು ಮಾಡದಿದ್ದಲ್ಲಿ, ಸದರಿ ಕರಡು ನಿಯಮಗಳನ್ನು ಪುನ: ಸಚಿವ ಸಂಪುಟದ ಮುಂದೆ ಮಂಡಿಸದೇ ಅಂತಿಮಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ರಾಜ್ಯದಲ್ಲಿನ ಒಟ್ಟು ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ದ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆ ಪ್ರಮಾಣವು ತುಂಬಾ ಕಡಿಮೆಯಿರುವುದರಿಂದ ಅಲ್ಪಸಂಖ್ಯಾತರ ಸಮುದಾಯದವರು ನಡೆಸುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತರ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಲಿ ಜಾರಿಯಲ್ಲಿರುವ ನಿಯಮ ಮತ್ತು ಆದೇಶಗಳಲ್ಲಿ ನಿಗಧಿಪಡಿಸಿರುವ ಶೇಕಡಾವಾರು ವಿದ್ಯಾರ್ಥಿಗಳು ಲಭ್ಯವಾಗುವುದು ಕಷ್ಟಕರವಾಗಿರುವುದರಿಂದ ಈ ನಿಯಮಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿತ್ತು.
ರಾಜ್ಯ ಸರ್ಕಾರವು ಉಪಖನಿಜಗಳ ಮೇಲಿನ ರಾಜಧನವನ್ನು 3 ವರ್ಷಗಳ ಅವಧಿಯಲ್ಲಿ ಒಂದು ಬಾರಿ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪರಿಷ್ಕರಣೆಯಿಂದ ಒಟ್ಟಾರೆಯಾಗಿ ರೂ.311.55 ಕೋಟಿಗಳ ಹೆಚ್ಚುವರಿ ಮೊತ್ತ ಸಂಗ್ರಹಣೆ ಅಂದಾಜಿಸಲಾಗಿದೆ. ಕಟ್ಟಡ ಕಲ್ಲು (Mining Stone - Miner minerals) ಉಪಖನಿಜದ ರಾಜಧನವನ್ನು ಪ್ರತಿ ಮೆಟ್ರಿಕ್ ಟನ್‍ಗೆ ರೂ.80.00 ರಂತೆ ನಿಗದಿಪಡಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ವಿಧಿಸಿರುವ ದಂಡವನ್ನು One Time Settlement (OTS) ಮೂಲಕ ಅನುಷ್ಠಾನಗೊಳಿಸುವ ಕುರಿತು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳಲ್ಲಿನ ಅಂಶ (ಬಿ) ರಲ್ಲಿನ ಮಾರ್ಚ್ 2024ರ ಅಂತ್ಯದೊಳಗೆ ಎಂಬುದನ್ನು ಹೊರತುಪಡಿಸಿ, ಶಿಫಾರಸ್ಸುಗಳನ್ನು ಪರಿಗಣಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪಖನಿಜ ತೆಗೆದು ರಾಜಧನ ಪಾವತಿಸದೇ ಸಾಗಾಣಿಕೆ ಮಾಡಿರುವ ಸಂಬಂಧ ಗಣಿ ಇಲಾಖೆ ವಿಧಿಸಿರುವ ದಂಡವನ್ನು One Time Settlement (OTS) ಮೂಲಕ ಸಂಗ್ರಹಿಸಲು ಪ್ರಸ್ತಾಪಿಸಲಾಗಿತ್ತು.
2018-19ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ 2438 ಕಟ್ಟಡ ಕಲ್ಲು ಗಣಿ ಗುತ್ತಿಗೆಗಳನ್ನು ಡ್ರೋನ್ ಬಳಸಿ ಸರ್ವೇ ಮಾಡಲಾಗಿದ್ದು, ಈ ಸರ್ವೆ ಮೂಲಕ ಖನಿಜ ಪರವಾನಗಿ ಪಡೆಯದೇ ಸಾಗಾಣಿಕೆ ಮಾಡಿದ ಪ್ರಮಾಣ ಮತ್ತು ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿರುವ ಪ್ರಮಾಣವನ್ನು ಅಂದಾಜಿಸಿ ಪ್ರತಿ ಮೆಟ್ರಿಕ್ ಟನ್‍ಗೆ ರೂ.60.00 ರಾಜಧನದಂತೆ ರೂ.1221.00 ಕೋಟಿಗಳ 5 ಪಟ್ಟು ದಂಡವಿಧಿಸಿ, ರೂ. 6105.98 ಕೋಟಿಗಳ ದಂಡಗಳ ವಸೂಲಿ ಮಾಡಲು ನೋಟಿಸ್ ನೀಡಲಾಗಿದೆ. 2023-24ರಲ್ಲಿ ಮತ್ತೊಂದು ಸಲ ಗುತ್ತಿಗೆದಾರರುಗಳ ಸಮ್ಮುಖದಲ್ಲಿ ನ್ಯಾಯಾಲಯದ ಆದೇಶದಂತೆ ಸರ್ವೆ ಕೈಗೊಳ್ಳಲಾಗಿದೆ.
2018-19ನೇ ಸಾಲಿನ ಮತ್ತು 2023-24ನೇ ಸಾಲಿನ ಸರ್ವೆಯಲ್ಲಿ ಗುತ್ತಿಗೆ ಪ್ರದೇಶದ ಒತ್ತುವರಿ ಮಾಡಿ ತೆಗೆದಿರುವ ಪ್ರಮಾಣ ಹೆಚ್ಚಾಗಿದೆ. ಇನ್ನೂ 20 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಬಾಕಿಯಿದೆ. 11 ಜಿಲ್ಲೆಗಳ ಡಿಜಿಪಿಎಸ್ Differential Global Positioning System) ಸರ್ವೆ ಕಾರ್ಯ ಬರಬೇಕಿದೆ. ಇದರಿಂದಾಗಿ ದಂಡ ವಸೂಲಿಯ ಪ್ರಮಾಣವು ಹೆಚ್ಚಾಗಬಹುದೆಂದು ನಿರೀಕ್ಷಿಸಿದೆ. ವೈಜ್ಞಾನಿಕ ಸಮಿಕ್ಷಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಚಿವ ಸಂಪುಟ ಸಲಹೆ ನೀಡಿದೆ.












Click it and Unblock the Notifications