ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ 150ಕ್ಕೂ ಹೆಚ್ಚು ಸ್ಥಾನ: ನಳಿನ್‍ಕುಮಾರ್ ಕಟೀಲ್ ವಿಶ್ವಾಸ
ಬೆಂಗಳೂರು, ಜನವರಿ 20: ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತು ಶುಕ್ರವಾರ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ ದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ನಿರಂತರವಾಗಿ ರೈತಪರ ನಿಲುವನ್ನು ಹೊಂದಿದ್ದು, ವಿವಿಧ ರೈತೋಪಯೋಗಿ ಕಾರ್ಯ ಮಾಡಿವೆ. ರೈತರ ಒಳಿತಿಗಾಗಿ ಯೋಜನೆಗಳನ್ನು ಜಾರಿಗೊಳಿಸಿವೆ ಎಂದರು.
ಹಿಂದಿನ ಕಾಂಗ್ರೆಸ್- ಯುಪಿಎ ಸರಕಾರಗಳು ರೈತರನ್ನು ಮತಬ್ಯಾಂಕಿಗೆ ಮತ್ತು ಘೋಷಣೆಗೆ ಸೀಮಿತಗೊಳಿಸಿದ್ದವು. ಬಿಜೆಪಿ ಸರಕಾರಗಳು ರೈತಪರ ನಿಲುವನ್ನು ತಳೆದು ರೈತರ ಏಳಿಗೆಗೆ ಶ್ರಮಿಸಿವೆ ಎಂದು ತಿಳಿಸಿದರು.

ಪ್ರಧಾನಿಯವರ ಕಲಬುರ್ಗಿ, ಹುಬ್ಬಳ್ಳಿ ಕಾರ್ಯಕ್ರಮಗಳಿಗೆ ನಿರೀಕ್ಷೆಗೆ ಮೀರಿ ಜನಸಾಗರ ಬಂದಿದೆ. ವಿವಿಧ ಸಮಾವೇಶಗಳಲ್ಲೂ ಗರಿಷ್ಠ ಜನರು ಸೇರುತ್ತಿದ್ದಾರೆ. ಸರ್ವ ಸ್ಪರ್ಶಿ, ಸರ್ವವ್ಯಾಪಿಯಾಗಿ ಜನರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಮೀಸಲಾತಿ ಹೆಚ್ಚಳದ ಬಳಿಕ ಜನರು ಬಿಜೆಪಿಯತ್ತ ಹರಿದುಬರುತ್ತಿದ್ದಾರೆ. ಮತ್ತೆ ಬಿಜೆಪಿ ಸರಕಾರವನ್ನು ನಾವು ರಚಿಸುತ್ತೇವೆ. ಯಡಿಯೂರಪ್ಪ ಅವರ ಮಾರ್ಗದರ್ಶನ, ಬೊಮ್ಮಾಯಿಯವರ ನೇತೃತ್ವದಲ್ಲಿ ತಂಡವಾಗಿ ನಾವು ಚುನಾವಣೆ ಎದುರಿಸಲಿದ್ದೇವೆ. ಈ ಬಿಜೆಪಿ ಪರ ವಾತಾವರಣವನ್ನು ಇನ್ನಷ್ಟು ಗಟ್ಟಿಮಾಡುವ ಕೆಲಸ ರೈತ ಮೋರ್ಚಾದಿಂದ ಆಗಬೇಕು ಎಂದು ಸೂಚಿಸಿದರು.
ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ಇನ್ನೊಂದು ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಈ ಚುನಾವಣೆಯಲ್ಲಿ ಬೇರೆ ಬೇರೆ ಪಾರ್ಟಿಯವರು ಶರ್ಟ್ ಹೊಲಿಸಿ ಕಾಯುತ್ತಿದ್ದಾರೆ. ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ. ನೋಡಿ 3 ಪಾರ್ಟಿಯಲ್ಲಿ ಮೂರು ವಿಭಿನ್ನತೆ. ರಾಷ್ಟ್ರೀಯ ಪಾರ್ಟಿ ಇನ್ನೊಂದಿದೆ. ಅವರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ ಎಂದರು.

ಇನ್ನೊಂದು ಕುಟುಂಬದ ಪಕ್ಷವಿದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ದೇಹದೊಳಗೆ ಇರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ಶಾಂತವಾಗಿ ಸಭೆ ನಡೆಯುತ್ತದೆ ಎಂದು ತಿಳಿಸಿದರು.
ಜನರು ಬಿಜೆಪಿ ಪರವಾಗಿದ್ದಾರೆ. ಈ ದೇಶವನ್ನು ಲೂಟಿ ಮಾಡಿದ, ಭಿಕ್ಷುಕರ ರಾಷ್ಟ್ರವಾಗಿ ಬಿಂಬಿಸಿದ ಪಕ್ಷ ಕಾಂಗ್ರೆಸ್ ಎಂದು ಜನರಿಗೆ ಗೊತ್ತಿದೆ. ರೈತರನ್ನು ಕಡೆಗಣಿಸಿದ್ದು ಕಾಂಗ್ರೆಸ್. ರೈತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ರೈತರ ಬದುಕು ಹಸನು ಮಾಡಿದ ಪಕ್ಷ ಬಿಜೆಪಿ, ಅಟಲ್ ಬಿಹಾರಿ ವಾಜಪೇಯಿಜಿ, ನರೇಂದ್ರ ಮೋದಿಜಿ ಮತ್ತು ಯಡಿಯೂರಪ್ಪ ಅವರು ಎಂದು ಜನರಿಗೆ ಗೊತ್ತಿದೆ ಎಂದರು.
ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರಕಾರಗಳು ಮಾಡಿದ ಸಾಧನೆ ಮತ್ತು ರೈತಪರವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಜನರು ಮತ್ತು ರೈತರಿಗೆ ತಿಳಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಕೇಂದ್ರ ಸರಕಾರವು ಅದ್ಭುತವಾಗಿ ಕೆಲಸ ಮಾಡುತ್ತಿದೆ. ಸಮಗ್ರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಡಬಲ್ ಎಂಜಿನ್ ಸರಕಾರವು ಶ್ರಮಿಸಿದೆ. ಕೇಂದ್ರ ಸರಕಾರದ ಕೃಷಿಕರ ಪರ ಅನುದಾನವು 8 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಅಪೇಕ್ಷಿತರು ಭಾಗವಹಿಸಿದ್ದರು.












Click it and Unblock the Notifications