ಎಸ್ ಟಿ ಸೋಮಶೇಖರ್, ಹೆಬ್ಬಾರ್ ಅನರ್ಹತೆಗೆ ಬಿಜೆಪಿ ನಿರ್ಧಾರ

ಬೆಂಗಳೂರು, ಡಿಸೆಂಬರ್‌ 09: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರ ವಿರುದ್ಧ ಕ್ರಮಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ವರಿಷ್ಠರಿಗೆ ಶಿಫಾರಸು ಮಾಡಲಾಗಿದೆ.

ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮತ್ತು ಅನರ್ಹಗೊಳಿಸುವ ಬಗ್ಗೆ ವರಿಷ್ಠರಿಗೆ ಮನವಿ ಮಾಡಲು ಶನಿವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

BJP s Decision On Disqualification Of ST Somashekar Shivaram Hebbar

ಈ ಕುರಿತು ಮಾಧ್ಯಮಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಹಲವಾರು ತಿಂಗಳುಗಳಿಂದ ಕೆಲವು ಮುಖಂಡರ ಅಶಿಸ್ತಿನ ನಡವಳಿಕೆಗೆ ಕಡಿವಾಣ ಹಾಕಲು ಹಾಗೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೇಂದ್ರದ ವರಿಷ್ಠರಿಗೆ ಮನವರಿಕೆ ಮಾಡಿ ಎಲ್ಲವೂ ಕೂಡ ಸುಸೂತ್ರವಾಗಿ ಸರಿಯಾದ ನಿಟ್ಟಿನಲ್ಲಿ ಹೋಗಬೇಕೆಂದು ಚರ್ಚೆ ಆಗಿದೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಬಿಜೆಪಿ ಚಿಹ್ನೆಯಡಿ ಗೆದ್ದ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರು ಕಳೆದ ಹಲವಾರು ತಿಂಗಳುಗಳಿಂದ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಜೊತೆ ಅಧಿಕೃತವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈ ವಿಚಾರವನ್ನು ಬಹಳ ಹಿಂದೆಯೂ ಚರ್ಚಿಸಲಾಗಿತ್ತು. ಇದೆಲ್ಲದಕ್ಕೂ ಇತಿಶ್ರೀ ಹಾಕಲು ಹಾಗೂ ಬಿಗಿಯಾದ ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸರ್ವಾನುಮತದಿಂದ ಕೋರಿದೆ. ರಾಷ್ಟ್ರೀಯ ಅಧ್ಯಕ್ಷರ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಇತ್ಯರ್ಥ ಮಾಡಬೇಕೆಂಬ ತೀರ್ಮಾನ ಆಗಿದೆ ಎಂದು ತಿಳಿಸಿದರು.

ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಅವರ ಅಮಾನತು ಮಾಡುವಂತೆ ಮತ್ತು ಅನರ್ಹತೆಗೆ ಕೋರಬೇಕೆಂದು ಕೋರ್ ಕಮಿಟಿ ಸದಸ್ಯರು ತಿಳಿಸಿದ್ದಾರೆ. ಎಲ್ಲವನ್ನೂ ವರಿಷ್ಠರ ಗಮನಕ್ಕೆ ತಂದು ತಕ್ಷಣ ನಿರ್ಧರಿಸುವ ನಿಟ್ಟಿನಲ್ಲಿ ನಾವು ಕೋರಲು ತೀರ್ಮಾನ ಆಗಿದೆ ಎಂದು ಹೇಳಿದರು.

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಉಚ್ಚಾಟನೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ; ಈ ವಿಚಾರ ವರಿಷ್ಠರ ಅಂಗಳದಲ್ಲಿ ಇದೆ ಎಂದರು. ಅವರು ಕೂಡ ಶಿಸ್ತು ಸಮಿತಿ ಮುಂದೆ ಹಾಜರಾಗಿ ಬಂದಿದ್ದಾರೆ. ಇದೆಲ್ಲವೂ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ಕಾರ್ಯಕರ್ತರಿಗೂ ಬೇಸರವಾಗಿದೆ. ಯಾರೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು. ಹಾದಿಬೀದಿಯಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಕುರಿತು ಚರ್ಚೆ ಆಗಿದೆ ಎಂದು ಹೇಳಿದರು.

ಕೆಲವು ಪ್ರಮುಖ ವಿಚಾರಗಳ ಕುರಿತು ಸವಿಸ್ತಾರವಾಗಿ ಚರ್ಚೆ ಆಗಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ನಮಗೆ ಯಾಕೆ ಹಿನ್ನಡೆ ಆಯಿತು ಎಂಬ ಬಗ್ಗೆ ತಿಳಿದುಕೊಳ್ಳಲು ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್.ಮಹೇಶ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ತಂಡವು ಎರಡೂ ಕ್ಷೇತ್ರಕ್ಕೆ ತೆರಳಿ ಮಾಹಿತಿ ಪಡೆಯಲಿದೆ ಎಂದರು.

ಇನ್ನೂ ಕೋರ್ ಕಮಿಟಿ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ರಾಧಾಮೋಹನ್ ದಾಸ್, ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಲ್ಲ ಕೋರ್ ಕಮಿಟಿ ಸದಸ್ಯರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+