ಬಿಎಸ್‌ವೈ ಆಗಮನ ಅಭ್ಯರ್ಥಿಗಳ ಪಟ್ಟಿ ಬದಲು!
ಬೆಂಗಳೂರು, ಜ.13 : ತಮ್ಮ ಬೆಂಬಲಿಗರೊಂದಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುತ್ತಿದ್ದಂತೆ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಕ್ಷ ಹಲವಾರು ಬದಲಾವಣೆಗಳನ್ನು ಮಾಡಿದೆ. ಕೆಜೆಪಿಯಿಂದ ಬಂದ ಯಡಿಯೂರಪ್ಪ ಅವರ ಬೆಂಬಲಿಗರಿಗೂ ಅವಕಾಶ ಮಾಡಿಕೊಡುವ ಹಿನ್ನಲೆಯಲ್ಲಿ ಚಿಕ್ಕಪುಟ್ಟ ಬದಲಾವಣೆ ಮಾಡಲಾಗಿದ್ದು, ಜ.20ರಂದು ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮೊದಲು ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿ ಕೋರ್ ಕಮಿಟಿಗೆ ನೀಡಲಾಗಿತ್ತು. ಸದ್ಯ ಅದನ್ನು ರಾಜಕೀಯ ವ್ಯವಹಾರಗಳ ಸಮಿತಿಗೆ ವಹಿಸಲಾಗಿದ್ದು, ಈ ಸಮಿತಿಗೆ ಸಿಟಿ ರವಿ, ಗೋವಿಂದ ಕಾರಜೋಳ ಅವರನ್ನು ಸೇರಿಸಿಕೊಳ್ಳುವ ಮೂಲಕ ಎರಡನೇ ಹಂತದ ನಾಯಕರನ್ನೂ ಈ ಕಾರ್ಯಕ್ಕೆ ನೇಮಿಸಲಾಗಿದೆ.[ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ]

ಜಿಲ್ಲಾ ಮಟ್ಟದ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರೊಂದಿಗೆ ಒಂದು ಸುತ್ತಿನ ಸಭೆ ಮುಗಿದಿದ್ದು, ಜ. 16 ಮತ್ತು 17ರಂದು ರಾಜ್ಯ ಮಟ್ಟದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮೊದಲ ಹಂತದ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ, ಜ. 20ರಂದು ದೆಹಲಿಯಲ್ಲಿ ಘೋಷಣೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ಪಕ್ಷ ಮೊದಲ ಹಂತದ ಪಟ್ಟಿಯಲ್ಲಿ 15ರಿಂದ 18 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿಸಲು ಪಕ್ಷ ಸಿದ್ಧತೆ ನಡೆಸಿದೆ. ಹಾಲಿ ಸಂಸದರು, ಕೆಜೆಪಿಯಿಂದ ಮರಳಿದವರು ಎಲ್ಲರಿಗೂ ಈ ಪಟ್ಟಿಯಲ್ಲಿ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಜ.16ರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದ್ದು, ಪಟ್ಟಿಯನ್ನು ಅಂತಿಮಗೊಳಿಸಿ ವರಿಷ್ಠರಿಗೆ ರವಾನಿಸಲಾಗುತ್ತದೆ.[ಎಲ್ಲಾ ಸಂಸದರಿಗೂ ಟಿಕೆಟ್ ಕಷ್ಟ]
ಪಕ್ಷದ ಮೂಲಗಳ ಮಾಹಿತಿಯಂತೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸ್ಪರ್ಧಿಸಲಿದ್ದು, ಜೊತೆ ಬಿಜೆಪಿಗೆ ಮರಳಿರುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಮೈಸೂರಿನಲ್ಲಿ ಪ್ರಮೋದಾ ದೇವಿ ಒಡೆಯರ್ ಕಣಕ್ಕೆ ಇಳಿದರೆ, ಶೋಭಾ ಕರಂದ್ಲಾಜೆ ಉತ್ತರ ಕ್ಷೇತ್ರಕ್ಕೆ ಆಗಮಿಸಲಿದ್ದು, ಸದಾನಂದ ಗೌಡರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಯಡಿಯೂರಪ್ಪ ಕ್ಷೇತ್ರ ಯಾವುದು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಹಬ್ಬಿವೆ. ಆದರೆ, ತುಮಕೂರು ಕ್ಷೇತ್ರದಲ್ಲಿ ಸಂಸದ ಬಸವರಾಜ್ ಕಾಂಗ್ರೆಸ್ ಸೇರಲು ಸಜ್ಜಾಗುತ್ತಿರುವುದರಿಂದ ತುಮಕೂರಿನಿಂದ ಯಡಿಯೂರಪ್ಪ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಯಡಿಯೂರಪ್ಪ ತಮ್ಮ ಕ್ಷೇತ್ರ ಯಾವುದು ಎಂದು ಗುಟ್ಟು ಬಿಟ್ಟು ಕೊಟ್ಟಿಲ್ಲ. [ಶಿವಮೊಗ್ಗದಿಂದ ಬಿಎಸ್ವೈ ಸ್ಪರ್ಧೆ]












Click it and Unblock the Notifications