BY Vijayendra: ಯತ್ನಾಳ್ ಗೆ ಬಂದಿರುವುದು ನೋಟಿಸ್ ನಕಲಿಯೇ: ವಿಜಯೇಂದ್ರ ಏನಂದ್ರು?
ಬೆಂಗಳೂರು, ಡಿಸೆಂಬರ್ 03: ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಶಿಸ್ತು ಸಮಿತಿ ನೋಟಿಸ್ ಬೆನ್ನಲ್ಲೇ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಬಿಜೆಪಿ ಪಾಳಯದಲ್ಲಿ ನಡೆಯುತ್ತಿದ್ದು, ಈ ನೋಟಿಸ್ ನಕಲಿಯೋ, ಅಸಲಿಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಕಲಿ ನೋಟಿಸ್ ಎಂಬ ಹೇಳಿಕೆ ಕುರಿತು ಪದೇಪದೇ ಮಾತನಾಡುವುದಿಲ್ಲ. ನೋಟಿಸ್ ಅಸಲಿಯೇ ನಕಲಿಯೇ ಎಂಬುದು ಬರುವ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ಇನ್ನೂ ವಕ್ಫ್ ವಿಚಾರದಲ್ಲಿ ಫ್ರೀಡಂ ಪಾರ್ಕಿನಲ್ಲಿ ಮೊನ್ನೆ ನಡೆದ ಹೋರಾಟದಲ್ಲಿ ಸ್ವಾಮೀಜಿಗಳು ರಾಜ್ಯ ಸರಕಾರದ ನಡವಳಿಕೆ ವಿರುದ್ಧ ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಬಗ್ಗೆ ಸ್ವಾಮೀಜಿಗಳು ಕ್ಷಮೆಯನ್ನೂ ಕೇಳಿದ್ದಾರೆ. ಇದರ ನಡುವೆ ರಾಜ್ಯ ಸರಕಾರವು ಸ್ವಾಮೀಜಿಗಳ ವಿರುದ್ಧ ಎಫ್‍ಐಆರ್ ದಾಖಲು ಮಾಡಿ ಅವರಿಗೆ ತನಿಖೆಗೆ ಬರಲು ಒತ್ತಾಯಿಸಿದೆ ಎಂದು ಹೇಳಿದರು.
ಸ್ವಾಮೀಜಿಗಳು ಸಹಜವಾಗಿ ಆಕ್ರೋಶದಿಂದ ಮಾತನಾಡಿದ್ದಾರೆ. ಸರಕಾರವು ದೇಶದ್ರೋಹಿಗಳು, ದೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಕೇಸ್‍ಗಳನ್ನು ಹಿಂಪಡೆಯುತ್ತಿದೆ. ಮತ್ತೊಂದೆಡೆ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಖಂಡಿತ ಸರಿಯಲ್ಲ. ಸ್ವಾಮೀಜಿಗಳ ಪರ ಇದ್ದೇವೆ ಎಂದು ತಿಳಿಸಿ, ಆಶೀರ್ವಾದ ಪಡೆದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಸ್ವಾಮೀಜಿಗಳು ಆರೋಗ್ಯ ಸರಿ ಇಲ್ಲದಿರುವ ಕುರಿತು ತಿಳಿಸಿದ್ದಲ್ಲದೆ ಅಗತ್ಯ ಉತ್ತರವನ್ನು ಪತ್ರ ಮೂಲಕ ನೀಡಿದ್ದರು. ಆದರೂ ಕೂಡ, ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು. ರಾಜ್ಯ ಸರಕಾರವು ವಕ್ಫ್ ವಿಷಯ ಮುಂದಿಟ್ಟು ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಮಠಮಾನ್ಯಗಳ ಜಮೀನು ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳ ಮೂಲಕ ನೋಟಿಸ್ ಕೊಡುತ್ತಿದೆ ಎಂದು ಟೀಕಿಸಿದರು. ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆದಿದ್ದು, ರೈತರು ಬೀದಿಗೆ ಇಳಿದಿದ್ದಾರೆ ಎಂದು ತಿಳಿಸಿದರು.
ಈ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ಕೆಲವು ಮುಖಂಡರು ದೊಡ್ಡ ಸಭೆ ಮಾಡಿ ನಾವು ಸುಪ್ರೀಂ ಕೋರ್ಟಿನ ಮುಂದೆ ಹೋಗಿ ಭಿಕ್ಷೆ ಬೇಡುವುದಿಲ್ಲ; ನಿಮಗೆ ಸಂಸತ್ ಇದ್ದರೆ ನಮಗೆ ರಸ್ತೆಗಳಿವೆ. ನಾವೂ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ ನಿದರ್ಶನವಿದೆ. ಇದಕ್ಕೆ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಕೇಳಿದರು.
ಕರಿಯ ಎಂದವರ ಬಗ್ಗೆ ಎಫ್‍ಐಆರ್ ಆಗಿದೆಯೇ? ಎಂದು ಕೇಳಿದರು. ವಕ್ಫ್ ವಿಚಾರದಲ್ಲಿ ರೈತರಿಗೆ ಆಗಿರುವ ಆಕ್ರೋಶದ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ಅವತ್ತು ಒಂದು ಮಾತನ್ನಾಡಿದ್ದರು. ಅದಕ್ಕೆ ಅವರು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿದ್ದಾರೆ. ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ ಮೇಲೆ ಇನ್ನೇನಿದೆ ಎಂದು ಪ್ರಶ್ನಿಸಿದರು.
ನಿಮ್ಮ ಪಕ್ಕದಲ್ಲೇ ನಿಂತು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರನ್ನು ರಕ್ಷಿಸುತ್ತೀರಿ. ಮಾಡಿದ ತಪ್ಪಿಗೆ ಆಕ್ರೋಶ ವ್ಯಕ್ತವಾದಾಗ, ಕ್ಷಮೆ ಕೇಳಿದ ಮೇಲೂ ಕ್ರಮ ಜರುಗಿಸುವುದಾದರೆ ದ್ವಿಮುಖ ನೀತಿ ನಿಮ್ಮದಲ್ಲವೇ? ಓಲೈಕೆ ನೀತಿ ಮೂಲಕ ಹಿಂದೂಗಳು, ರೈತರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಬಿಜೆಪಿ ಸ್ವಾಮೀಜಿಗಳ ಪರ ನಿಲ್ಲಲಿದೆ. ಸರಕಾರದ ಅನ್ಯಾಯಗಳ ವಿಷಯವನ್ನು ಜನರಿಗೆ ಎತ್ತಿ ತೋರಿಸುವ ಕೆಲಸವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಮಾತನಾಡಿ, ಸ್ವಾಮೀಜಿಗಳು ಕ್ಷಮೆ ಕೇಳಿದರೂ ಕೇಸು ದಾಖಲಿಸಿದ್ದಾರೆ. ದೇಶವಿರೋಧಿ, ಗಲಭೆ ಎಬ್ಬಿಸುವ ಹಾಗೂ ಸೌಹಾರ್ದತೆ ಹಾಳು ಮಾಡುವ ರೀತಿಯಲ್ಲಿ ಹೇಳಿಕೆ ಕೊಟ್ಟ ಇತರರ ಬಗ್ಗೆ ಸರಕಾರ ಯಾಕೆ ಕೇಸು ಹಾಕಿಲ್ಲ? ಅವರ ಮೇಲೂ ಪ್ರಕರಣ ದಾಖಲಿಸಬೇಕಿತ್ತಲ್ಲವೇ? ಕಾನೂನು ಬೇರೆ ಬೇರೆ ಇದೆಯೇ ಎಂದು ಪ್ರಶ್ನಿಸಿದರು.
ಸ್ವಾಮೀಜಿಯವರಿಗೆ 80 ವರ್ಷವಾಗಿದ್ದು, ಅನಾರೋಗ್ಯದಿಂದಿದ್ದಾರೆ. ಬಹಳ ನೊಂದಿದ್ದಾರೆ. ದೇಶದ್ರೋಹಿಗಳಿಗೂ ಇದು ಅನ್ವಯ ಮಾಡಬೇಕಿತ್ತು ಎಂದು ತಿಳಿಸಿದರು. ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಎಂದು ಸ್ವಾಮೀಜಿ ತಿಳಿಸಿದ್ದಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಹೇಳಿದರು.












Click it and Unblock the Notifications