ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ರೆಡ್ಡಿ
ಕನ್ನಡ ನಾಡಿಗೆ ಸಾವಿರಾರು ವರ್ಷಗಳ ಇತಿಹಾಸ ಇದ್ದು, ಕನ್ನಡ ನಾಡಿನ ಸಂಸ್ಕೃತಿ ಪ್ರಪಂಚಕ್ಕೇ ಗೊತ್ತು. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸತೀಶ್ ರೆಡ್ಡಿ ಅವರು, ಕನ್ನಡ ಭಾಷೆಯನ್ನ ಪ್ರತಿನಿತ್ಯವೂ ಬಳಸುತ್ತ ಬೆಳೆಸಬೇಕಾಗಿರುವುದು ಕನ್ನಡಿಗರಾದ ನಮ್ಮ ಕರ್ತವ್ಯ ಎಂದರು. ಅಲ್ಲದೆ ಆಧುನಿಕ ಕಾಲದಲ್ಲಿ ಕನ್ನಡದ ಅಭಿವೃದ್ಧಿ ಬಗ್ಗೆ ಹಲವು ಸಲಹೆ ನೀಡಿದರು.
ಕನ್ನಡ ಭಾಷೆಯ ಬೆಳವಣಿಗೆಗೆ ನೂರಾರು ಬರಹಗಾರರು ಕೊಡುಗೆ ನೀಡಿದ್ದಾರೆ, ಕನ್ನಡ ಭಾಷೆಯು ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಎಂಬುದೇ ನಮ್ಮೆಲ್ಲರಿಗೂ ಹಮ್ಮೆ ತರುವ ವಿಚಾರ. ನಾವು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಹೆಚ್ಚಾಗಿ ಕನ್ನಡ ಭಾಷೆ ಬಳಸುತ್ತಾ ಭಾಷೆಯ ಅಭಿವೃದ್ಧಿಗೆ ಕೊಡುಗೆ ನೀಡಬೇಕಾಗಿದೆ. ಆಧುನಿಕ ಕಾಲದಲ್ಲಿ ಕನ್ನಡ ಭಾಷೆಯ ಗತ್ತು ಪ್ರಪಂಚಕ್ಕೆ ಗೊತ್ತಿದೆ. ಹಾಗೇ ಕನ್ನಡ ಶಾಲೆಗಳನ್ನು ನಾವು ಅಭಿವೃದ್ಧಿ ಪಡಿಸುತ್ತಾ ಮುಂದಿನ ಪೀಳಿಗೆಗೆ ಕೂಡ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಸತೀಶ್ ರೆಡ್ಡಿ ಅವರು ತಿಳಿಸಿದರು.

ಹೊಂಗಸಂದ್ರ ಸರ್ಕಾರಿ ಶಾಲೆಗೆ ಹೈಟೆಕ್ ರೂಪ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಂಗಸಂದ್ರದಲ್ಲಿ ಸರ್ಕಾರಿ ಶಾಲೆಗೆ ಹೈಟೆಕ್ ರೂಪ ನೀಡಲಾಗಿದ್ದು, ಇತ್ತೀಚೆಗೆ ನೂತನ ಕಟ್ಟಡ ಲೋಕಾರ್ಪಣೆ ಮಾಡಲಾಗಿತ್ತು. ಹೊಂಗಸಂದ್ರದಲ್ಲಿ ಗಾರ್ಮೆಂಟ್ಸ್ ಸೇರಿ ಹಲವು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಕುಟುಂಬಗಳು ನೆಲೆಸಿವೆ ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಯಿಂದ ಮಕ್ಕಳಿಗೆ ಸಾಕಷ್ಟು ಅನುಕೂಲ ಆಗುತ್ತಿದೆ.
ಶಾಲೆ ಅಭಿವೃದ್ಧಿಯಿಂದ ಹೆಚ್ಚು ಅನುಕೂಲ
ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಸೌಲಭ್ಯ ಕಲ್ಪಿಸಿರುವುದು ಸಾಕಷ್ಟು ನೆರವು ನೀಡಿದ್ದು, ಸ್ಥಳೀಯರಿಗು ಕೂಡ ಹೊಂಗಸಂದ್ರ ಸರ್ಕಾರಿ ಶಾಲೆ ಅಭಿವೃದ್ಧಿ ಜೊತೆ ಹೈಟೆಕ್ ಸ್ಪರ್ಶ ನೀಡಿರುವುದು ಸಂತಸವನ್ನ ತಂದಿದೆ. ಹಾಗೇ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಾಲೇಜುಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಶಾಸಕ ಸತೀಶ್ ರೆಡ್ಡಿ ಅವರು ತಿಳಿಸಿದ್ದರು. ಒಟ್ನಲ್ಲಿ ಈ ಮೂಲಕ ಕನ್ನಡ ಶಾಲೆಗಳನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾಡುವ ಕೆಲಸ ಜೋರಾಗಿ ಸಾಗಿದ್ದು, ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ಇದು ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ.












Click it and Unblock the Notifications