Namma Metro: ಪ್ರಯಾಣಿಕರ ವಿರೋಧ: ಮೆಟ್ರೋ ಪ್ರಯಾಣದರ ಬೆಲೆ ಏರಿಕೆಯಿಂದ ಹಿಂದೆ ಸರಿದ BMRCL
ಬೆಂಗಳೂರು: ನಮ್ಮ ಮೆಟ್ರೋ ದೇಶದಲ್ಲೇ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊಂದಿದೆ. ಪದೇ ಪದೇ ಮೆಟ್ರೋ ಪ್ರಯಾಣ ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಮತ್ತಷ್ಟು ಹೊರೆ ಆಗಲಿದೆ. ನಮ್ಮ ಮೆಟ್ರೋ ಟಿಕೆಟ್ ದರ ಫೆಬ್ರವರಿಯಿಂದ ಮತ್ತಷ್ಟು ಏರಿಕೆಯಾಗುವ ಕುರಿತು ಚರ್ಚೆ ನಡೆಯುತ್ತಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಟಿಕೆಟ್ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಿಸಲು ಫೇರ್ ಫಿಕ್ಸೇಶನ್ ಕಮಿಟಿ ಶಿಫಾರಸ್ಸು ಮಾಡಿರುವ ಕಾರಣ, ದಿನನಿತ್ಯದ ಪ್ರಯಾಣಕ್ಕೆ ಮೆಟ್ರೋ ರೈಲು ಅವಲಂಬಿಸಿರುವವರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.
2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ದರಗಳನ್ನು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿತ್ತು. ಕೆಲ ಮಾರ್ಗಗಳಲ್ಲಿ ಶೇ.71ರಷ್ಟು ದರ ಹೆಚ್ಚಿಸಿ ಒಂದು ವರ್ಷ ಇನ್ನೇನು ಕಳೆಯುತ್ತಿದೆ. ಈ ಹೊತ್ತಲ್ಲಿ ಬಿಎಂಆರ್ಸಿಎಲ್ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಕೊಡುತ್ತಾ ಎನ್ನವ ಪ್ರಶ್ನೆಯೀಗ ಉದ್ಭವಿಸಿದೆ. ಪ್ರತಿವರ್ಷ ನಮ್ಮ ಮೆಟ್ರೋ ರೈಲುಗಳ ಟಿಕೆಟ್ ದರ ಪರಿಷ್ಕರಣೆಗೆ ಪ್ರಯಾಣಿಕರಿಂದ ತಿವ್ರ ಆಕ್ಷೇಪ ವ್ಯಕ್ತವಾಗಿದೆ.

ಸಾರ್ವಜನಿಕ ಸಾರಿಗೆ ಸಾಮಾನ್ಯ ನಾಗರಿಕರ ಕೈಗೆಟಕದಂತಾಗುತ್ತಿದೆ. ಮೆಟ್ರೋ ಪ್ರಯಾಣ ಅಗ್ಗವಾಗಿರಬೇಕು, ಐಷಾರಾಮಿ ಸೇವೆಯಾಗಬಾರದು ಎಂದು ದಿನನಿತ್ಯದ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಟಿಕೆಟ್ ದರ ಹೆಚ್ಚಳವಾದ್ರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಇತ್ತ ಹೊಸ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣ ಆಮೆ ಗತಿಯಲ್ಲಿ ಸಾಗುತ್ತಿರುವ ನಡುವೆ ದರ ಏರಿಕೆ ಮಾತ್ರ ಆಗುತ್ತಲೇ ಇರುವುದು ಪ್ರಯಾಣಿಕರನ್ನುಕೆರಳಿಸಿದೆ. ಹೀಗಾಗಿ ಪ್ರಯಾಣಿಕರ ತೀವ್ರ ವಿರೋಧದಿಂದಾಗಿ ಬಿಎಂಆರ್‌ಸಿಎ ಹಿಂದೆ ಸರಿದಿದೆ.
ಬಿಎಂಆರ್‌ಸಿಎಲ್ ಹೇಳಿದ್ದೇನು?
ಬಿಎಂಆರ್‌ಸಿಎಲ್ ಪ್ರತಿ ವರ್ಷ ಶೇ 5ರಷ್ಟು ಪ್ರಯಾಣದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಶಿಫಾರಸು ಮಾಡಿದ್ದರೂ ಸದ್ಯಕ್ಕೆ ಮೆಟ್ರೊ ಪ್ರಯಾಣ ದರ ಏರಿಸುವ ಚಿಂತನೆ ಇಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಇಂಧನ ವೆಚ್ಚ, ಸಿಬ್ಬಂದಿ ವೆಚ್ಚ, ನಿರ್ವಹಣೆ ವೆಚ್ಚ, ಇತರ ವೆಚ್ಚಗಳನ್ನು ಹಿಂದಿನ ವರ್ಷಕ್ಕೆ ಹೋಲಿಸಿ ಎಷ್ಟು ಹೆಚ್ಚಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಿ ಅದರ ಸರಾಸರಿಯಂತೆ ಪ್ರಯಾಣ ದರ ಹೆಚ್ಚಿಸಬೇಕು. ಇಲ್ಲವೇ ವಾರ್ಷಿಕ ಶೇ 5ರಷ್ಟು ಹೆಚ್ಚಳ ಮಾಡಬೇಕು. ಈ ಎರಡರಲ್ಲಿ ಕಡಿಮೆ ಯಾವುದೋ ಅದನ್ನೇ ಪಾಲಿಸಬೇಕು ಎಂದು ದರ ನಿಗದಿ ಸಮಿತಿ ತನ್ನ ವರದಿಯಲ್ಲಿ ತಿಳಿಸಿತ್ತು.
ಮೆಟ್ರೋ ಪ್ರಯಾಣ ದರ ನಿಗದಿ ಸಮಿತಿ ಶಿಫಾರಸು ಮಾಡಿರುವುದು ನಿಜ. ಆದರೆ, ದರ ಏರಿಕೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಸದ್ಯಕ್ಕೆ ಏರಿಕೆ ಮಾಡುವುದಿಲ್ಲ. ಮುಂದೆ ಏರಿಕೆ ಮಾಡಲು ನಿರ್ಧರಿಸಿದಾಗ ಮಾಹಿತಿ ನೀಡಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಮ್ಮ ಮೆಟ್ರೋ ದರ ಹೆಚ್ಚಳಕ್ಕಾಗಿ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ರಾಜ್ಯ ಸರ್ಕಾರವನ್ನು ಬಿಎಂಆರ್‌ಸಿಎಲ್ 2024ರಲ್ಲಿ ಕೋರಿತ್ತು. ಅದರಂತೆ ರಾಜ್ಯದ ಮೂಲಸೌಕರ್ಯ ಇಲಾಖೆಯು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕೇಂದ್ರ ಸರ್ಕಾರವು ದರ ನಿಗದಿ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ಸಾರ್ವಜನಿಕರಿಂದ, ಬಿಎಂಆರ್‌ಸಿಎಲ್ ಅಧಿಕಾರಿಗಳಿಂದ, ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿತ್ತು.
ಫೆಬ್ರವರಿ 9ರಂದು ಪರಿಷ್ಕೃತ ದರ ಜಾರಿಗೆ ತರುವಾಗ ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯು ಕೆಲವು ಶಿಫಾರಸುಗಳನ್ನು ಪಾಲಿಸಿರಲಿಲ್ಲ. ಶೇ 51.55 ರಷ್ಟು ಹೆಚ್ಚಳದ ಶಿಫಾರಸಿನ ಬದಲು ಶೇ 100ಕ್ಕೂ ಅಧಿಕ ದರ ವಿಧಿಸಿತ್ತು. ಪ್ರಯಾಣಿಕರಿಂದ ಪ್ರತಿಭಟನೆ ಎದುರಾದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ದುಪ್ಪಟ್ಟು ಇರುವಲ್ಲಿ ದರ ಇಳಿಕೆ ಮಾಡಲು ಕ್ರಮ ಕೈಗೊಂಡಿತ್ತು. ಕೊನೆಗೆ ಗರಿಷ್ಠ ಹೆಚ್ಚಳವನ್ನು ಶೇ 71.5ಕ್ಕೆ ಇಳಿಸಿತ್ತು. ಒಂದು ವರ್ಷ ಪೂರ್ಣಗೊಂಡ ಕೂಡಲೇ ಮತ್ತೆ ದರ ಹೆಚ್ಚಿಸಿದರೆ ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಕಾದು ನೋಡುವ ತಂತ್ರವನ್ನು ಬಿಎಂಆರ್‌ಸಿಎಲ್ ಅನುಸರಿಸುತ್ತಿದೆ.












Click it and Unblock the Notifications