Government Employee: ಸರ್ಕಾರಿ ನೌಕರರ ರಜೆ, ವರ್ಗಾವಣೆ ನಿಯಮ ಬದಲು
ಬೆಂಗಳೂರು, ಅಕ್ಟೋಬರ್ 19: ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಅಕ್ಟೋಬರ್ 18ರ ಶುಕ್ರವಾರ ಉಪ ಚುನಾವಣೆ ಅಧಿಸೂಚನೆ ಜಾರಿಯಾಗಿದ್ದು, ನವೆಂಬರ್ 13ರಂದು ಮತದಾನ ಮತ್ತು ನವೆಂಬರ್ 23ರಂದು ಮತಎಣಿಕೆ ನಡೆಯಲಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಕೆಲವು ಹೊಸ ನಿಯಮಗಳು ಜಾರಿಗೊಂಡಿವೆ.
ಚುನಾವಣಾ ಆಯೋಗ ಬಳ್ಳಾರಿ ಜಿಲ್ಲೆಯಸಂಡೂರು, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭೆ ಉಪಚುನಾವಣೆ-2024ರ ದಿನಾಂಕ ಘೋಷಣೆ ಮಾಡಿದೆ. ಮೂರು ವಿಧಾನಸಭಾ ಕ್ಷೇತ್ರದಲ್ಲಿ ತಕ್ಷಣದಿಂದಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಸರ್ಕಾರಿ ನೌಕರರ ರಜೆ ಮತ್ತು ವರ್ಗಾವಣೆ ನಿಯಮದಲ್ಲಿ ಕೆಲವು ಬದಲಾವಣೆಯಾಗಿದೆ. ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಈ ನಿಯಮ ಜಾರಿಯಲ್ಲಿ ಇರುತ್ತದೆ.

ವರ್ಗಾವಣೆ, ರಜೆ ನಿಯಮಗಳು: ಉಪ ಚುನಾವಣೆ ನಡೆಯುವ ಮೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಅಕ್ಟೋಬರ್ 18ರ ಶುಕ್ರವಾರ ಉಪ ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25ರ ಶುಕ್ರವಾರ ಕೊನೆಯ ದಿನವಾಗಿದೆ. ಅಕ್ಟೋಬರ್ 28ರ ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಅಕ್ಟೋಬರ್ 30ರ ಬುಧವಾರ ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 13ರ ಬುಧವಾರ ಮತದಾನ ನಡೆಯಲಿದೆ. ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದೆ. ನವೆಂಬರ್ 25ರ ಸೋಮವಾರ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಉಪ ಚುನಾವಣೆ ನಡೆಯುವ ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ನೌಕರರ ವರ್ಗಾವಣೆಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ಇಂತಹ ವರ್ಗಾವಣೆಗಳು ಚುನಾವಣಾ ಅಧಿಸೂಚನೆಕ್ಕಿಂತಲೂ ಪೂರ್ವದಲ್ಲಿ ಆಗಿದ್ದಲ್ಲಿ ಅವುಗಳನ್ನು ಉಪ-ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಅಮಾನತ್ತಿನಲ್ಲಿರಿಸಲಾಗಿದೆ. ಇಂತಹ ವರ್ಗಾವಣೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಲಾಗಿದೆ.
ತಾಲ್ಲೂಕಿನ ಹಾಗೂ ಎಲ್ಲಾ ಇಲಾಖಾ, ಕಚೇರಿ ಮುಖ್ಯಸ್ಥರಿಗೆ ರಜೆ ನೀಡುವುದನ್ನು ನಿರ್ಭಂಧಿಸಲಾಗಿದೆ. ಯಾವುದೇ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಇಲ್ಲದೇ ರಜೆ ಪಡೆಯುವಂತಿಲ್ಲ ಮತ್ತು ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.
2024ರ ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರ, ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿದ್ದವು. ಮೂವರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಈಗ ಉಪ ಚುನಾವಣೆ ನಡೆಯುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಹಾವೇರಿ-ಗದಗ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಸವರಾಜ ಬೊಮ್ಮಾಯಿ (ಶಿಗ್ಗಾವಿ), ಮಂಡ್ಯದಲ್ಲಿ ಗೆಲುವು ಸಾಧಿಸಿದ ಎಚ್. ಡಿ. ಕುಮಾರಸ್ವಾಮಿ (ಚನ್ನಪಟ್ಟಣ), ಬಳ್ಳಾರಿಯಲ್ಲಿ ಗೆಲುವು ಸಾಧಿಸಿದ ಇ. ತುಕಾರಾಮ್ (ಸಂಡೂರು) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.












Click it and Unblock the Notifications