ಬೊಮ್ಮನಹಳ್ಳಿ ಬಿಜೆಪಿ ಶಾಸಕರಿಂದ ‘ಧರ್ಮಯಾತ್ರೆ’ ಆರಂಭ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಭೇಟಿ
ಹಿಂದೂಗಳ ಪವಿತ್ರ ಸ್ಥಳ ಎಂದು ಕರೆಯಲಾಗುವ 'ಧರ್ಮಸ್ಥಳ'ಕ್ಕೆ ಇದೀಗ ಸಾಲು, ಸಾಲಾಗಿ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಇಡೀ ಜಗತ್ತಿನ ಮೂಲೆ ಮೂಲೆಯಿಂದ ಲಕ್ಷ ಲಕ್ಷ ಭಕ್ತರು ಆಗಮಿಸುತ್ತಾರೆ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ದೇವಾಲಯಕ್ಕೆ. ಆದರೆ ಸುಖಾಸುಮ್ಮನೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರವನ್ನ ಕಿಡಿಗೇಡಿಗಳು ಮಾಡುತ್ತಿದ್ದಾರೆ ಅಂತಾ ಗಂಭೀರ ಆರೋಪ ಮಾಡಲಾಗಿತ್ತು. ಇದೇ ವಿಚಾರವಾಗಿ ಇದೀಗ ಸ್ಪಷ್ಟ ಚಿತ್ರಣವು ಸಿಕ್ಕಿದ್ದು, ಈ ಸಮಯದಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರಿಂದ 'ಧರ್ಮಯಾತ್ರೆ' ನಡೆಸಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆವರನ್ನ ಭೇಟಿ ಮಾಡಿ ಆಶೀರ್ವಾದ ಪಡೆಯಲಾಗಿದೆ.
ಶನಿವಾರ ಬೆಳಗ್ಗೆ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಿಂದ 'ಧರ್ಮಯಾತ್ರೆ' ಶುರು ಮಾಡಲಾಗಿತ್ತು, ಶಾಸಕ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಬೃಹತ್ ಮಟ್ಟದಲ್ಲಿ 'ಧರ್ಮಯಾತ್ರೆ' ಆರಂಭಿಸಲಾಗಿತ್ತು. ಹೀಗೆ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಶುರುವಾಗಿದ್ದ ಧರ್ಮಯಾತ್ರೆ ಹಲವಾರು ಊರುಗಳಲ್ಲಿ ಧರ್ಮಪ್ರಚಾರ ನಡೆಸಿ, ಅಂತಿಮವಾಗಿ ಧರ್ಮಸ್ಥಳ ತಲುಪಿತು. ನೂರಾರು ವಾಹನಗಳಲ್ಲಿ ಏಕಕಾಲಕ್ಕೆ ಧರ್ಮಯಾತ್ರೆ ಆರಂಭ ಮಾಡಲಾಗಿತ್ತು. ಇದೇ ಕಾರಣಕ್ಕೆ, ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಈ ಯಾತ್ರೆ ಇಡೀ ರಾಜ್ಯದ ಗಮನ ಸೆಳೆದಿತ್ತು.

'ಧರ್ಮಯಾತ್ರೆ'ಗೆ ಚಾಲನೆ ನೀಡಿದ ಶಾಸಕರು
'ಧರ್ಮಯಾತ್ರೆ' ಆರಂಭಕ್ಕೂ ಮುನ್ನ ವಿಶೇಷ ಪೂಜೆ ನೆರವೇರಿಸಲಾಯಿತು, ಅಂದಹಾಗೆ ಈ ವೇಳೆ ನೂರಾರು ಕಾರ್ಯಕರ್ತರು ಕೂಡ ಹಾಜರಿದ್ದರು. ಹಾಗೇ ಬೊಮ್ಮನಹಳ್ಳಿ ಶಾಸಕರಾದ ಶಾಸಕ ಸತೀಶ್ ರೆಡ್ಡಿ ಅವರು ವಿಶೇಷ ಪೂಜೆ ನೆರವೇರಿಸಿ, 'ಧರ್ಮಯಾತ್ರೆ'ಗೆ ಚಾಲನೆ ನೀಡಿದರು. ಭಕ್ತಿಯಲ್ಲಿ ಏಕತೆ, ಧರ್ಮದಲ್ಲಿ ಶ್ರದ್ಧೆ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಉತ್ತೇಜಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿರುವುದಾಗಿ ಆಯೋಜಕರು ಮಾಹಿತಿ ನೀಡಿದರು. ಭವ್ಯ ಉದ್ಘಾಟನೆ ನೆರವೇರಿಸಿ, ಭಕ್ತರ ಜೊತೆ ಧಾರ್ಮಿಕ ಯಾತ್ರೆಯನ್ನು ಪ್ರಾರಂಭಿಸಲಾಯಿತು.
ವೀರೇಂದ್ರ ಹೆಗ್ಗಡೆ ಅವರ ಭೇಟಿ
ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದ ಯಾತ್ರೆ, ಧರ್ಮಸ್ಥಳಕ್ಕೆ ತಲುಪಿತು. ಶ್ರೀಮಂಜುನಾಥ ಸ್ವಾಮಿ ದರ್ಶನದ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿ ಮಾಡಿದ ಬೊಮ್ಮನಹಳ್ಳಿ ಶಾಸಕರು ಮತ್ತು ಮಂಜುನಾಥ ಸ್ವಾಮಿಯ ಭಕ್ತರು ಆಶೀರ್ವಾದ ಪಡೆದರು. ಈ ಮೂಲಕ ಬೊಮ್ಮನಹಳ್ಳಿ ಕ್ಷೇತ್ರದಿಂದ ಕೈಗೊಂಡಿದ್ದ ಯಾತ್ರೆ ಇದೀಗ ಸಾಕಷ್ಟು ಗಮನ ಸೆಳೆದಿತ್ತು. ಹಾಗೇ, ನೂರಾರು ವಾಹನಗಳಲ್ಲಿ ಭಕ್ತರು ತೆರಳಿದ್ದ ಹಿನ್ನೆಲೆ ಸಾಕಷ್ಟು ಮುಂಜಾಗ್ರತಾ ಕ್ರಮದ ಜೊತೆಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಕೂಡ ಮಾಡಲಾಗಿತ್ತು.












Click it and Unblock the Notifications