ವಿಶ್ವಾಸಮತಕ್ಕೆ ಗೈರು: ಬಿಎಸ್‌ಪಿ ಶಾಸಕ ಮಹೇಶ್ ಪಕ್ಷದಿಂದ ಉಚ್ಛಾಟನೆ
ಬೆಂಗಳೂರು, ಜುಲೈ 23: ಇಂದು ನಡೆದ ವಿಶ್ವಾಸಮತ ಯಾಚನೆಗೆ ಗೈರಾದ ಬಿಎಸ್‌ಪಿ ಶಾಸಕ ಎನ್.ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಕೊಳ್ಳೆಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್.ಮಹೇಶ್ ಅವರಿಗೆ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಬಿಎಸ್‌ಪಿ ಹೈಕಮಾಂಡ್ ಸೂಚಿಸಿತ್ತು, ಆದರೆ ಅದನ್ನು ಉಲ್ಲಂಘಿಸಿ ಇಂದು ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಂಡಿರಲಿಲ್ಲ, ಹಾಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ವಿಶ್ವಾಸಮತ ಪ್ರಕ್ರಿಯೆ ಮುಗಿದ ಕೂಡಲೇ ಸ್ವತಃ ಮಾಯಾವತಿ ಅವರೇ ಈ ಬಗ್ಗೆ ಟ್ವೀಟ್ ಮಾಡಿದ್ದು, ಪಕ್ಷದ ಆದೇಶ ಇದ್ದರೂ ಸಹ ಉಲ್ಲಂಘನೆ ಮಾಡಿರುವ ಎನ್.ಮಹೇಶ್ ಅವರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಎನ್.ಮಹೇಶ್ ಅವರು ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಕೊಳ್ಳೆಗಾಲದಲ್ಲಿ ಚುನಾವಣೆ ಎದುರಿಸಿ ಗೆದ್ದಿದ್ದರು. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರೂ ಸಹ ಆಗಿದ್ದರು. ಆದರೆ ಆ ನಂತರ ಲೋಕಸಭೆ ಚುನಾವಣೆಗೆ ಸಮೀಪಿಸಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಮಾಯಾವತಿ ಅವರಿಂದ ಸೂಚನೆ ಬಂದಿಲ್ಲವೆಂದು ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾದಾಗ ಹೇಳಿದ್ದ ಎನ್.ಮಹೇಶ್ ಅವರು, ಮಾಯಾವತಿ ಅವರಿಂದ ಆದೇಶ ಬಂದ ನಂತರವೂ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ.
ಇಂದು ನಡೆದ ವಿಶ್ವಾಸಮತದಲ್ಲಿ ಕುಮಾರಸ್ವಾಮಿ ಸರ್ಕಾರದ ಪರವಾಗಿ 99 ಮತಗಳು ಬಂದಿದ್ದರೆ, ಸರ್ಕಾರಕ್ಕೆ ವಿರುದ್ಧವಾಗಿ 105 ಮತಗಳು ಬಂದಿದ್ದವು. 20 ಶಾಸಕರು ಇಂದು ಗೈರಾಗಿದ್ದರು, ಅವರಲ್ಲಿ ಎನ್.ಮಹೇಶ್ ಸಹ ಒಬ್ಬರಾಗಿದ್ದರು.












Click it and Unblock the Notifications